ಅಪಘಾತದಿಂದ ಸಾವು ಸಂಭವಿಸಿದಾಗ ನೀಡುವ ಪರಿಹಾರದ ಆಧಾರದ ಮೇಲೆ ಈ ಪ್ರಕರಣಕ್ಕೆ ಪರಿಹಾರ ನಿರ್ಧಾರ | ಮೃತ ಮಹಿಳೆಯ ಪತಿ ಮತ್ತು ಮಕ್ಕಳಿಗೆ ರೂ.23.54 ಲಕ್ಷ ದಂಡ ಪಾವತಿಸುವಂತೆ ಆದೇಶಿಸಿದ ಗ್ರಾಹಕ ನ್ಯಾಯಾಲಯ
ಬೆಂಗಳೂರು (ನ.02): ಬೆನ್ನುಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆಗೆ ಸೇರಿದ್ದ ಮಹಿಳೆ ಶಸ್ತ್ರಚಿಕಿತ್ಸೆ ಪಡೆದಾಗ್ಯೂ ಮೃತಪಟ್ಟಿದ್ದರು. ಇದಕ್ಕೆ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಹಕರ ನ್ಯಾಯಾಲಯದ ಮೊರೆ ಹೋದ ಆ ಮಹಿಳೆಯ ಪತಿ ಕೇಸು ಗೆದ್ದಿದ್ದಾರೆ. ಹೀಗಾಗಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಮೃತ ಮಹಿಳೆಯ ಪತಿ ಮತ್ತು ಮಕ್ಕಳಿಗೆ ರೂ.23.54 ಲಕ್ಷ ಹಣವನ್ನು ದಂಡದ ರೂಪದಲ್ಲಿ ಪಾವತಿಸಬೇಕಾಗಿ ಬಂದಿದೆ.
ವಿದ್ಯಾರಣ್ಯಪುರದ ರಿಜೆನ್ಸಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾಗಿದ್ದ ಕೆ.ವಿದ್ಯಾಪ್ರಸಾದ್ (45) ಕಳೆದ 2010ರ ಫೆಬ್ರವರಿ 11ರಂದು ಮೃತಪಟ್ಟಿದ್ದರು. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಅವರ ಪತಿ, ಹೈಕೋರ್ಟ್ ವಕೀಲರಾಗಿರುವ ಎಚ್‌ಎನ್‌ಎಂ ಪ್ರಸಾದ ಅವರು ಆರೋಪಿಸಿದ್ದರು.
‘‘ಬೆನ್ನು ಮೂಳೆ ಶಸ್ತ್ರ ಚಿಕಿತ್ಸೆ ವೇಳೆ ಮೃತ ರೋಗಿಗೆ ಹೃದಯ ಸಂಬಂಧಿ ಸಮಸ್ಯೆ ಇರುವ ಬಗೆಗೆ ಶಸ್ತ್ರ ಚಿಕಿತ್ಸೆಗೂ ಮೊದಲೇ ಸಂಬಂಧಿಸಿದ ವೈದ್ಯರಿಗೆ ಮಾಹಿತಿ ಇತ್ತು. ಆದಾಗ್ಯೂ ಹೃದಯ ಸಂಬಂಧಿ ಚಿಕಿತ್ಸಾ ಘಟಕ ವ್ಯವಸ್ಥೆ ಇಲ್ಲದೇ ಬೆನ್ನಿನ ಶಸ್ತ್ರ ಚಿಕಿತ್ಸೆ ನಡೆಸಿದ್ದರು'' ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಈ ಪ್ರಕರಣದಲ್ಲಿ ನರರೋಗ ತಜ್ಞರೊಬ್ಬರು ಶಸ್ತ್ರ ಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದರೂ ಅವರು ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ಪಾತ್ರ ವಹಿಸಿರಲಿಲ್ಲ ಎಂದು ತೀರ್ಮಾನಿಸಿ, ಅವರನ್ನು ದಂಡ ಪ್ರಕ್ರಿಯೆಯಿಂದ ಕೈಬಿಟ್ಟಿದೆ.
ಪ್ರಸಾದ್ ಹಾಗೂ ಅವರ ಇಬ್ಬರು ಅಪ್ರಾಪ್ತ ಮಕ್ಕಳು 2011ರಲ್ಲಿ ಪ್ರಕರಣ ಕುರಿತು ರಾಜ್ಯ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು.
‘‘ಸಂತ್ರಸ್ತ ಮಹಿಳೆಯ ಅಕಾಲಿಕ ಸಾವಿನಿಂದ ಆಕೆಯ ಪತಿ ಹಾಗೂ ಮಕ್ಕಳಿಗೆ ಆಗಿರುವ ನಷ್ಟವನ್ನು ಭರಿಸಲು ಸಾಧ್ಯವಿಲ್ಲವಾದರೂ ಅವರು ಪರಿಹಾರಕ್ಕೆ ಅರ್ಹರಾಗಿರುತ್ತಾರೆ. ಹೀಗಾಗಿ ಆಸ್ಪತ್ರೆ ಮತ್ತು ವೈದ್ಯರು ಪರಿಹಾರ ಭರಿಸತಕ್ಕದ್ದು'' ಎಂದು ಆಯೋಗದ ಆದೇಶ ತಿಳಿಸಿದೆ. ಆಯೋಗವು ಮೋಟರ್ ವೆಹಿಕಲ್ ಆ್ಯಕ್ಟ್ ಅಡಿಯಲ್ಲಿ ಅಪಘಾತದಿಂದ ಸಾವು ಸಂಭವಿಸಿದಾಗ ನೀಡುವ ಪರಿಹಾರದ ಆಧಾರದ ಮೇಲೆ ಈ ಪ್ರಕರಣದ ಪರಿಹಾರವನ್ನು ನಿರ್ಧರಿಸಿದೆ. (ಕನ್ನಡಪ್ರಭ ವಾರ್ತೆ)
