ಒಟ್ಟು ₹ 141 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ.₹ 35 ಕೋಟಿ ವೆಚ್ಚದಲ್ಲಿ ನೂತನ ಟರ್ಮಿನಲ್ ಕಟ್ಟಡ, ಎಟಿಸಿ ಕಟ್ಟಡ, ಅಗ್ನಿಶಾಮಕ ಕೇಂದ್ರ ಹಾಗೂ ಇಲೆಕ್ಟ್ರೀಶಿಯನ್ ಕಾಮಗಾರಿ ಹಾಗೂ ₹ 59 ಕೋಟಿ ವೆಚ್ಚದಲ್ಲಿ ರನ್ ವಿಸ್ತರಣೆ ಕಾಮಗಾರಿ ಪೂರ್ಣಗೊಳಿಸಲಾಗಿದೆ.ದೊಡ್ಡ ಬೋಯಿಂಗ್ ವಿಮಾನ ಇಳಿಯಲು ಹಾಗೂ ಹಾರಲು ಈಗಿನ ವಿಮಾನ ನಿಲ್ದಾಣ ಅನುಕೂಲವಾಗಿದೆ.ಎಲ್ಲ ಹವಾಮಾನಕ್ಕೂ ಹೊಂದಿಕೊಳ್ಳುವಂತಹ ನಿಲ್ದಾಣ ಇದಾಗಿದೆ.
ಹುಬ್ಬಳ್ಳಿ: ನಗರದ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಕಾಮಗಾರಿ ಪೂರ್ಣಗೊಂಡಿದ್ದು, ಅತ್ಯಾಧುನಿಕ ಟರ್ಮಿನಲ್ ಲೋಕಾರ್ಪಣೆಯ ದಿನ ಈ ವಾರದಲ್ಲಿ ನಿಗದಿಗೊಳ್ಳಲಿದೆ.
ಅ. 2ರಂದು ನೂತನ ಟರ್ಮಿನಲ್ ಉದ್ಘಾಟನೆಗಾಗಿ ಭಾರತೀಯ ವಿಮಾನಯಾನ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆಯಾದರೂ, ಇದುವರೆಗೂ ಪ್ರಾಧಿಕಾರದಿಂದ ಪ್ರತಿಕ್ರಿಯೆ ಬಂದಿಲ್ಲ. ಈ ವಾರದಲ್ಲಿ ಉದ್ಘಾಟನೆಯ ದಿನ ನಿಗದಿಯಾಗುವ ಸಾಧ್ಯತೆ ಇದ್ದು, ಆನಂತರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಂತೆ ಇಲ್ಲಿಯೂ ದೊಡ್ಡ ವಿಮಾನಗಳು ಬಂದಿಳಿಯಬಹುದಾಗಿದೆ.
ಒಟ್ಟು ₹ 141 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ. ₹ 35 ಕೋಟಿ ವೆಚ್ಚದಲ್ಲಿ ನೂತನ ಟರ್ಮಿನಲ್ ಕಟ್ಟಡ, ಎಟಿಸಿ ಕಟ್ಟಡ, ಅಗ್ನಿಶಾಮಕ ಕೇಂದ್ರ ಹಾಗೂ ಇಲೆಕ್ಟ್ರೀಶಿಯನ್ ಕಾಮಗಾರಿ ಹಾಗೂ ₹ 59 ಕೋಟಿ ವೆಚ್ಚದಲ್ಲಿ ರನ್ ವಿಸ್ತರಣೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ದೊಡ್ಡ ಬೋಯಿಂಗ್ ವಿಮಾನ ಇಳಿಯಲು ಹಾಗೂ ಹಾರಲು ಈಗಿನ ವಿಮಾನ ನಿಲ್ದಾಣ ಅನುಕೂಲವಾಗಿದೆ.
ಎಲ್ಲ ಹವಾಮಾನಕ್ಕೂ ಹೊಂದಿಕೊಳ್ಳುವಂತಹ ನಿಲ್ದಾಣ ಇದಾಗಿದ್ದು, ಒಂದೇ ಸಮಯಕ್ಕೆ 2 ದೊಡ್ಡ ಹಾಗೂ 4 ಸಣ್ಣ ವಿಮಾನಗಳನ್ನು ನಿಲುಗಡೆಗೊಳಿಸಬಹುದಾಗಿದೆ. ಈ ಮೊದಲು 1600 ಮೀಟರ್ ಇದ್ದ ರನ್‌ವೇ ಉದ್ದವನ್ನು 2700 ಮೀಟರ್‌ಗೆ ವಿಸ್ತರಿಸಲಾಗಿದೆ. ಸದ್ಯ ಹುಬ್ಬಳ್ಳಿ-ಬೆಂಗಳೂರು ಮಧ್ಯೆ 65 ಆಸನಗಳ ಸಾಮರ್ಥ್ಯದ ವಿಮಾನ ಹಾರಾಟ ನಡೆಸುತ್ತಿದೆ.
ವಿಮಾನ ಉದ್ಯಮ ನಡೆಸುವವರಲ್ಲಿ ಸಣ್ಣ ವಿಮಾನಗಳ ಸಂಖ್ಯೆ ಕಡಿಮೆ ಇರುತ್ತದೆ. ಹಾಗಾಗಿ ಹುಬ್ಬಳ್ಳಿಯಿಂದ ಹೆಚ್ಚು ವಿಮಾನಗಳ ಹಾರಾಟ ಸಾಧ್ಯವಾಗಿರಲಿಲ್ಲ. ಇದೀಗ 150ರಿಂದ 185 ಆಸನಗಳ ಸಾಮರ್ಥ್ಯವುಳ್ಳ ದೊಡ್ಡ ವಿಮಾನಗಳು ಸಹ ಇಲ್ಲಿಂದ ಹಾರಾಟ ನಡೆಸಬಹುದಾಗಿದೆ. ಹುಬ್ಬಳ್ಳಿಯಿಂದ ವಿವಿಧ ನಗರಗಳಿಗೆ ವಿಮಾನ ಸೌಲಭ್ಯ ಒದಗಿಸುವುದಕ್ಕಾಗಿ ಈಗಾಗಲೇ ಹಲವಾರು ವಿಮಾನ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಮಾತುಕತೆ ಪ್ರಗತಿ ಹಂತದಲ್ಲಿದೆ. ಹಳೇ ಟರ್ಮಿನಲ್ ಕಟ್ಟಡದಲ್ಲಿ ಕಾರ್ಗೊ ವಿಮಾನಗಳ ನಿಲ್ದಾಣ ಮಾಡುವ ಉದ್ದೇಶ ಇದೆ.
ಸುಮಾರು 2600 ಚದರ ಅಡಿ ವಿಸ್ತೀರ್ಣದಲ್ಲಿ ನೂತನ ಟರ್ಮಿನಲ್ ಕಟ್ಟಡ ನಿರ್ಮಿಸಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂಡುಬರುವ ಎಲ್ಲ ಸೌಲಭ್ಯಗಳನ್ನು ಈ ನೂತನ ಟರ್ಮಿನಲ್‌ನಲ್ಲಿ ಒದಗಿಸಲಾಗಿದೆ. ಹಳೇಯ ಟರ್ಮಿನಲ್ ಕಟ್ಟಡಕ್ಕೆ ಹೋಲಿಸಿದರೆ, ನೂತನ ಕಟ್ಟಡದಲ್ಲಿ ಎಲ್ಲ ರೀತಿಯ ಸೌಲಭ್ಯಗಳಿವೆ. ನೂತನ ಟರ್ಮಿನಲ್ ಕೇಂದ್ರೀಯ ಹವಾನಿಯಂತ್ರಿತ (ಸಿಎಸಿ)ವ್ಯವಸ್ಥೆ ಹೊಂದಿದೆ. ಪ್ರಯಾಣಿಕರ ಸುರಕ್ಷತೆಗಾಗಿ 80 ಸಿಸಿ ಕ್ಯಾಮೆರಾ ಹಾಗೂ ಸರಕು ತಪಾಸಣೆಗಾಗಿ ಆರು ಎಕ್ಸರೇ ಉಪಕರಣಗಳನ್ನು ಅಳವಡಿಸಲಾಗಿದೆ. ಒಂದೇ ಬಾರಿಗೆ 200 ಜನ ಪ್ರಯಾಣಿಕರು ಈ ಟರ್ಮಿನಲ್‌ಗೆ ಆಗಮಿಸುವ ಹಾಗೂ ನಿರ್ಗಮಿಸಬಹುದಾಗಿದೆ. ಇದರೊಂದಿಗೆ ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ) ಟವರ್, ಅಗ್ನಿಶಾಮಕ ನಿಲ್ದಾಣ, ಇಲೆಕ್ಟ್ರಿಕಲ್ ಕೊಠಡಿ, ಕಾಯ್ದಿರಿಸಿದ ಕೊಠಡಿ, ಭದ್ರತಾ ಕೊಠಡಿ, ಬ್ಯಾಕ್ ಅಪ್ ಕಚೇರಿ, 6ಕ್ಕೂ ಅಧಿಕ ಏರ್‌ಲೈನ್ಸ್ ಕೌಂಟರ್’ಗಳು, ಹೊಟೇಲ್ ಕಾಯ್ದಿರಿಸುವಿಕೆ, 100 ವಾಹನಗಳು ನಿಲುಗಡೆಗೆ ಸ್ಥಳಾವಕಾಶ, 5ಜಿ ವೈಫೈ ಸೌಲಭ್ಯ, ಲಘು ಪಾನೀಯ, ಅಲ್ಪೋಪಹಾರ ಮಳಿಗೆ, ಟ್ರಾಲಿಗಳು, ದೂರವಾಣಿ ಸೌಲಭ್ಯ, ವೀಲ್ ಕುರ್ಚಿ, ವಿಶ್ರಾಂತಿ ಕೊಠಡಿ ಮತ್ತಿತರ ಸೌಲಭ್ಯಗಳನ್ನು ಈ ಅತ್ಯಾಧುನಿಕ ಟರ್ಮಿನಲ್‌ನಲ್ಲಿ ಒದಗಿಸಲಾಗಿದೆ.
ಒಂದು ದಿನಕ್ಕೆ 30 ದೊಡ್ಡ ವಿಮಾನಗಳು ಈ ವಿಮಾನದಲ್ಲಿ ಬಂದಿಳಿಯಬಹುದಾಗಿದೆ. ರನ್ ವೇ ವಿಸ್ತರಣೆಯಿಂದಾಗಿ ಏರ್‌ಬಸ್, 737 ಬೋಯಿಂಗ್ ವಿಮಾನ ಸೇರಿದಂತೆ 180 ಆಸನಗಳ ಸಾಮರ್ಥ್ಯದ ವಿಮಾನಗಳು ಇಲ್ಲಿಂದ ಸಂಚಾರ ನಡೆಸಬಹುದಾಗಿದೆ.
ಉತ್ತರ ಕರ್ನಾಟಕದಲ್ಲಿ ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಹೊರತುಪಡಿಸಿದರೆ, ಇಷ್ಟೊಂದು ದೊಡ್ಡ ಹಾಗೂ ಅತ್ಯಾಧುನಿಕ ಗುಣಮಟ್ಟ ಹೊಂದಿರುವ ವಿಮಾನ ನಿಲ್ದಾಣಗಳು ಬೇರೆ ಎಲ್ಲಿಯೂ ಇಲ್ಲ. ಈ ವಿಮಾನ ನಿಲ್ದಾಣಗಳ ಗುಣಮಟ್ಟ ಮೇಲ್ದರ್ಜೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳ ಅಭಿವೃದ್ಧಿ, ನಿರುದ್ಯೋಗ ನಿವಾರಣೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಅನುಕೂಲವಾಗಲಿದೆ.
