ಗುರುಗ್ರಾಮ[ಮೇ.22]: ಪತಿಯ ಮನೆಯವರು ನೀಡುವ ವರದಕ್ಷಿಣೆ ಕಿರುಕುಳಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುವುದು ಎಲ್ಲೆಡೆ ಕೇಳಿಬರುವ ಸಾಮಾನ್ಯ ಸಂಗತಿ. ಆದರೆ ಗುರುಗ್ರಾಮದಲ್ಲಿ ವಧುದಕ್ಷಿಣೆ ಕಿರುಕುಳಕ್ಕೆ ಪತಿಯೇ ಆತ್ಮಹತ್ಯೆ ಮಾಡಿಕೊಂಡ ವಿನೂತನ ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿಯ ಮನೆಯವರಿಂದ ಪದೇ ಪದೇ ಹಣ ನೀಡುವಂತೆ ಕೇಳಿಬಂದ ಕಿರುಕುಳದಿಂದ ಬೇಸತ್ತ 23 ವರ್ಷದ ಯುವಕನೊಬ್ಬ ಭಾನುವಾರ ತನ್ನ ಮನೆಯಲ್ಲೇ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಾವಿಗೆ ಶರಣಾಗುವ ಮುನ್ನ, ಈ ಆತ ಪತ್ರವೊಂದನ್ನು ಬರೆದಿಟ್ಟು ಅದರಲ್ಲಿ ಹೆಣ್ಣು ಕೊಟ್ಟಮಾವ, ಅತ್ತೆ, ಪತ್ನಿಯ ಮೂವರು ಸೋದರರು ಹಾಗೂ ಮತ್ತೋರ್ವ ಸಂಬಂಧಿಯ ಹೆಸರನ್ನು ಬರೆದಿಟ್ಟಿದ್ದು, ನನ್ನ ಸಾವಿಗೆ ಇವರೆಲ್ಲಾ ಕಾರಣ ಎಂದು ಆರೋಪಿಸಿದ್ದಾನೆ.

ಪ್ರಕರಣ ಹಿನ್ನೆಲೆ: ಗುರುಗ್ರಾಮದಲ್ಲಿ ಕೂಲಿ ಕೆಲಸ ಮಾಡುವ ಯುವಕನೊಬ್ಬ 2 ವರ್ಷಗಳ ಹಿಂದೆ ಸಮೀಪದ ಪಟೌಡಿಯ ಯುವತಿಯನ್ನು ವಿವಾಹವಾಗಿದ್ದ. ಆಗಿನಿಂದಲೂ ಪತ್ನಿಯ ಮನೆಯವರು ಯುವಕನಿಗೆ ಪದೇ ಪದೇ ಹಣ ನೀಡುವಂತೆ ಒತ್ತಾಯಿಸುತ್ತಿದ್ದರು. ಹಣ ಕೊಡಲು ಒಪ್ಪದಿದ್ದಾಗ ಆತನ ಮನೆಗೆ ಬಂದು ಬೆದರಿಕೆ ಹಾಕುತ್ತಿದ್ದರು, ಇಲ್ಲವೇ ಹಲ್ಲೆ ಕೂಡಾ ನಡೆಸುತ್ತಿದ್ದರು. 2018ರಲ್ಲಿ ದಂಪತಿಗೆ ಮಗು ಜನನವಾದ ಬಳಿಕವೂ ಪತ್ನಿಯ ಮನೆಯವರಿಂದ ಕಿರುಕುಳ ಮುಂದುವರೆದಿತ್ತು. ಈ ನಡುವೆ ಕಳೆದ ಮೇ ತಿಂಗಳಿನಿಂದ ಪತ್ನಿ, ತನ್ನ ತವರು ಮನೆಯಲ್ಲೇ ವಾಸವಿದ್ದಳು.

ಕಳೆದ ಶನಿವಾರ ಯುವಕ, ಪತ್ನಿಯನ್ನು ಕರೆತರಲೆಂದು ಆಕೆಯ ತವರು ಮನೆಗೆ ಹೋಗಿದ್ದ. ಭಾನುವಾರ ಅಲ್ಲಿಂದ ಮರಳಿದ್ದ ಯುವಕ ಖಿನ್ನನಾಗಿದ್ದ. ಬಳಿಕ ಆತ ಮನೆಯಲ್ಲಿ ತನ್ನ ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆ ಕುರಿತು ಯುವಕನ ಮನೆಯವರು ದೂರು ದಾಖಲಿಸಿದ್ದು, ಅದರ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.