ಕೃಷಿಯಿಂದ ಮಾರುಕಟ್ಟೆಗೆ ಬರುವಷ್ಟರಲ್ಲಿ 10 ಲಕ್ಷ ಟನ್'ಗಳಷ್ಟು ಈರುಳ್ಳಿ, 22 ಲಕ್ಷ ಟನ್ ಟೊಮೆಟೋ ಹಾಳಾಗುತ್ತವೆ. ಬರೋಬ್ಬರಿ 50 ಲಕ್ಷ ಮೊಟ್ಟೆಗಳು ಒಡೆದುಹೋಗುತ್ತವೆ ಅಥವಾ ಕೆಟ್ಟುಹೋಗುತ್ತವೆ.
ನವದೆಹಲಿ(ಸೆ. 15): ಭಾರತದಲ್ಲಿ ಪ್ರತೀ ವರ್ಷ ಸುಮಾರು 67 ಮಿಲಿಯನ್ ಟನ್'ಗಳಷ್ಟು ಆಹಾರಗಳು ಹಾಳಾಗಿಹೋಗುತ್ತಿವೆ ಎಂಬ ಅಚ್ಚರಿಯ ವರದಿಯೊಂದು ಬಹಿರಂಗಗೊಂಡಿದೆ. 67 ಮಿಲಿಯನ್ ಟನ್, ಅಂದರೆ ಸುಮಾರು 6.7 ಕೋಟಿ ಟನ್, ಅಥವಾ 6,700 ಕೋಟಿ ಕಿಲೋಗಳಷ್ಟು ಆಹಾರಗಳು ಪೋಲಾಗುತ್ತಿವೆ. ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ ಈ ಹಾಳಾಗುವ ಆಹಾರಗಳ ಮೌಲ್ಯ ಬರೋಬ್ಬರಿ 92 ಸಾವಿರ ಕೋಟಿ ರೂಪಾಯಿ. ಇಷ್ಟು ಪ್ರಮಾಣದ ಆಹಾರವು ಬ್ರಿಟನ್'ನಂತಹ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕಿಂತ ಹೆಚ್ಚಿನದ್ದಾಗಿದೆ. ಕರ್ನಾಟಕದಂತಹ ರಾಜ್ಯಗಳ ಎಲ್ಲ ನಾಗರಿಕರಿಗೂ ಇಡೀ ವರ್ಷ ಉಣಿಸಬಹುದಾದಷ್ಟು ಆಹಾರದ ಪ್ರಮಾಣ ಇದಾಗಿದೆ. ಕೃಷಿ ಇಲಾಖೆಯ ಸಂಶೋಧನಾ ಅಂಗವಾದ ಸಿಫೆಟ್ ಎಂಬ ಸಂಸ್ಥೆಯು ಈ ಅಧ್ಯಯನ ನಡೆಸಿ ಅಂಕಿ-ಅಂಶ ಬಿಡುಗಡೆ ಮಾಡಿದೆ.
ಆಹಾರಗಳು ಹಾಳಾಗುವುದಂದರೇನು?
ರೈತ ಬೆಳೆಯುವ ಜಮೀನಿನಿಂದ ಆರಂಭಗೊಂಡು ಮಾರುಕಟ್ಟೆ ತಲುಪುವಷ್ಟರಲ್ಲಿ ಸಾಕಷ್ಟು ಆಹಾರ ಪದಾರ್ಥಗಳು ಹಾಳಾಗಿಹೋಗುತ್ತವೆ. ಕೊಳೆತು ಹೋಗುವುದು, ಹುಳ ಹಿಡಿಯುವುದು, ಒಡೆದುಹೋಗುವುದು ಇತ್ಯಾದಿ ಹಾನಿ ಸಂಭವಿಸುತ್ತದೆ. ದೇಶದ ಆಹಾರ ಭದ್ರತೆಗೆ ಬಹಳ ಮುಖ್ಯಭಾಗವೆನಿಸಿರುವ ಹಣ್ಣು, ತರಕಾರಿ ಮತ್ತು ಬೇಳೆಕಾಳುಗಳು ಅತೀ ಹೆಚ್ಚು ಹಾಳಾಗುತ್ತವೆ ಎಂದು ಈ ಅಧ್ಯಯನ ತಿಳಿಸುತ್ತದೆ.
ಕೃಷಿಯಿಂದ ಮಾರುಕಟ್ಟೆಗೆ ಬರುವಷ್ಟರಲ್ಲಿ 10 ಲಕ್ಷ ಟನ್'ಗಳಷ್ಟು ಈರುಳ್ಳಿ, 22 ಲಕ್ಷ ಟನ್ ಟೊಮೆಟೋ ಹಾಳಾಗುತ್ತವೆ. ಬರೋಬ್ಬರಿ 50 ಲಕ್ಷ ಮೊಟ್ಟೆಗಳು ಒಡೆದುಹೋಗುತ್ತವೆ ಅಥವಾ ಕೆಟ್ಟುಹೋಗುತ್ತವೆ.
ಸರಿಯಾದ ಸಂಗ್ರಹಣಾ ವ್ಯವಸ್ಥೆ ಇಲ್ಲದಿರುವುದರಿಂದ ಈ ಸಮಸ್ಯೆ ಇದೆ ಎನ್ನಲಾಗಿದೆ. ಆದರೆ, ನಾವು ಅಡುಗೆ ಮಾಡಿ ಉಪಯೋಗಿಸದೇ ಹೊರಗೆ ಬಿಸಾಡುವ ಆಹಾರದ ಪ್ರಮಾಣದ ಬಗ್ಗೆ ಮಾಹಿತಿ ಸದ್ಯಕ್ಕೆ ಸಿಕ್ಕಿಲ್ಲ.
