ಮಾಜಿ ಪತ್ನಿ ಕೊಲ್ಕತ್ತಾದಿಂದ ಬೆಂಗಳೂರಿಗೆ ಹೋಗುತ್ತಿದ್ದಾಳೆ ಎಂಬ ಕಾರಣಕ್ಕೆ ಅವಳನ್ನು ಪೊಲೀಸರು ಬಂಧಿಸಲಿ ಎಂಬ ಕುತಂತ್ರದಿಂದ ವ್ಯಕ್ತಿಯೊಬ್ಬ ತನ್ನ ಮಾಜಿ ಪತ್ನಿಗೆ ‘ಮಾನವ ಬಾಂಬ್‌' ಪಟ್ಟ ಕಟ್ಟಿದ ಸಿನೀಮಿಯ ಘಟನೆ ಭಾನುವಾರ ಸಂಜೆ ನಡೆದಿದೆ.

ಬೆಂಗಳೂರು(ಜೂ.27): ಮಾಜಿ ಪತ್ನಿ ಕೊಲ್ಕತ್ತಾದಿಂದ ಬೆಂಗಳೂರಿಗೆ ಹೋಗುತ್ತಿದ್ದಾಳೆ ಎಂಬ ಕಾರಣಕ್ಕೆ ಅವಳನ್ನು ಪೊಲೀಸರು ಬಂಧಿಸಲಿ ಎಂಬ ಕುತಂತ್ರದಿಂದ ವ್ಯಕ್ತಿಯೊಬ್ಬ ತನ್ನ ಮಾಜಿ ಪತ್ನಿಗೆ ‘ಮಾನವ ಬಾಂಬ್‌' ಪಟ್ಟ ಕಟ್ಟಿದ ಸಿನೀಮಿಯ ಘಟನೆ ಭಾನುವಾರ ಸಂಜೆ ನಡೆದಿದೆ.

ಭಾನುವಾರ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಆಗಮನ ಹಾಗೂ ಸೋಮವಾರ ರಂಜಾನ್‌ ಹಿನ್ನೆಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ ಬಳಿಕ ವ್ಯಕ್ತಿಯೊಬ್ಬ ತನ್ನ ಮಾಜಿ ಪತ್ನಿ ಮೇಲಿನ ಕೋಪಕ್ಕೆ ‘ಮಾಸ್ಟರ್‌ ಕಂಟ್ರೋಲ್‌ ರೂಮ್‌'ಗೆ ಹುಸಿ ಕರೆ ಮಾಡಿರುವುದು ಪತ್ತೆಯಾಗಿದೆ. ಈ ಸಂಬಂಧ ಏರ್‌ಪೋರ್ಟ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.

ಏನಿದು ಘಟನೆ?:

ಕೊಲ್ಕತ್ತಾ ಮೂಲದ ದೇವೇಂದ್ರ ಪಾಂಚಲ್‌ ಮತ್ತು ಬುನಾಲಿ ಪಾಂಚಲ್‌ ಹಲವು ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿಗೆ ಹದಿಮೂರು ವರ್ಷದ ಪುತ್ರ ಇದ್ದಾನೆ. ಪತಿಯ ಕಿರುಕುಳದಿಂದ ಬೇಸತ್ತಿದ್ದ ಪತ್ನಿ ಕೆಲ ವರ್ಷಗಳ ಹಿಂದೆ ಪತಿಯಿಂದ ವಿಚ್ಛೇದನ ಪಡೆದಿದ್ದರು. ಪತಿಯಿಂದ ವಿಚ್ಛೇದನ ಪಡೆದ ಮಹಿಳೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಪುತ್ರ ಕೊಲ್ಕತ್ತಾದಲ್ಲೇ ನೆಲೆಸಿದ್ದ.

ಪತ್ನಿ ದೂರವಾಗಿದ್ದರಿಂದ ಕೋಪಗೊಂಡಿದ್ದ ಮಾಜಿ ಪತಿ ದೇವೇಂದ್ರ ಪಾಂಚಲ್‌ ಮಾಜಿ ಪತ್ನಿಗೆ ಕರೆ ಮಾಡಿ ಆಗಾಗ್ಗೆ ಬೆದರಿಸುತ್ತಿದ್ದ. ಇತ್ತೀಚೆಗೆ ಮಹಿಳೆ ಕೊಲ್ಕತ್ತಾಗೆ ತೆರಳಿದ್ದರು. ಮಾಜಿ ಪತ್ನಿ ಭಾನುವಾರ ಕೊಲ್ಕತ್ತಾದಿಂದ ಬೆಂಗಳೂರಿಗೆ ತೆರಳುತ್ತಿದ್ದಾಳೆ ಎಂಬ ವಿಚಾರವನ್ನು ದೇವೇಂದ್ರ ತಿಳಿದಿದ್ದ. ಮಾಜಿ ಪತ್ನಿಯ ಮೇಲಿನ ಕೋಪಕ್ಕೆ ಹೇಗಾದರೂ ಮಾಡಿ ಮಾಜಿ ಪತ್ನಿಯನ್ನು ಪೊಲೀಸರಿಂದ ಬಂಧಿಸಬೇಕೆಂದು ಕುತಂತ್ರ ರೂಪಿಸಿದ್ದ. ಅದರಂತೆ ಭಾನುವಾರ ಮಧ್ಯಾಹ್ನ 2.35ರ ಸುಮಾರಿಗೆ ಬೆಂಗಳೂರು ಪೊಲೀಸ್‌ ಆಯುಕ್ತ ಕಚೇರಿಯಲ್ಲಿರುವ ಮಾಸ್ಟರ್‌ ಕಂಟ್ರೋಲ್‌ ರೂಮ್‌ಗೆ ಕರೆ ಮಾಡಿ ಬಾಂಗ್ಲಾದೇಶದ ‘ಮಾನವ ಬಾಂಬ್‌' ಕೊಲ್ಕತ್ತಾ ಮೂಲಕ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಾಳೆ. 6.30ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ಕೂಡಲೇ ಆಕೆ ಸ್ಫೋಟಿಸಿಕೊಳ್ಳಲಿದ್ದಾಳೆ ಎಂದು ಹೇಳಿ ಕರೆ ತುಂಡರಿಸಿದ್ದ.

ಮಾಸ್ಟರ್‌ ಕಂಟ್ರೋಲ್‌ ರೂಮ್‌ ಸಿಬ್ಬಂದಿ ಕೂಡಲೇ ಸಂಬಂಧಪಟ್ಟಅಧಿಕಾರಿಗಳಿಗೆ ಅನಾಮಧೇಯ ಕರೆ ಬಗ್ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಏರ್‌ಪೋರ್ಟ್ ಪೊಲೀಸರು ವಿಮಾನ ನಿಲ್ದಾಣದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಮಾಹಿತಿ ನೀಡಿ ಬಿಗಿ ಬಂದೋಬಸ್ತ್ ಮಾಡಿದ್ದರು. ಕೂಡಲೇ ಬಾಂಬ್‌ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಸಿಬ್ಬಂದಿ ಸ್ಥಳಕ್ಕೆ ತೆರಳಿ ಇಡೀ ವಿಮಾನ ನಿಲ್ದಾಣವನ್ನು ತಪಾಸಣೆ ನಡೆಸಿದ್ದರು.

6.30ಕ್ಕೆ ಬಂದ ವಿಮಾನ ಕೂಡ ತಪಾಸಣೆ ನಡೆಸಲಾಯಿತು. ಇನ್ನು ಮಾಸ್ಟರ್‌ ಕಂಟ್ರೋಲ್‌ ರೂಮ್‌ಗೆ ಬಂದಿರುವ ಸಂಖ್ಯೆ ಪರಿಶೀಲನೆ ನಡೆಸಿದಾಗ ಕೊಲ್ಕತ್ತಾದಿಂದ ಬಂದಿರುವುದು ಪತ್ತೆಯಾಗಿದೆ. ಆರೋಪಿ ಬಂಧನಕ್ಕೆ ಒಂದು ತಂಡ ಕೊಲ್ಕತ್ತಾಗೆ ತೆರಳಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.