ಆರ್ ಆರ್ ನಗರದಿಂದ ಹುಚ್ಚಾ ವೆಂಕಟ್ ಸ್ಪರ್ಧೆ

First Published 8, Apr 2018, 11:48 AM IST
Huccha Venkat Contest Election
Highlights

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಚಿತ್ರ ನಟ ‘ಹುಚ್ಚ’ ವೆಂಕಟ್ ಘೋಷಿಸಿದ್ದಾರೆ.

ಬೆಂಗಳೂರು : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಚಿತ್ರ ನಟ ‘ಹುಚ್ಚ’ ವೆಂಕಟ್ ಘೋಷಿಸಿದ್ದಾರೆ.

ಇತ್ತೀಚೆಗಷ್ಟೇ ಸ್ಥಳೀಯ ಶಾಸಕ ಮುನಿರತ್ನ ಅವರು ಕುಕ್ಕರ್ ಹಂಚಿದ್ದಾರೆ ಎಂದು ವೆಂಕಟ್ ಆರೋಪಿಸಿದ್ದರು. ಇದರ ಬೆನ್ನಲ್ಲೇ ವೆಂಕಟ್ ಅವರು ಮುನಿರತ್ನ ವಿರುದ್ಧ ಸ್ಪರ್ಧೆ ಘೋಷಿಸಿರುವುದು ವಿಶೇಷ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಒಂದೇ ನಾಣ್ಯದ ಮುಖಗಳಾಗಿವೆ. ಹೀಗಾಗಿ ನಾನು ಯಾವುದೇ ಪಕ್ಷದಿಂದ ಸ್ಪರ್ಧಿಸದೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ತಿಳಿಸಿದರು. ‘ಜನರಿಗೆ ಯಾವುದೇ ಆಮಿಷವೊಡ್ಡುವುದಿಲ್ಲ, ಹಣ-ಹೆಂಡ ಹಂಚುವುದಿಲ್ಲ ಮತ್ತು ಕೈ ಮುಗಿದು ಮತ ಹಾಕಿ ಎಂದು ಕೇಳುವುದಿಲ್ಲ. ಆದರೆ, ಜನರು ವಿಶ್ವಾಸವಿಟ್ಟು ಆಯ್ಕೆ ಮಾಡುತ್ತಾರೆ ಎಂಬ ನಂಬಿಕೆ ಇದೆ. ಜನರು ಮತ ಹಾಕಿ ಗೆಲ್ಲಿಸಿದರೆ, ಜನಸೇವೆ ಮಾಡಲು ಸದಾ ಸಿದ್ಧನಿದ್ದೇನೆ’ ಎಂದರು.

ಅಮಿತ್ ಶಾ ಬಗ್ಗೆ ಕಿಡಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರ್ನಾಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮೈಸೂರಿನ ರಾಣಿ ಪ್ರಮೋದಾದೇವಿ ಅವರ ನಿವಾಸಕ್ಕೆ ಭೇಟಿ ನೀಡಿ, ಮಾತುಕತೆ ನಡೆಸಿದ ತಕ್ಷಣ ಮೈಸೂರಿನ ಎಲ್ಲರೂ ಬಿಜೆಪಿ ಮತ ಹಾಕುವುದಿಲ್ಲ. ಇದೆಲ್ಲಾ ಚುನಾವಣೆಯ ಗಿಮಿಕ್ ಎಂದು ಆರೋಪಿಸಿದರು.

loader