ಬೆಂಗಳೂರು :  ವಿದೇಶದಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ನೇಪಾಳ ಮಹಿಳೆಯರನ್ನು ವಿಮಾನದಲ್ಲಿ ಬೆಂಗಳೂರಿಗೆ ಕರೆ ತಂದು ಬಳಿಕ ವಿದೇಶಕ್ಕೆ ಮಾನವ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ನೇಪಾಳ ಗ್ಯಾಂಗ್‌ವೊಂದು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದು, 35 ಮಹಿಳೆಯರನ್ನು ರಕ್ಷಿಸಲಾಗಿದೆ.

ನೇಪಾಳದವರಾದ ಕಿಶನ್‌ ಗಾಲೆ (29), ಲಕ್ಷ್ಮಣ್‌ ಗಾಲೆ (29), ರಾಕೇಶ್‌ ಶರ್ಮ (38) ಹಾಗೂ ತಾಗ್‌ ಬಹದ್ದೂರ್‌ ತಾಪ (32) ಬಂಧಿತರು. ಆರೋಪಿಗಳಿಂದ ಎರಡು ಲ್ಯಾಪ್‌ಟಾಪ್‌, ಪ್ರಿಂಟರ್‌, ನೇಪಾಳದ ನಕಲಿ ಸೀಲ್‌, ಎರಡು ಪಾಸ್‌ಪೋರ್ಟ್‌ ಹಾಗೂ ಸುಳ್ಳು ದಾಖಲಾತಿ ಪ್ರತಿಗಳನ್ನು ಜಪ್ತಿ ಮಾಡಲಾಗಿದೆ.

ಪ್ರಮುಖ ಆರೋಪಿಗಳಾದ ವೆಂಕಟೇಶ್ವರರಾವ್‌ ಹಾಗೂ ಬಿ.ನವರಾಜ್‌ ಎಂಬ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಬಡ ಮಹಿಳೆಯರೇ ಟಾರ್ಗೆಟ್‌: ರಕ್ಷಣೆ ಮಾಡಲಾಗಿರುವ ನೇಪಾಳದ ಮಹಿಳೆಯರೆಲ್ಲಾ ಸುಮಾರು 22 ರಿಂದ 35 ವರ್ಷ ವಯಸ್ಸಿನವರಾಗಿದ್ದು, ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಈ ಪೈಕಿ ಸುಮಾರು ಹತ್ತು ಮಹಿಳೆಯರು ಪತಿಯಿಂದ ದೂರುವಾಗಿದ್ದು, ಇಂತಹವರನ್ನು ಗುರಿಯಾಸಿಕೊಂಡು ದಂಧೆಕೋರರು ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಮಹಿಳೆಯರಿಗೆ ಆಮಿಷವೊಡ್ಡುತ್ತಿದ್ದರು. ಆರೋಪಿಗಳ ಮಾತು ನಂಬಿದ ಮಹಿಳೆಯರು ತಮ್ಮ ಜೀವನ ಕಟ್ಟಿಕೊಳ್ಳುವ ಸಲುವಾಗಿ ದಂಧೆಕೋರರ ಬಲೆಗೆ ಬೀಳುತ್ತಿದ್ದರು. ಯಾವುದೇ ಅನುಮಾನ ಬಾರದಿರಲಿ ಎಂಬ ಕಾರಣಕ್ಕೆ ಕೆಲಸ ಕೊಡಿಸಲು ಹಣ ವ್ಯಯಿಸಬೇಕಾಗುತ್ತದೆ ಎಂದು ಹೇಳುತ್ತಿದ್ದ ಗ್ಯಾಂಗ್‌ ಪ್ರತಿಯೊಬ್ಬ ಮಹಿಳೆಯರಿಂದ . 40 ಸಾವಿರದಿಂದ . 2 ಲಕ್ಷದ ತನಕ ಹಣ ಪಡೆದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ವಿಮಾನದಲ್ಲಿ ರಾಜಧಾನಿಗೆ ಎಂಟ್ರಿ: ಹೀಗೆ ಬಲೆಗೆ ಬಿದ್ದ ಮಹಿಳೆಯರಿಗೆ ಸ್ಥಳೀಯವಾಗಿ ಪಾಸ್‌ಪೋರ್ಟ್‌ ಮಾಡಿಸಿ ನಗರಕ್ಕೆ ಕರೆ ತರಲಾಗುತ್ತಿತ್ತು. ಕೆಲವರು ನೇಪಾಳದಿಂದ ದೆಹಲಿಗೆ ಬಸ್‌ ಮೂಲಕ ಬರುತ್ತಾರೆ. ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಮಹಿಳೆಯರನ್ನು ಆರೋಪಿಗಳು ಕರೆ ತರುತ್ತಿದ್ದರು. ನಂತರ ನಗರದಲ್ಲಿದ್ದ ಏಜೆಂಟ್‌ ಬಳಿ ಚರ್ಚೆ ಮಾಡಿ ವಿದೇಶಕ್ಕೆ ಕಳುಹಿಸಿ ಕೊಡುತ್ತಿದ್ದರು. ಹೀಗೆ ನೇಪಾಳ ಮಹಿಳೆಯರನ್ನು ನಾಲ್ಕು ದಿನಗಳ ಹಿಂದೆ ಕರೆ ತಂದು ಕಾಟನ್‌ಪೇಟೆ ಠಾಣಾ ವ್ಯಾಪ್ತಿಯ ಲಾಡ್ಜ್‌ವೊಂದರಲ್ಲಿ ಇರಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಸಿಸಿಬಿ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಅರಬ್‌ ದೇಶಗಳಿಗೆ ಸಾಗಣೆ

ಮಹಿಳೆಯರನ್ನು ಕರೆಸಿರುವ ರಾಷ್ಟ್ರಗಳ ಪೈಕಿ ಸಿಂಗಾಪುರ, ಕುವೈತ್‌, ದುಬೈ, ವುಮೆನ್‌ ರಾಷ್ಟ್ರಗಳಿಗೆ ಪೂರೈಸಲಾಗಿದೆ. ಈ ಪೈಕಿ ಹೆಚ್ಚಾಗಿ ಅರಬ್‌ ದೇಶಗಳಿಗೆ ಹೆಚ್ಚಾಗಿ ಪೂರೈಸಲಾಗಿದೆ. ಸುಮಾರು ಎರಡು ವರ್ಷಗಳಿಂದ ಆರೋಪಿಗಳು ಈ ರೀತಿ ಮಹಿಳೆಯನ್ನು ವಿದೇಶಕ್ಕೆ ಸಾಗಾಣೆ ಮಾಡುತ್ತಿದ್ದರು. ಅಲ್ಲಿಗೆ ಹೋದ ಮಹಿಳೆಯರಿಗೆ ನಿಜವಾಗಿಯೂ ಕೆಲಸವನ್ನು ಕೊಡಿಸುತ್ತಿದ್ದರೂ ಬೇರೆ ರೀತಿ ಉಪಯೋಗಿಸಿಕೊಳ್ಳುತ್ತಿದ್ದಾರೋ ಎಂಬುದು ವಿಚಾರಣೆ ಬಳಿಕ ತಿಳಿದು ಬರಲಿದೆ ಎಂದು ತನಿಖಾಧಿಕಾರಿಗಳು ವಿವರಿಸಿದರು.

ಇನ್ನು ಕೆಲವೊಂದು ದಾಖಲೆಗಳನ್ನು ಸ್ವತಃ ಸಿದ್ಧಪಡಿಸಿ ವಿದೇಶಕ್ಕೆ ಕಳುಹಿಸುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ನೇಪಾಳದ ನಕಲಿ ಮುದ್ರೆಗಳು ಪತ್ತೆಯಾಗಿದೆ ಎಂದರು.