ಸೌದಿ ಅರೇಬಿಯಾದಲ್ಲಿ 41 ಲಕ್ಷ ಭಾರತೀಯರು ಕೆಲಸ ಮಾಡುತ್ತಿದ್ದಾರೆ. ತನ್ಮೂಲಕ ಆ ದೇಶದಲ್ಲಿ ಕೆಲಸ ಮಾಡುತ್ತಿರುವ ವಲಸಿಗರ ಸಂಖ್ಯೆಯಲ್ಲಿ ಭಾರತೀಯರೇ ಪ್ರಥಮ ಸ್ಥಾನದಲ್ಲಿದ್ದಾರೆ. ಸೌದಿ ಅರೇಬಿಯಾ ಸರ್ಕಾರದ ಹೊಸ ನೀತಿಯಿಂದಾಗಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹೊಂದಿರುವ ಉದ್ಯೋಗಿ 300 ರಿಯಾಲ್ (ಅಂದರೆ 5100 ರು.)ಗಳನ್ನು ಪ್ರತಿ ತಿಂಗಳು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ.
ಹೈದರಾಬಾದ್(ಜೂ.21): ಕುಟುಂಬ ಸಮೇತ ತನ್ನ ದೇಶದಲ್ಲಿ ನೆಲೆಯೂರಿರುವ ವಲಸಿಗ ಉದ್ಯೋಗಿಗಳ ಮೇಲೆ ಸೌದಿ ಅರೇಬಿಯಾ ಸರ್ಕಾರ ಗದಾಪ್ರಹಾರ ಮಾಡಿದೆ. ಭಾರತೀಯರೂ ಸೇರಿದಂತೆ ಸೌದಿಯಲ್ಲಿ ಉದ್ಯೋಗದಲ್ಲಿರುವ ವಲಸಿಗರ ಜತೆಯಲ್ಲಿ ನೆಲೆಸಿರುವವರು ಜು.1 ರಿಂದ ಪ್ರತಿ ತಿಂಗಳು 100 ರಿಯಾಲ್ (1700 ರು.) ‘ಅವಲಂಬನೆ ಶುಲ್ಕ’ ಪಾವತಿಸಬೇಕು ಎಂದು ಆದೇಶಿಸಿದೆ. ಇದರಿಂದಾಗಿ ಸೌದಿಯಲ್ಲಿರುವ ಭಾರತೀಯ ಉದ್ಯೋಗಿಗಳು ತಮ್ಮ ಪತ್ನಿ, ಮಕ್ಕಳನ್ನು ಭಾರತಕ್ಕೆ ವಾಪಸ್ ಕಳುಹಿಸುತ್ತಿದ್ದಾರೆ.
ಸೌದಿ ಅರೇಬಿಯಾದಲ್ಲಿ 41 ಲಕ್ಷ ಭಾರತೀಯರು ಕೆಲಸ ಮಾಡುತ್ತಿದ್ದಾರೆ. ತನ್ಮೂಲಕ ಆ ದೇಶದಲ್ಲಿ ಕೆಲಸ ಮಾಡುತ್ತಿರುವ ವಲಸಿಗರ ಸಂಖ್ಯೆಯಲ್ಲಿ ಭಾರತೀಯರೇ ಪ್ರಥಮ ಸ್ಥಾನದಲ್ಲಿದ್ದಾರೆ. ಸೌದಿ ಅರೇಬಿಯಾ ಸರ್ಕಾರದ ಹೊಸ ನೀತಿಯಿಂದಾಗಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹೊಂದಿರುವ ಉದ್ಯೋಗಿ 300 ರಿಯಾಲ್ (ಅಂದರೆ 5100 ರು.)ಗಳನ್ನು ಪ್ರತಿ ತಿಂಗಳು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ.
ಆದರೆ ಇದು ಇಲ್ಲಿಗೇ ನಿಲ್ಲುವುದಿಲ್ಲ. ಸೌದಿ ಸರ್ಕಾರ ಜಾರಿಗೆ ತರುತ್ತಿರುವ ಅವಲಂಬನೆ ಶುಲ್ಕ 2020ರವರೆಗೂ ಪ್ರತಿ ವರ್ಷ 100 ರಿಯಾಲ್‌ನಷ್ಟು ಹೆಚ್ಚುತ್ತಲೇ ಇರುತ್ತದೆ. ಹೀಗಾಗಿ 2020ನೇ ಇಸ್ವಿ ವೇಳೆಗೆ ಉದ್ಯೋಗಿಯ ಕುಟುಂಬದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ 400 ರಿಯಾಲ್ (6900 ರು.)ಗಳನ್ನು ಅವಲಂಬನೆ ಶುಲ್ಕ ರೂಪದಲ್ಲಿ ಪಾವತಿ ಮಾಡಬೇಕಾಗುತ್ತದೆ. ಜತೆಗೆ ಅಷ್ಟೂ ಹಣವನ್ನು ಮುಂಚಿತವಾಗಿಯೇ ಕೊಡಬೇಕು.
ಈ ಅಪಾಯ ಊಹಿಸಿರುವ ಉದ್ಯೋಗಿಗಳು ಕಳೆದ ನಾಲ್ಕು ತಿಂಗಳುಗಳಿಂದ ತಮ್ಮ ಪತ್ನಿ, ಮಕ್ಕಳು ಹಾಗೂ ಬಂಧುಗಳನ್ನು ಸೌದಿಯಿಂದ ಸಾಗಹಾಕುತ್ತಿದ್ದಾರೆ. ‘ಪುರುಷರು ಈಗ ದಿಢೀರ್ ಬ್ರಹ್ಮಚಾರಿಗಳಾಗಿದ್ದಾರೆ’ ಎಂದು ವಲಸಿಗರ ಹಕ್ಕುಗಳ ಹೋರಾಟಗಾರ ಭೀಮರೆಡ್ಡಿ ಮಂಢ ತಿಳಿಸಿದ್ದಾರೆ.
ಮಾಸಿಕ 5000 ರಿಯಾಲ್ (86 ಸಾವಿರ ರು.) ವೇತನ ಪಡೆಯುವವರಿಗೆ ಸೌದಿ ಸರ್ಕಾರ ಕುಟುಂಬ ವೀಸಾ ನೀಡುತ್ತದೆ. ಅದನ್ನು ಬಳಸಿ ಉದ್ಯೋಗಿಗಳು ತಮ್ಮ ಬಂಧು-ಬಾಂಧವರನ್ನು ಕರೆತಂದು ಸೌದಿಯಲ್ಲಿ ವಾಸಿಸಬಹುದು. ಇದೀಗ ಆ ವೀಸಾದಡಿ ಸೌದಿಯಲ್ಲಿ ನೆಲೆಸಿರುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ಕಂಪನಿಗಳು ಅವಲಂಬನೆ ಶುಲ್ಕವನ್ನು ತಾವೇ ಪಾವತಿ ಮಾಡುವುದಾಗಿ ಹೇಳಿವೆ. ಆದರೆ, ಎಲ್ಲರಿಗೂ ಆ ಸೌಲಭ್ಯ ಸಿಗುತ್ತಿಲ್ಲ.