ಹೈದರಾಬಾದ್(ಅ.18): ಬಾಲಿವುಡ್ ನಟ ರಣವೀರ್ ಸಿಂಗ್ ಅವರ ‘ಲೇಡೀಸ್ ವರ್ಸಸ್ ರಿಕ್ಕಿ ಬಹ್ಲ್’ ಸಿನಿಮಾ ಮಾದರಿಯಲ್ಲೇ ಹುಡುಗಿಯರನ್ನು ಪಟಾಯಿಸಿ, ನಂಬಿಸಿ, ನಂತರ ವಂಚಿಸುತ್ತಿದ್ದ ಹೈದರಾಬಾದ್‌ನ ಯುವಕನೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಅಂದ ಹಾಗೆ, ಇವನಿಗಿರುವ ಗರ್ಲ್‌ಫ್ರೆಂಡ್'ಗಳೆಷ್ಟು ಗೊತ್ತಾ? ಬರೋಬ್ಬರಿ 350!

ಜನಪ್ರಿಯ ವೈವಾಹಿಕ ವೆಬ್‌ಸೈಟ್ ಮೂಲಕ ಯುವತಿಯರ ಸ್ನೇಹ ಬೆಳೆಸುತ್ತಿದ್ದ ಕೆ ವೆಂಕಟರತ್ನ ರೆಡ್ಡಿ, ಅವರನ್ನು ಮದುವೆಯಾಗಿ, ನಂತರ ದುಡ್ಡು ಲಪಟಾಯಿಸಿ, ಕೈಕೊಟ್ಟು ಹೋಗುತ್ತಿದ್ದ. ಪಾಸ್‌ಪೋರ್ಟ್ ಮತ್ತು ಬ್ಯುಸಿನೆಸ್ ವೀಸಾ ಪಡೆದು, ವಿಶಾಖಪಟ್ಟಣದಿಂದ ಅಮೆರಿಕಕ್ಕೆ ತೆರಳಿದ್ದ ಈತ ತನ್ನ ಪ್ರೊಫೈಲ್ ಅನ್ನು ವೆಬ್‌ಸೈಟ್‌ನಲ್ಲಿ ಹಾಕಿದ್ದ. ಅಲ್ಲಿ ಎನ್ನಾರೈ ಕುಟುಂಬವೊಂದರ ಹೆಣ್ಣುಮಗಳನ್ನು ವಿವಾಹವಾಗಿ, 20 ದಿನಗಳಲ್ಲೇ 20 ಲಕ್ಷ ದೋಚಿ ಪರಾರಿಯಾಗಿದ್ದ. ಆ ಕುಟುಂಬದ ದೂರಿನ ಮೇರೆಗೆ, ಹೈದರಾಬಾದ್ ಪೊಲೀಸರ ಸೆಂಟ್ರಲ್ ಕ್ರೈಂ ಸ್ಟೇಷನ್(ಸಿಸಿಎಸ್) ಘಟಕ ಕಾರ್ಯಾಚರಣೆ ನಡೆಸಿ, ಈತನನ್ನು ಆಂಧ್ರದ ಗುಂಟೂರು ಜಿಲ್ಲೆಯಲ್ಲಿ ಬಂಸಿದ್ದು, ಈಗ ಆತ ಕಂಬಿ ಎಣಿಸುತ್ತಿದ್ದಾನೆ.

ಮಾತಲ್ಲೇ ಮೋಡಿ

ಆಂಗ್ಲಭಾಷೆಯನ್ನು ಲೀಲಾಜಾಲವಾಗಿ ಮಾತಾಡಬಲ್ಲ, ಸಂವಹನ ಕಲೆಯಲ್ಲಿ ಪಳಗಿರುವ ರೆಡ್ಡಿ, ಯುವತಿಯರನ್ನು ಮಾತಿನಲ್ಲೇ ಮೋಡಿ ಮಾಡಿ, ಹಲವರನ್ನು ಮದುವೆಯಾಗಿ ವಂಚಿಸಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಇವನಿಗೆ 350 ಮಂದಿ ಗರ್ಲ್‌ಫ್ರೆಂಡ್' ಗಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತೆಲಂಗಾಣ ಮತ್ತು ಆಂಧ್ರದಲ್ಲಿ 9 ಪ್ರಕರಣಗಳಲ್ಲಿ ರೆಡ್ಡಿ ಪೊಲೀಸರಿಗೆ ಬೇಕಾಗಿದ್ದ.

ನಿರ್ಮಾಪಕರ ಹೆದರಿಸಿದ್ದ

2012ರಲ್ಲಿ ಕಂದಾಯ ಸೇವಾ ಅಕಾರಿ ಎಂದು ಹೇಳಿ ಇದೇ ರೆಡ್ಡಿ ತೆಲುಗು ಸಿನಿಮಾ ನಿರ್ಮಾಕಪರಾದ ಸಿ ಕಲ್ಯಾಣ್ ಹಾಗೂ ರಮೇಶ್ ಬಾಬು ಅವರಿಂದ ಹಣಕ್ಕೆ ಬೇಡಿಕೆ ಇಟ್ಟು, ಬಂತನಾಗಿದ್ದ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ತನಿಖೆಗೆ ಹೊಸ ಆಯಾಮ

‘‘ರೆಡ್ಡಿ ವಿರುದ್ಧ ಅಷ್ಟೊಂದು ಪ್ರಕರಣಗಳಿದ್ದರೂ, ಅವನಿಗೆ ಯಾವ ಆಧಾರದಲ್ಲಿ ಪಾಸ್‌ಪೋರ್ಟ್ ನೀಡಲಾಯಿತು ಎಂದು ಪ್ರಶ್ನಿಸಿ ವಿಶಾಖಪಟ್ಟಣ ಪೊಲೀಸರಿಗೆ ಪತ್ರ ಬರೆಯುತ್ತೇವೆ. ಜತೆಗೆ, ವೈವಾಹಿಕ ವೆಬ್‌ಸೈಟ್ ಅನ್ನು ಸಂಪರ್ಕಿಸಿ, ಆತನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದೇವೆ. ವೆಬ್‌ಸೈಟ್‌ನಿಂದ ಅವನ ಪ್ರೊಫೈಲ್ ಅನ್ನು ತೆಗೆದುಹಾಕುವಂತೆಯೂ ಸೂಚಿಸುತ್ತೇವೆ,’’ ಎಂದು ಸೈಬರ್ ಕ್ರೈಂ ಎಸಿಪಿ ರಘುವೀರ್ ತಿಳಿಸಿದ್ದಾರೆ. ಇದೇ ವೇಳೆ, ರೆಡ್ಡಿ ಕೆನಡಾದ ಮಹಿಳೆಯೊಬ್ಬಳಿಗೂ ವಂಚಿಸಲು ಹೊಂಚು ಹಾಕುತ್ತಿದ್ದ ವಿಚಾರ ತಿಳಿದುಬಂದಿದ್ದು, ಆಕೆಯನ್ನೂ ಸಂಪರ್ಕಿಸಲು ಯತ್ನಿಸಲಾಗಿದೆ ಎಂದೂ ಅವರು ಹೇಳಿದ್ದಾರೆ. ಸದ್ಯ ಆರೋಪಿ ವೆಂಕಟರತ್ನ ರೆಡ್ಡಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಸಿಸಿಎಸ್ ಪೊಲೀಸರು ಅವನನ್ನು ತಮ್ಮ ವಶಕ್ಕೆ ಪಡೆಯಲು ಯತ್ನಿಸುತ್ತಿದ್ದು, ಆತ ಇನ್ನೆಷ್ಟು ಮಂದಿಗೆ ವಂಚಿಸಿದ್ದಾನೆ ಎಂಬೆಲ್ಲ ಮಾಹಿತಿ ಸಂಗ್ರಹಿಸಲು ಮುಂದಾಗಿದೆ ಎಂದೂ ರಘುವೀರ್ ತಿಳಿಸಿದ್ದಾರೆ.