ಕಳೆದ ಕೆಲ ದಿನಗಳಿಂದ ಒಂದು ಭಯಂಕರ ಆಟ ಪೋಷಕರ ನಿದ್ದೆಗೆಡಿಸಿದೆ. ಅದು ಅಂತಿಂತ ಆಟವಲ್ಲ, ಹದಿಹರೆಯದವರ ಪ್ರಾಣಕ್ಕೆ ಕುತ್ತು ತರುವ ಡೆಡ್ಲಿ ಆಟ. ಹಲವು ಮಕ್ಕಳ ಜೀವ ನುಂಗಿರುವ ಈ ಡೆಡ್ಲಿ ಗೇಮ್ ಇದೀಗ ಕರ್ನಾಟಕಕ್ಕೂ ಕಾಲಿಟ್ಟಿದೆ. ಎಲ್ಲಪ್ಪಾ ಅದು ಅಂತೀರಾ? ಈ ಸ್ಟೋರಿ ನೋಡಿ.
ಹುಬ್ಬಳ್ಳಿ: ಸಾಮಾಜಿಕ ಜಾಲತಾಣಗಳಲ್ಲಿ ‘ಬ್ಲೂವೇಲ್ ಚಾಲೆಂಜ್’ ಎಂಬ ಆಟವೊಂದು ಆತ್ಮಹತ್ಯೆಗೆ ಪ್ರಚೋದನೆ ನೀಡುವ ಮೂಲಕ ವಿಶ್ವದಾದ್ಯಂತ ದೊಡ್ಡ ಸಂಚಲನವೇ ಸೃಷ್ಟಿಸಿದೆ. ಇದೀಗ ಈ ಡೆಡ್ಲಿ ಸೂಸೈಡ್ ಗೇಮ್ ರಾಜ್ಯಕ್ಕೂ ಕಾಲಿಟ್ಟಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯ ಕೇಂದ್ರೀಯ ವಿದ್ಯಾಲಯದ 6ನೇ ತರಗತಿ ವಿದ್ಯಾರ್ಥಿನಿಯೊಬ್ಬಳು, ಮನೆಯಲ್ಲಿ ಬ್ಲೂವೇಲ್ ಗೇಮ್'ನಿಂದಾಗಿ ಕೈಕೊಯ್ದುಕೊಂಡಿದ್ದಾಳೆ. ಈ ವಿಷಯವನ್ನ ಸ್ವತಃ ಬಾಲಕಿಯೇ ಶಾಲೆಯಲ್ಲಿ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದಾಳೆ. ವಿಷಯ ತಿಳಿದ ಶಿಕ್ಷಕರು ಬಾಲಕಿಯನ್ನ ವಿಚಾರಿಸಿದಾಗ ಮನೆಯಲ್ಲಿ ಗೇಮ್ ಆಡುವವಾಗ ಕೈ ಕೊಯ್ದುಕೊಂಡಿದ್ದನ್ನು ಒಪ್ಪಿಕೊಂಡಿದ್ದಾಳೆ.
ಈ ಬಾಲಕಿ ಸಾರಿಗೆ ಇಲಾಖೆ ಚಾಲಕರೊಬ್ಬರ ಪುತ್ರಿ ಎಂಬುದು ಗೊತ್ತಾಗಿದೆ. ಬಾಲಕಿ ತನ್ನ ತಂದೆಯ ಮೊಬೈಲ್'ನಲ್ಲಿ ಗೇಮ್ ಡೌನ್'ಲೋಡ್ ಮಾಡಿಕೊಂಡು ಆಟವಾಡುತ್ತಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಮೊದಲು ಸುವರ್ಣನ್ಯೂಸ್'ನಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ರೂಪಕೂಮರ್ ದತ್ತಾ ಅವರು ಅವಳಿ ನಗರದ ಪೊಲೀಸ್ ಆಯುಕ್ತರಿಗೆ ಮಾಹಿತಿ ಕೇಳಿದ್ದಾರೆ. ಬಳಿಕ ಪೊಲೀಸರ ಭೇಟಿ ವೇಳೆ ಬಾಲಕಿ ತನಗೇನೂ ಆಗಿಲ್ಲ ಎಂದು ಹೇಳಿದ್ದಾಳೆ. ಆದ್ರೆ ಘಟನೆಯಿಂದ ಬಾಲಕಿಯ ಕುಟುಂಬದವರು ಆತಂಕಗೊಂಡಿದ್ದು, ಮಾಧ್ಯಮಗಳೆದುರು ಮಾತನಾಡಲು ನಿರಾಕಾರಿಸಿದ್ದಾರೆ.
ಒಟ್ಟಾರೆ, ಹದಿಹರೆಯದವರನ್ನು ಆತ್ಮಹತ್ಯೆಯಂಥ ಕೃತ್ಯಕ್ಕೆ ಪ್ರಚೋದನೆ ನೀಡುವ ಆಟ ಈ ‘ಬ್ಲೂ ವೇಲ್ ಸುಸೈಡ್ ಚಾಲೆಂಜ್’. ಗೆಲ್ಲುವ ಸಲುವಾಗಿ ಪ್ರಾಣವನ್ನೇ ಲೆಕ್ಕಿಸದೆ ಸವಾಲುಗಳನ್ನು ಎದುರಿಸಲು ಅಮಾಯಕ ಯುವಕ-ಯುವತಿಯರು ಮುಂದಾಗುತ್ತಿರೋದು ಪೋಷಕರಲ್ಲಿ ಆತಂಕ ಸೃಷ್ಟಿಸಿದೆ.
- ಗುರುರಾಜ್ ಹೂಗಾರ್, ಸುವರ್ಣ ನ್ಯೂಸ್, ಹುಬ್ಬಳ್ಳಿ
