2006ರಲ್ಲಿ ಬಿಜೆಪಿ ಸೇರ್ಪಡೆಯಾದ ಬಳಿಕ ನಿರ್ಮಲಾ ಸೀತಾರಾಮನ್ ಬಹಳ ಕ್ಷಿಪ್ರಗತಿಯಲ್ಲಿ ರಾಜಕೀಯವಾಗಿ ಬೆಳೆದರು. ಬಿಜೆಪಿಯ ಆರು ವಕ್ತಾರರ ಪೈಕಿ ಒಬ್ಬರಾಗಿದ್ದ ನಿರ್ಮಲಾ ಸೀತಾರಾಮನ್ ತಮ್ಮ ಸಾಮರ್ಥ್ಯವನ್ನು ಅನಾವರಣಗೊಳಿಸಿದರು. 2014ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ವಕ್ತಾರರಾಗಿ ನಿರ್ಮಲಾ ಅವರ ಕಾರ್ಯಗಳು ನರೇಂದ್ರ ಮೋದಿಯವರ ಮೆಚ್ಚುಗೆ ಗಳಿಸಿತು. ಈಕೆ ಬಿಜೆಪಿಯ ಪ್ರಮುಖ ಮುಖವಾಗಿ ಕಾಣಿಸಿಕೊಂಡರು. 2016ರಲ್ಲಿ ಈಕೆಯನ್ನು ಮೋದಿ ತಮ್ಮ ಸಂಪುಟಕ್ಕೆ ಸೇರಿಸಿಕೊಂಡರು.

ಬೆಂಗಳೂರು(ಸೆ. 03): ನರೇಂದ್ರ ಮೋದಿಯವರ ನೂತನ ಸಂಪುಟ ಪುನಾರಚನೆಯಲ್ಲಿ ಅನೇಕರಿಗೆ ಅಚ್ಚರಿಯ ನಿರ್ಧಾರವೆನಿಸಿದ್ದು ನಿರ್ಮಲಾ ಸೀತಾರಾಮನ್'ಗೆ ರಕ್ಷಣಾ ಖಾತೆ ಕೊಟ್ಟಿದ್ದು. ಅರುಣ್ ಜೇಟ್ಲಿಯವರ ಅಡಿಯಲ್ಲಿ ವಿತ್ತ ಖಾತೆಯಲ್ಲಿ ರಾಜ್ಯ ದರ್ಜೆ ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ ಈ ಮಹತ್ವದ ಜವಾಬ್ದಾರಿ ಕೊಡಲು ಕಾರಣಗಳಿವೆಯೇ? ಮೋದಿ ಸಂಪುಟದಲ್ಲಿ ಈಕೆಯ ಕಾರ್ಯಗಳನ್ನು ಹತ್ತಿರದಿಂದ ಬಲ್ಲವರಿಗೆ ಈ ಬೆಳವಣಿಗೆ ಅಚ್ಚರಿ ಉಂಟುಮಾಡಿಲ್ಲವೆನ್ನಲಾಗಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರನ್ನು ಸದ್ಯ ಕರ್ನಾಟಕದವರೆನ್ನಲ್ಲಡ್ಡಿಯಿಲ್ಲ.

ಯಾರು ಈ ನಿರ್ಮಲಾ ಸೀತಾರಾಮನ್?
1959ರಲ್ಲಿ ತಮಿಳುನಾಡಿನ ಮದುರೈನಲ್ಲಿ ಜನಿಸಿದ ನಿರ್ಮಲಾ ಸೀತಾರಾಮನ್ ಓದಿ ಬೆಳೆದಿದ್ದೆಲ್ಲಾ ತಮಿಳುನಾಡಿನಲ್ಲೇ. 1986ರಲ್ಲಿ ಆಂಧ್ರದ ಬಿಜೆಪಿ ಮುಖಂಡ ಹಾಗೂ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ಅವರನ್ನು ವಿವಾಹವಾದ ನಿರ್ಮಲಾ ಸೀತಾರಾಮನ್ 2006ರಲ್ಲಿ ಬಿಜೆಪಿ ಸೇರ್ಪಡೆಯಾದರು. ಅದಕ್ಕೂ ಮುನ್ನ ಜೆಎನ್'ಯು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಗ್ಯಾಟ್ ಒಪ್ಪಂದದಲ್ಲಿ ಭಾರತ-ಯೂರೋಪ್ ಜವಳಿ ವ್ಯಾಪಾರದ ಕುರಿತು ಪಿಚ್'ಡಿ ಪದವಿಯನ್ನೂ ಪಡೆದರು. ಪ್ರೈಸ್'ವಾಟರ್'ಹೌಸ್ ಕೂಪರ್ಸ್ ಹಾಗೂ ಬಿಬಿಸಿ ವರ್ಲ್ಡ್ ಸರ್ವಿಸ್ ಸಂಸ್ಥೆಗಳಲ್ಲಿ ಕೆಲಸ ಮಾಡಿದರು. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯೂ ಆಗಿದ್ದವರು.

ರಾಜಕಾರಣದಲ್ಲಿ ದೃಢ ಹೆಜ್ಜೆ:
2006ರಲ್ಲಿ ಬಿಜೆಪಿ ಸೇರ್ಪಡೆಯಾದ ಬಳಿಕ ನಿರ್ಮಲಾ ಸೀತಾರಾಮನ್ ಬಹಳ ಕ್ಷಿಪ್ರಗತಿಯಲ್ಲಿ ರಾಜಕೀಯವಾಗಿ ಬೆಳೆದರು. ಬಿಜೆಪಿಯ ಆರು ವಕ್ತಾರರ ಪೈಕಿ ಒಬ್ಬರಾಗಿದ್ದ ನಿರ್ಮಲಾ ಸೀತಾರಾಮನ್ ತಮ್ಮ ಸಾಮರ್ಥ್ಯವನ್ನು ಅನಾವರಣಗೊಳಿಸಿದರು. 2014ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ವಕ್ತಾರರಾಗಿ ನಿರ್ಮಲಾ ಅವರ ಕಾರ್ಯಗಳು ನರೇಂದ್ರ ಮೋದಿಯವರ ಮೆಚ್ಚುಗೆ ಗಳಿಸಿತು. ಈಕೆ ಬಿಜೆಪಿಯ ಪ್ರಮುಖ ಮುಖವಾಗಿ ಕಾಣಿಸಿಕೊಂಡರು. 2016ರಲ್ಲಿ ಈಕೆಯನ್ನು ಮೋದಿ ತಮ್ಮ ಸಂಪುಟಕ್ಕೆ ಸೇರಿಸಿಕೊಂಡರು.

ಸಚಿವೆಯಾಗಿ ಸಾಧಿಸಿದ್ದೇನು?
ನರೇಂದ್ರ ಮೋದಿಯವರು ತಮ್ಮ ಸಂಪುಟದ ಸಚಿವರ ಕಾರ್ಯನಿರ್ವಹಣೆ ಬಗ್ಗೆ ಸದಾ ಒಂದು ಕಣ್ಣಿಟ್ಟೇ ಇರುತ್ತಾರೆಂಬ ಮಾತಿದೆ. ಸಚಿವರ ಕಾರ್ಯಸಾಧನೆಯ ವರದಿಯಲ್ಲಿ, ದಕ್ಷ ಸಾಧಕರ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ ಕೂಡ ಸೇರಿದ್ದಾರೆ. ಅರುಣ್ ಜೇಟ್ಲಿಯವರ ವಿತ್ತ ಖಾತೆಯ ಅಡಿಯಲ್ಲಿ ನಿರ್ಮಲಾ ಅವರು ಗಮನಾರ್ಹ ಕಾರ್ಯಗಳನ್ನು ಸಾಧಿಸಿ ತೋರಿಸಿದ್ದಾರೆ. ವಿವಿಧ ರಾಷ್ಟ್ರಗಳೊಂದಿಗೆ ಸಾಕಷ್ಟು ವ್ಯಾಪಾರ ಒಪ್ಪಂದಗಳು ನೆರವೇರಲು ನಿರ್ಮಲಾ ಪ್ರಮುಖ ಕಾರಣ. ಅಲ್ಲದೇ, ಮೋದಿಯವರ ನೆಚ್ಚಿನ ಸ್ಟಾರ್ಟಪ್ ಯೋಜನೆಯ ಯಶಸ್ಸಿಗೆ ನಿರ್ಮಲಾ ಸೀತಾರಾಮನ್ ಸಾಕಷ್ಟು ಶ್ರಮ ಹಾಕಿದ್ದಾರೆ. ಜಿಎಸ್'ಟಿ ತೆರಿಗೆ ಪದ್ಧತಿಯ ಅನುಕೂಲಗಳ ಬಗ್ಗೆ ವ್ಯಾಪಾರಿಗಳು, ರಾಜ್ಯ ಸರಕಾರಗಳಿಗೆ ಮನವರಿಕೆ ಮಾಡಿಕೊಡುವ ಕೆಲಸದಲ್ಲೂ ಅವರದ್ದು ಪ್ರಮುಖ ಪಾತ್ರವಿತ್ತು. ಡೋಕ್ಲಾಮ್ ಗಡಿ ವಿವಾದದ ಅತೀ ಸೂಕ್ಷ್ಮ ಪರಿಸ್ಥಿತಿಯಲ್ಲಿ ಚೀನಾಗೆ ತೆರಳಿ ಬ್ರಿಕ್ಸ್ ಸಭೆಯಲ್ಲಿ ಪಾಲ್ಗೊಂಡರು.

ನಿರ್ಮಲಾ ಸೀತಾರಾಮನ್ ಹೆಚ್ಚು ವಿವಾದವಿಲ್ಲದೇ ತಮ್ಮ ಕೆಲಸವನ್ನು ದಕ್ಷವಾಗಿ ನಿಭಾಯಿಸಿದ್ದಾರೆನ್ನಲಾಗಿದೆ. ಅಷ್ಟೇ ಅಲ್ಲ, ತಮಿಳುನಾಡಿನಲ್ಲಿ ಬಿಜೆಪಿಯನ್ನು ಅರಳಿಸಲು ಇದು ಸಕಾಲವಾಗಿದ್ದು, ಈ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ಬಿಜೆಪಿಯ ಪ್ರಮುಖ ನಾಯಕಿಯನ್ನಾಗಿ ಬಿಂಬಿಸುವುದು ಮಾಸ್ಟರ್'ಪ್ಲಾನ್ ಆಗಿರಬಹುದು. ತಮಿಳುನಾಡು ಮೂಲದವರಾದ ನಿರ್ಮಲಾ ಸೀತಾರಾಮನ್ ಅವರು ಶಶಿಕಲಾ ಪ್ರಕರಣ, ಜಲ್ಲಿಕಟ್ಟು ಪ್ರಕರಣಗಳಲ್ಲಿ ತೆರೆಯ ಹಿಂದೆ ಕೆಲಸ ಮಾಡಿದ್ದಾರೆ. ನಿರ್ಮಲಾ ಸೀತಾರಾಮನ್ ಅವರ ದೆಸೆಯಿಂದ ತಮಿಳುನಾಡಿನಲ್ಲಿ ಕಮಲ ಪಕ್ಷ ಅರಳಬಹುದೆಂಬ ಆಶಯವಿದೆ.