ಬೆಂಗಳೂರು [ಜು.22] :  ಉದ್ಯೋಗ ಕೊಡಿಸುವುದಾಗಿ ಪಂಜಾಬ್‌ ಮೂಲದ ಮೂವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಮಲೇಷ್ಯಾಕ್ಕೆ ಮಾನವ ಕಳ್ಳ ಸಾಗಾಣೆ ಮಾಡುತ್ತಿದ್ದ ಆರೋಪಿಯೊಬ್ಬನನ್ನು ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ.

ಪಂಜಾಬ್‌ನ ಅಮೃತ್‌ಸರ ಮೂಲದ ರಾಜ್‌ಕುಮಾರ್‌ (26) ಬಂಧಿತ ಆರೋಪಿ. ಪಂಜಾಬ್‌ನವರೇ ಆದ ಮೂವರು ಯುವಕರನ್ನು ಪೊಲೀಸರು ರಕ್ಷಿಸಿದ್ದು, ಆರೋಪಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ರಾಜ್‌ಕುಮಾರ್‌ ಮಾನವ ಕಳ್ಳಸಾಗಣೆ ಮಾಡುವುದನ್ನೇ ದಂಧೆಯನ್ನಾಗಿಸಿಕೊಂಡಿದ್ದ. ಬಡವರನ್ನು ಗುರಿಯಾಗಿಸಿಕೊಂಡು ಆರೋಪಿ ವಿದೇಶದಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡುತ್ತಿದ್ದ ಕೆಲಸ ಕೊಡಿಸಲು ಲಕ್ಷಗಟ್ಟಲೇ ಹಣ ಪಡೆಯುತ್ತಿದ್ದ. ಅದರಂತೆ ಪಂಜಾಬ್‌ ಮೂಲದ ಮೂವರು ಯುವಕರಿಂದ ತಲಾ .70 ಸಾವಿರ ಪಡೆದಿದ್ದ. ಮೂವರು ಯುವಕರನ್ನು ಆರೋಪಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಲೇಷ್ಯಾಕ್ಕೆ ವಿಮಾನ ಹತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಿಮಾನ ನಿಲ್ದಾಣ ಪೊಲೀಸರು ಮೂವರು ಯುವಕರನ್ನು ರಕ್ಷಿಸಿ, ಆರೋಪಿಯನ್ನು ಬಂಧಿಸಿದ್ದಾರೆ. ರಾಜ್‌ಕುಮಾರ್‌ ವಿರುದ್ಧ ದೇಶದ ಹಲವೆಡೆ ಮಾನವ ಕಳ್ಳಸಾಗಾಣೆ ಪ್ರಕರಣಗಳಿವೆ. ಜೈಲಿಗೆ ಹೋಗಿ ಬಂದರೂ ದಂಧೆಯನ್ನು ಬಿಟ್ಟಿರಲಿಲ್ಲ.

ವಿದೇಶಕ್ಕೆ ಹೋದ ಅಮಾಯಕರನ್ನು ಮನೆ ಕೆಲಸ, ಬಾರ್‌ಗಳಲ್ಲಿ ಕೆಲಸಕ್ಕೆ ಸೇರಿಸುತ್ತಿದ್ದ. ವಿದೇಶಕ್ಕೆ ಹೋದವರು ಪುನಃ ಭಾರತಕ್ಕೆ ಬರಲು ಆಗುತ್ತಿರಲಿಲ್ಲ. ಹಣದ ಆಸೆಗೆ ಈ ರೀತಿ ಕೃತ್ಯ ಎಸಗುತ್ತಿದ್ದ. ಈತನ ಹಿಂದೆ ದೊಡ್ಡ ಜಾಲ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.