"ನಾವು ಮಗುವನ್ನು ರಕ್ಷಿಸಿದಾಗ ಅದರು ಅಳುತ್ತಿತ್ತು. ಅದರ ತಾಯಿಗೆ ಅದನ್ನು ಒಪ್ಪಿಸಿದರೂ ಅಳು ನಿಲ್ಲಲೇ ಇಲ್ಲ. ಆಗ ನಾನು ನನ್ನ ತೋಳಲ್ಲಿ ಮಗುವನ್ನು ಎತ್ತಿಕೊಂಡು ಮೆದುವಾಗಿ ತಟ್ಟಿದೆ. ಆಗ ಮಗು ಅಳು ನಿಲ್ಲಿಸಿತು. ನಂತರ ನನ್ನತ್ತ ನೋಡಿದ ಮಗು ಬಾಯಿ ತೆರೆದು ಸ್ಮೈಲ್ ಮಾಡಿತು. ಅಂಥ ದೊಡ್ಡ ನಗುವನ್ನು ನಾನು ಅದೇ ಮೊದಲು ನೋಡಿದ್ದು," ಎಂದು ಇನ್ಸ್'ಪೆಕ್ಟರ್ ಸಂತೃಪ್ತ ಭಾವನೆ ವ್ಯಕ್ತಪಡಿಸುತ್ತಾರೆ.
ಹೈದರಾಬಾದ್(ಅ. 11): ಜನರಿಗೆ ಭದ್ರತೆ, ರಕ್ಷಣೆ ಒದಗಿಸುವ ಪೊಲೀಸರ ಕಾರ್ಯವನ್ನು ಎಷ್ಟು ಶ್ಲಾಘಿಸಿದರೂ ಸಾಲದು. ಪೊಲೀಸ್ ಕೆಲಸ ಬರೀ ಹೊಟ್ಟೆಪಾಡಿಗೆ ಮಾಡುವ ಕಾಯಕವಲ್ಲ. ಅದೊಂದು ಸೇವೆ. ಈ ಸೇವೆಯು ಸಾರ್ಥಕವಾಗುವುದು ಅದಕ್ಕೆ ಸಿಗುವ ಸ್ಪಂದನೆಯಿಂದ. ಹೈದರಾಬಾದ್'ನ ನಾಮ್'ಪಲ್ಲಿ ಪೊಲೀಸ್ ಠಾಣೆಯ ಇನ್ಸ್'ಪೆಕ್ಟರ್ ಆರ್.ಸಂಜಯ್'ಕುಮಾರ್ ಮತ್ತಿತರ ಪೊಲೀಸರಿಗೂ ಇಂಥದ್ದೊಂದು ಅನುಭವಾಗಿದೆ. ಅಪಹರಣಕ್ಕೊಳಗಾದ 4 ತಿಂಗಳ ಹಸುಳೆಯನ್ನು ರಕ್ಷಿಸಿ ಅದರ ತಾಯಿಗೆ ಒಪ್ಪಿಸಿದ ಪೊಲೀಸರಿಗೆ ಆ ಮಗುವಿನ ಮಂದಹಾಸವೇ ದೊಡ್ಡ ಉಡುಗೊರೆಯಾಗಿದೆ.
ಮಗುವಿನ ನಗು ಮತ್ತು ಅದರ ತಾಯಿಯ ಆನಂದಬಾಷ್ಪಕ್ಕಿಂತ ತಮಗೆ ಬೇರೆ ಉಡುಗೊರೆ ಬೇಕಿಲ್ಲ ಎಂದು ಇನ್ಸ್'ಪೆಕ್ಟರ್ ಸಂಜಯ್ ಹೇಳುತ್ತಾರೆ.
"ನಾವು ಮಗುವನ್ನು ರಕ್ಷಿಸಿದಾಗ ಅದರು ಅಳುತ್ತಿತ್ತು. ಅದರ ತಾಯಿಗೆ ಅದನ್ನು ಒಪ್ಪಿಸಿದರೂ ಅಳು ನಿಲ್ಲಲೇ ಇಲ್ಲ. ಆಗ ನಾನು ನನ್ನ ತೋಳಲ್ಲಿ ಮಗುವನ್ನು ಎತ್ತಿಕೊಂಡು ಮೆದುವಾಗಿ ತಟ್ಟಿದೆ. ಆಗ ಮಗು ಅಳು ನಿಲ್ಲಿಸಿತು. ನಂತರ ನನ್ನತ್ತ ನೋಡಿದ ಮಗು ಬಾಯಿ ತೆರೆದು ಸ್ಮೈಲ್ ಮಾಡಿತು. ಅಂಥ ದೊಡ್ಡ ನಗುವನ್ನು ನಾನು ಅದೇ ಮೊದಲು ನೋಡಿದ್ದು," ಎಂದು ಇನ್ಸ್'ಪೆಕ್ಟರ್ ಸಂತೃಪ್ತ ಭಾವನೆ ವ್ಯಕ್ತಪಡಿಸುತ್ತಾರೆ.
ಆ ಮಗು ನಗುವುದು ಫೋಟೋದಲ್ಲಿ ಸೆರೆಯಾಗಿರಬಹುದು. ಆದರೆ, ಆ ಸನ್ನಿವೇಶವನ್ನು ನಮ್ಮ ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ. ಇಂಥ ಕ್ಷಣಗಳೇ ನಮಗೆ ಸ್ಫೂರ್ತಿ ಎಂದು ಸಂಜಯ್ ಕುಮಾರ್ ಹೇಳುತ್ತಾರೆ.
ಏನಿದು ಪ್ರಕರಣ?
ಕಳೆದ ವಾರದ ರಾತ್ರಿಯಂದು ಹುಮೇರಾ ಬೇಗಮ್(21) ಎಂಬ ಭಿಕ್ಷುಕಿ ತನ್ನ 4 ತಿಂಗಳ ಮಗು ಫೈಜಾನ್ ಖಾನ್ ಜೊತೆ ಫುಟ್ಬಾತ್'ನಲ್ಲಿ ಮಲಗಿರುತ್ತಾಳೆ. ಬೆಳಗ್ಗೆ 4:30ಕ್ಕೆ ಎಚ್ಚರವಾದಾಗ ಮಗು ಇರುವುದಿಲ್ಲ. ಕೆಲ ಹೊತ್ತು ಹುಡುಕಾಡಿದ ಬಳಿಕ ಆ ತಾಯಿಯು ನಾಮ್'ಪಲ್ಲಿ ಪೊಲೀಸ್ ಠಾಣೆಗೆ ದೂರು ಕೊಡುತ್ತಾಳೆ.
ತತ್'ಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಆ ಸ್ಥಳದ ಸಮೀಪವಿರುವ ಸಿಸಿಟಿವಿಗಳನ್ನು ಪರಿಶೀಲಿಸುತ್ತಾರೆ. ಅದರ ಪ್ರಕಾರ ಇಬ್ಬರು ವ್ಯಕ್ತಿಗಳ ಮೇಲೆ ಸಂಶಯ ಬರುತ್ತದೆ. ಅವರ ಫೋಟೋಗಳನ್ನಿಟ್ಟುಕೊಂಡು ಶೋಧಿಸುತ್ತಾರೆ. ಅವರಿಬ್ಬರೂ ಅದೇ ಪ್ರದೇಶದ ಮೊಹಮ್ಮದ್ ಮುಷ್ತಾಕ್(42) ಮತ್ತು ಮೊಹಮ್ಮದ್ ಯೂಸುಫ್(25) ಎಂಬುದು ಗೊತ್ತಾಗುತ್ತದೆ. ಮುಷ್ತಾಕ್'ನು ಆಟೋ ಡ್ರೈವರ್ ಆಗಿರುತ್ತಾನೆ. ಇಬ್ಬರೂ ಕೂಡ ಆಗಾಪುರದ ದರ್ಗಾ ಶಾ ಎಂಬಲ್ಲಿ ವಾಸಿಸುತ್ತಿರುತ್ತಾರೆ. ಪೊಲೀಸರು ದರ್ಗಾದ ಬಳಿ ಕಣ್ಗಾವಲಿರಿಸುತ್ತಾರೆ. ಪೊಲೀಸರ ನಿರೀಕ್ಷೆಯಂತೆ ಮುಷ್ತಾಕ್ ಮತ್ತು ಯೂಸುಫ್ ಇಬ್ಬರೂ ಮಗುವಿನೊಂದಿಗೆ ದರ್ಗಾಕ್ಕೆ ಬರುತ್ತಾರೆ. ಕೂಡಲೇ ಅವರನ್ನು ಪೊಲೀಸರು ಬಂಧಿಸುತ್ತಾರೆ. ಅಪಹರಣಕ್ಕೊಳಗಾದ 15 ಗಂಟೆಯೊಳಗೇ ಮಗುವನ್ನು ಪೊಲೀಸರು ರಕ್ಷಿಸುತ್ತಾರೆ.
ಮಗುವಿನ ಮಾರಾಟಕ್ಕೆ ಸಂಚು:
ಮುಷ್ತಾಕ್ ಮತ್ತು ಯೂಸುಫ್ ಅವರನ್ನು ವಿಚಾರಣೆಗೊಳಪಡಿಸಿದಾಗ ಪೊಲೀಸರಿಗೆ ಕೆಲ ಮಹತ್ವದ ಮಾಹಿತಿ ಸಿಕ್ಕಿವೆ. ಮುಷ್ತಾಕ್ ಆ ಮಗುವನ್ನು ಮಾರಾಟ ಮಾಡಲು ಯತ್ನಿಸಿರುತ್ತಾನೆ. ಮುಷ್ತಾಕ್'ನ ಸಂಬಂಧಿ ಮೊಹಮ್ಮದ್ ಘೌಸ್ ಅವರಿಗೆ ಸಂತಾನವಿರುವುದಿಲ್ಲ. ಮಗು ಸಾಕಲು ಕಷ್ಟವಾಗಿರುವ, ಮಾರಲು ಒಪ್ಪುವ ಒಬ್ಬ ಬಡಕುಟುಂಬದಿಂದ ಮಗುವನ್ನು ತಂದು ತಮಗೆ ದತ್ತು ನೀಡುವಂತೆ ಘೌಸ್ ಮನವಿ ಮಾಡಿಕೊಂಡಿರುತ್ತಾರೆ. ಇದಕ್ಕೆ ಮುಷ್ತಾಕ್ ಒಪ್ಪಿಕೊಂಡಿರುತ್ತಾನೆ. ತನಗೆ ಇಂಥ ಹಲವು ಬಡ ಕುಟುಂಬಗಳು ಗೊತ್ತಿದ್ದು, ಅವರಿಂದ ಮಗು ಪಡೆದು ತರುತ್ತೇನೆಂದು ಭರವಸೆ ಕೊಡುತ್ತಾನೆ.
ಆದರೆ, ಮುಷ್ತಾಕ್ ತನ್ನ ಸ್ನೇಹಿತ ಯೂಸುಫ್ ಜೊತೆ ಸೇರಿ ಹುಮೇರಾ ಬೇಗಂಳ ಮಗುವನ್ನು ಕಿಡ್ನಾಪ್ ಮಾಡಿ ಘೌಸ್ ಬಳಿ ಕೊಂಡೊಯ್ಯುತ್ತಾರೆ. ಯೂಸುಫ್'ನನ್ನು ಆ ಮಗುವಿನ ಚಿಕ್ಕಪ್ಪನೆಂದು ಪರಿಚಯಿಸುತ್ತಾನೆ. ಆದರೆ, ಘೌಸ್'ಗೆ ಏನೋ ಅನುಮಾನವಾಗಿ, ಮಗುವಿನ ಅಪ್ಪ-ಅಮ್ಮರನ್ನು ತಾನು ಖುದ್ದಾಗಿ ಭೇಟಿಯಾಗಬೇಕೆಂದು ಆಗ್ರಹಿಸುತ್ತಾನೆ. ಅಲ್ಲಿಂದ ಮುಷ್ತಾಕ್ ಮತ್ತು ಯೂಸುಫ್ ಅವರಿಬ್ಬರೂ ಮಗುವಿನ ಸಮೇತ ದರ್ಗಾಕ್ಕೆ ವಾಪಸ್ ಹೋಗುತ್ತಾರೆ. ಅಲ್ಲಿ ಪೊಲೀಸರು ಅವರನ್ನು ಬಂಧಿಸುತ್ತಾರೆ.
ಇನ್ನು, ಪೊಲೀಸರ ಕಾರ್ಯಾಚರಣೆ ಮತ್ತು ಮಾನವೀಯತೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಸೇರಿದಂತೆ ಹಲವಾರು ಮಂದಿಯು ಪೊಲೀಸರ ಕಾರ್ಯವನ್ನು ಮನದುಂಬಿ ಶ್ಲಾಘಿಸಿದ್ದಾರೆ.
ಮಾಹಿತಿ: ಇಂಡಿಯನ್ ಎಕ್ಸ್'ಪ್ರೆಸ್
