ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು ಎಚ್‌1ಬಿ ವೀಸಾ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಪೈಕಿ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶೇ.90 ಭಾರತೀಯರು ಎಚ್‌1ಬಿ ವೀಸಾ ಅಡಿಯಲ್ಲೇ ಇದ್ದಾರೆ. ಈ ವೀಸಾ ಹೊಂದಿರುವವರ ಸಂಗಾತಿಗಳು (ಪತಿ ಅಥವಾ ಪತ್ನಿ) ಕೂಡ ಅಮೆರಿಕದಲ್ಲಿ ನೌಕರಿ ಮಾಡಬಹುದು ಎಂಬ ನೀತಿಯನ್ನು ಒಬಾಮಾ ಆಡಳಿತ ಜಾರಿಗೆ ತಂದಿತ್ತು.
ನವದೆಹಲಿ(ಜ.31): ವಲಸಿಗರು ಮತ್ತು ವಿದೇಶದಿಂದ ಬಂದು ನೌಕರಿ ಮಾಡುತ್ತಿರುವ ಅಮೆರಿಕೇತರರ ಮೇಲೆ ಗದಾಪ್ರಹಾರ ನಡೆಸಲು ಉದ್ದೇಶಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳು, ಅಮೆರಿಕದಲ್ಲಿನ ಭಾರತೀಯ ವಿದ್ಯಾರ್ಥಿಗಳು, ನೌಕರರು ಮತ್ತು ಅವರ ಸಂಗಾತಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಅಪಾಯವಿದೆ.
ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು ಎಚ್1ಬಿ ವೀಸಾ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಪೈಕಿ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶೇ.90 ಭಾರತೀಯರು ಎಚ್1ಬಿ ವೀಸಾ ಅಡಿಯಲ್ಲೇ ಇದ್ದಾರೆ. ಈ ವೀಸಾ ಹೊಂದಿರುವವರ ಸಂಗಾತಿಗಳು (ಪತಿ ಅಥವಾ ಪತ್ನಿ) ಕೂಡ ಅಮೆರಿಕದಲ್ಲಿ ನೌಕರಿ ಮಾಡಬಹುದು ಎಂಬ ನೀತಿಯನ್ನು ಒಬಾಮಾ ಆಡಳಿತ ಜಾರಿಗೆ ತಂದಿತ್ತು. ಈ ಅವಕಾಶವನ್ನು ಟ್ರಂಪ್ ಆಡಳಿತ ರದ್ದು ಮಾಡಲು ಹೊರಟಿದೆ ಎಂಬ ಅಂಶವು ಶ್ವೇತಭವನದ ಪರಿಶೀಲನೆಯಲ್ಲಿರುವ 4 ಕಾರ್ಯಾಂಗ ಆದೇಶಗಳ ಕರಡು ಪ್ರತಿಗಳಲ್ಲಿದೆ ಎಂಬುದು ಮಾಧ್ಯಮಗಳಿಗೆ ಸೋರಿಕೆಯಾಗಿದೆ.
165,918 ವಿದ್ಯಾರ್ಥಿಗಳಿಗೂ ತೊಂದರೆ:
ಅಮೆರಿಕದಲ್ಲಿ ಕಲಿಯುತ್ತಿರುವ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ವಿದ್ಯಾರ್ಥಿಗಳಿಗೆ ಆಪ್ಟಿಕಲ್ ಪ್ರಾಕ್ಟಿಕಲ್ ಟ್ರೇನಿಂಗ್ (ಒಪಿಟಿ) ಕೋರ್ಸ್ ಮುಗಿದ ಬಳಿಕ ಈಗ 3 ವರ್ಷ ವಿಸ್ತರಿತ ಅವಧಿಯ ವೀಸಾ ಪಡೆಯಲು ಅವಕಾಶವಿದೆ. ಆದರೆ ಟ್ರಂಪ್ ಆಡಳಿತ ವಿಸ್ತರಿತ ವೀಸಾಗೆ ಕಡಿವಾಣ ಹಾಕಲು ನಿರ್ಧರಿಸಿದ್ದು, 165,918 ಭಾರತೀಯ ವಿದ್ಯಾರ್ಥಿಗಳಿಗೆ ತೊಂದರೆ ಆಗುವ ಭೀತಿ ಎದುರಾಗಿದೆ.
