ಕಾವೇರಿ ಚಳವಳಿಯಲ್ಲಿ ಭುಗಿಲೆದ್ದ ಪರಿಸ್ಥಿತಿ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆ ಪಾಲನೆಗಾಗಿ ಮಂಡ್ಯ ಜಿಲ್ಲೆಗೆ ಕರೆಸಿಕೊಂಡಿರುವ ಪೊಲೀಸರಿಗೆ ನಿತ್ಯ ಊಟ, ತಿಂಡಿಗಾಗಿ ಸರಾಸರಿ 2 ಲಕ್ಷ ರೂ ಖರ್ಚಾಗುತ್ತಿದೆ.

ಮಂಡ್ಯ ( ಸೆ.20): ಮಂಡ್ಯದಲ್ಲಿ ಕಾವೇರಿಗಾಗಿ ಪ್ರತಿಭಟನೆ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಕಳೆದ 14 ದಿನಗಳಿಂದ ರಾಜ್ಯದಲ್ಲಿ ಭುಗಿಲೆದ್ದ ಕಾವೇರಿ ಹೋರಾಟದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಹೆಚ್ಚುವರಿ ಪೋಲೀಸರನ್ನು ನೇಮಕ ಮಾಡಲಾಗಿದೆ. ಮಂಡ್ಯದಲ್ಲಿ ಕೂಡಾ ಕಾವೇರಿದ ಕಾವೇರಿ ಹೋರಾಟದ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಹಾಗಾದರೆ ಮಂಡ್ಯದಲ್ಲಿ ಪೋಲೀಸರ ಊಟ, ತಿಂಡಿ ವ್ಯವಸ್ಥೆಗೆ ಸರ್ಕಾರ ಎಷ್ಟು ಖರ್ಚು ಮಾಡಿರಬಹುದು ಎಂಬ ವರದಿ ಇಲ್ಲಿದೆ ನೋಡಿ.

ಕಾವೇರಿ ಚಳವಳಿಯಲ್ಲಿ ಭುಗಿಲೆದ್ದ ಪರಿಸ್ಥಿತಿ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆ ಪಾಲನೆಗಾಗಿ ಮಂಡ್ಯ ಜಿಲ್ಲೆಗೆ ಕರೆಸಿಕೊಂಡಿರುವ ಪೊಲೀಸರಿಗೆ ನಿತ್ಯ ಊಟ, ತಿಂಡಿಗಾಗಿ ಸರಾಸರಿ 2 ಲಕ್ಷ ರೂ ಖರ್ಚಾಗುತ್ತಿದೆ. ಕಳೆದ 14 ದಿನಗಳಿಂದ ಸುಮಾರು 28 ಲಕ್ಷ ಹಣವನ್ನು ಸರ್ಕಾರ ಆಹಾರಕ್ಕಾಗಿಯೇ ಖರ್ಚು ಮಾಡಿದೆ. ಜಿಲ್ಲೆಯಲ್ಲಿ ಬಂದೋಬಸ್ತ್ ಗಾಗಿ ನೇಮಕಗೊಂಡಿರುವ ಪೊಲೀಸರಿಗೆ ಊಟ, ತಿಂಡಿ ಪೂರೈಸುವುದು ಪೊಲೀಸರಿಗೆ ಸವಾಲಾಗಿದೆ‌. ಬಂದೋಬಸ್ತ್ , ರಕ್ಷಣಾ ಕಾರ್ಯ ಮಾಡುವ ಕೆಲ ಸಿಬ್ಬಂದಿಗಳೇ ಸ್ವತಃ ಅಡುಗೆ ತಯಾರಿಯಲ್ಲಿದ್ದಾರೆ. ಪೊಲೀಸರು, ಭದ್ರತಾ ಪಡೆ ಇರುವಲ್ಲಿಯೇ ಆಹಾರ ಪೂರೈಕೆ ಹಾಗು ತಯಾರಿ ಕಾರ್ಯ ನಡೆಯುತ್ತಿದೆ. ನಿತ್ಯ ಬೆಳಗಿನ ಉಪಹಾರವಾಗಿ ಇಡ್ಲಿ, ಪೊಂಗಲ್, ಚಿತ್ರಾನ್ನ, ಮಧ್ಯಾಹ್ನದ ಊಟಕ್ಕೆ ಮುದ್ದೆ, ಚಪಾತಿ, ಅನ್ನ, ಸಾಂಬರ್, ಹಾಗೂ ರಾತ್ರಿ ಊಟಕ್ಕೆ ಮುದ್ದೆ, ಚಪಾತಿ, ಅನ್ನ ಸಾಂಬರ್ ಜೊತೆಗೆ ಬಾಳೆಹಣ್ಣು, ಸಿಹಿ ತಿನಿಸು ನೀಡಲಾಗುತ್ತಿದೆ. ಇದರ ಜೊತೆಗೆ ಮೊಟ್ಟೆ, ವಾರಕ್ಕೊಮ್ಮೆ ಮಾಂಸಾಹಾರದ ಊಟ ನೀಡಲಾಗುತ್ತಿದೆ.