Asianet Suvarna News Asianet Suvarna News

ಕಾಶ್ಮೀರದಲ್ಲಿ ಅಲ್ಲೋಲ ಕಲ್ಲೋಲ; ಮೋದಿ ಶಾ ತಂತ್ರವೇನು?

ಕಳೆದೊಂದು ವಾರದಲ್ಲಿ ಕೇಂದ್ರ ಸರ್ಕಾರ 38,000 ಹೆಚ್ಚುವರಿ ಯೋಧರನ್ನು ಜಮ್ಮು-ಕಾಶ್ಮೀರಕ್ಕೆ ರವಾನಿಸಿದೆ. ಕೇಂದ್ರದ ಈ ನಡೆ ದೇಶಾದ್ಯಂತ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದಲ್ಲಿ ಏನಾಗುತ್ತಿದೆ, ಕೇಂದ್ರದ ಈ ನಿರ್ಧಾರದ ಹಿಂದಿನ ರಹಸ್ಯ ಏನು, 370, 35ಎ ವಿಧಿ ಎಂದರೆ ಏನು, ಕಾಶ್ಮೀರಕ್ಕೆ ನೀಡಿರುವ ಈ ವಿಶೇಷ ಸ್ಥಾನಮಾನ ರದ್ದಾಗುತ್ತಾ? ಈ ಕುರಿತ ಮಾಹಿತಿ ಇಲ್ಲಿದೆ.

India imposes Jammu Kashmir lock down puts leaders under house arrest
Author
Bengaluru, First Published Aug 5, 2019, 8:54 AM IST

ಕಳೆದೊಂದು ವಾರದಲ್ಲಿ ಕೇಂದ್ರ ಸರ್ಕಾರ 38,000 ಹೆಚ್ಚುವರಿ ಯೋಧರನ್ನು ಜಮ್ಮು-ಕಾಶ್ಮೀರಕ್ಕೆ ರವಾನಿಸಿದೆ. ಕೇಂದ್ರದ ಈ ನಡೆ ದೇಶಾದ್ಯಂತ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದಲ್ಲಿ ಏನಾಗುತ್ತಿದೆ, ಕೇಂದ್ರದ ಈ ನಿರ್ಧಾರದ ಹಿಂದಿನ ರಹಸ್ಯ ಏನು, 370, 35ಎ ವಿಧಿ ಎಂದರೆ ಏನು, ಕಾಶ್ಮೀರಕ್ಕೆ ನೀಡಿರುವ ಈ ವಿಶೇಷ ಸ್ಥಾನಮಾನ ರದ್ದಾಗುತ್ತಾ? ಈ ಕುರಿತ ಮಾಹಿತಿ ಇಲ್ಲಿದೆ.

ಸೇನೆ ನಿಯೋಜನೆಯಿಂದ ಶುರುವಾದ ಗುಲ್ಲು

ಜಮ್ಮು ಕಾಶ್ಮೀರದಲ್ಲಿ ಕಲ್ಲು ತೂರಾಟ ತಗ್ಗುತ್ತಿದೆ ಎಂದು ಇತ್ತೀಚೆಗಷ್ಟೇ ವರದಿಯಾಗಿತ್ತು. ಆದರೆ ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಜಮ್ಮು- ಮತ್ತು ಕಾಶ್ಮೀರಲ್ಲಿ ಹೆಚ್ಚುವರಿ ಭದ್ರತೆಗಾಗಿ ಒಮ್ಮೆ 10,000, ಮತ್ತೊಮ್ಮೆ 28,000 ಹೆಚ್ಚುವರಿ ಯೋಧರನ್ನು ಕಳುಹಿಸಿಕೊಟ್ಟಿದೆ. ಹೆಚ್ಚುವರಿ ಸೇನಾ ನಿಯೋಜನೆ ಜೊತೆಗೆ ಅಮರನಾಥ ಯಾತ್ರೆ ವೇಳೆ ಉಗ್ರರು ದಾಳಿ ಮಾಡುವ ಸಾಧ್ಯತೆಯ ಕಾರಣದಿಂದ ಯಾತ್ರೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಅಲ್ಲಿನ ಸರ್ಕಾರ ಸೂಚನೆ ನೀಡಿದೆ.

ಕಾಶ್ಮೀರದಲ್ಲಿ ಮಧ್ಯರಾತ್ರಿ ನಿಷೇಧಾಜ್ಞೆ, ಇಂಟರ್ನೆಟ್ ಸ್ಥಗಿತ, ಒಮರ್, ಮುಫ್ತಿಗೆ ದಿಗ್ಭಂಧನ!

ಇದರ ಬೆನ್ನಲ್ಲೇ ಮಚೈಲ್‌ ಗ್ರಾಮದ ಕಿಶ್ವಾರ್‌ನಲ್ಲಿರುವ ದುರ್ಗಾದೇವಿ ಯಾತ್ರೆಯನ್ನೂ ರದ್ದು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಹಾಗೂ ಭದ್ರತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರೂ ಕೇಂದ್ರದ ಈ ನಿರ್ಧಾರದಿಂದ ಕಾಶ್ಮೀರದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಕೇಂದ್ರ ಸರ್ಕಾರ ಕಾಶ್ಮೀರವನ್ನು ಗುರಿಯಾಗಿಸಿಕೊಂಡು ಯಾವುದೋ ಯೋಜನೆ ಹಾಕಿದೆ ಎಂಬ ಗುಮಾನಿಗಳು ಕೇಳಿ ಬರುತ್ತಿವೆ. ಅಲ್ಲಿನ ಪ್ರತ್ಯೇಕತಾವಾದಿಗಳು, ಪ್ರಾದೇಶಿಕ ಪಕ್ಷಗಳು ಕೇಂದ್ರದ ಈ ನಡೆಯನ್ನು ಖಂಡಿಸುತ್ತಿವೆ.

ಸೇನೆ ನಿಯೋಜನೆ ಹಿಂದಿನ ರಹಸ್ಯ

ಕಾಶ್ಮೀರದಲ್ಲಿ ಹೆಚ್ಚುವರಿ ಸೇನೆಯನ್ನು ನಿಯೋಜಿಸಿರುವ ಕೇಂದ್ರದ ನಡೆ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಕೇಂದ್ರ ನಿರ್ಧಾರದ ಹಿಂದಿನ ಕಾರಣ ಏನು ಎಂಬ ಬಗ್ಗೆ ಹಲವು ಊಹೆಗಳು ಕೇಳಿಬರುತ್ತಿವೆ. ಮೊದಲನೆಯದಾಗಿ ಆಗಸ್ಟ್‌ 15ರಂದು ನಡೆಯಲಿರುವ ಸ್ವಾತಂತ್ರ್ಯೋತ್ಸವವನ್ನು ಪ್ರಧಾನಿ ಮೋದಿ ಕೆಂಪುಕೋಟೆ ಬದಲಿಗೆ ಕಾಶ್ಮೀರದಲ್ಲಿ ಆಚರಿಸಬಹುದು, ಅಥವಾ ಕಾಶ್ಮೀರದಲ್ಲಿ ಶಾಂತಿಯುತ ಚುನಾವಣೆ ನಡೆಸುವ ಉದ್ದೇಶದಿಂದ ಸೂಕ್ತ ಭದ್ರತೆ ಕಲ್ಪಿಸಲಾಗಿದೆ ಎನ್ನಲಾಗುತ್ತಿದೆ.

"

ಜೊತೆಗೆ ಕಾಶ್ಮೀರವನ್ನು 3 ವಿಭಾಗಗಳನ್ನಾಗಿ ವಿಂಗಡಣೆ ಮಾಡಬಹುದು ಅಥವಾ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ 370 ಮತ್ತು 35ಎ ವಿಧಿಯನ್ನು ನಿಷೇಧಿಸಬಹುದು ಎಂಬ ಊಹೆಗಳು ಪ್ರಾರಂಭವಾಗಿವೆ. ಇದಕ್ಕೆ ಪುಷ್ಠಿ ನೀಡುವಂತೆ ಕಾಶ್ಮೀರ ರಾಜ್ಯಪಾಲರಾದ ಸತ್ಯಪಾಲ್‌ ಮಲ್ಲಿಕ್‌ ಶನಿವಾರ ‘ಇಂದು ಏನೂ ಆಗಲ್ಲ, ನಾಳೆ ಏನೋ ಗೊತ್ತಿಲ್ಲ’ ಎಂದು ಹೇಳಿರುವುದು ಮತ್ತಷ್ಟುಕುತೂಹಲಕ್ಕೆ ಕಾರಣವಾಗಿದೆ.

ಮಾಸ್ಟರ್’ಮೈಂಡ್ ಭೇಟಿಯಾದ ಚಾಣಕ್ಯ: ಶಾ, ಧೋವಲ್ ಭೇಟಿ!

ಏನಿದು 370ನೇ ವಿಧಿ? ರದ್ದುಪಡಿಸಲು ಸಾಧ್ಯವೇ?

370 ಭಾರತ ಸಂವಿಧಾನದ ಒಂದು ವಿಧಿ. ಇದು ಕಾಶ್ಮೀರಕ್ಕೆ ತಾತ್ಕಾಲಿಕ ವಿಶೇಷ ಸ್ಥಾನಮಾನ ಕಲ್ಪಿಸಿದ್ದು, ಜಮ್ಮು-ಕಾಶ್ಮೀರಕ್ಕೆ ಸ್ವಾಯತ್ತ ಸ್ಥಾನಮಾನ ನೀಡಿದೆ. ಇದರಂತೆ ರಕ್ಷಣೆ, ವಿದೇಶಾಂಗ ವ್ಯವಹಾರ, ಸಂಪರ್ಕ ಹೊರತುಪಡಿಸಿ ದೇಶದ ಬೇರೆಲ್ಲಾ ರಾಜ್ಯಗಳಿಗೆ ಅನ್ವಯಿಸುವ ಕಾನೂನುಗಳು, ನಿಯಮಗಳು ಜಮ್ಮು-ಕಾಶ್ಮೀರಕ್ಕೆ ಅನ್ವಯಿಸುವುದಿಲ್ಲ. ಈ ವಿಶೇಷ ಸ್ಥಾನಮಾನವನ್ನು ರದ್ದು ಮಾಡುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಹಾಗಾಗಿ ಅಶಾಂತಿಗೆ ಎಡೆಮಾಡಿಕೊಡದಂತೆ ಸೂಕ್ತ ಭದ್ರತೆ ನೀಡಿ, ಈ ಸ್ಥಾನಮಾನವನ್ನು ರದ್ದು ಪಡಿಸಬಹುದು ಎಂಬ ಅನುಮಾನ ಮೂಡಿದೆ.

ಈ ಗುಮಾನಿ ಮೂಡಿದ ಬೆನ್ನಲ್ಲೇ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಬಹುದೇ ಇಲ್ಲವೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಜಮ್ಮು ಕಾಶ್ಮೀರದಲ್ಲಿ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಅತ್ಯಂತ ಹಿಂದುಳಿದಿದೆ. ಇದಕ್ಕೆ 370ನೇ ವಿಧಿಯೇ ಕಾರಣ. ಅಲ್ಲದೆ ಭಾರತೀಯ ಸಂವಿಧಾನದಲ್ಲಿ ಕಲಂ-370ಯನ್ನು ತಾತ್ಕಾಲಿಕ ವಿಶೇಷಾಧಿಕಾರ ಎಂದು ಸೇರಿಸಲಾಗಿದೆ. ಸ್ವಾತಂತ್ರ್ಯಾನಂತರದ 60 ವರ್ಷಗಳ ಕಾಲ ಜಮ್ಮು-ಕಾಶ್ಮೀರ ಈ ವಿಶೇಷಾಧಿಕಾರವನ್ನು ಬಳಸಿಕೊಂಡಿದೆ.

ಹಾಗಾಗಿ ಇದನ್ನು ರದ್ದು ಮಾಡಬೇಕೆಂಬ ಕೂಗು ಕೆಲ ವರ್ಷಗಳಿಂದ ಇದೆ. ಈಗ ಇದು ಮತ್ತೊಮ್ಮೆ ಕೇಳಿಬರುತ್ತಿದೆ. ಇನ್ನೊಂದೆಡೆ ಒಂದು ವೇಳೆ 370ನೇ ವಿಧಿಯನ್ನು ರದ್ದುಪಡಿಸಿದರೆ ಕಣಿವೆ ರಾಜ್ಯದ ಜನರು ತಮ್ಮ ಗುರುತು ಕಳೆದುಕೊಳ್ಳುತ್ತಾರೆ. ಇದರಿಂದ ಜನರು ತಮ್ಮ ಸ್ವಾತಂತ್ರ್ಯವೇ ಕಳೆದುಹೋಗಿದೆ ಎಂದು ತಿಳಿಯುತ್ತಾರೆ ಎಂದು ಜಮ್ಮು ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷವಾದ ನ್ಯಾಶನಲ… ಕಾನ್ಫರೆನ್ಸ್‌ ವಾದಿಸುತ್ತಿದೆ. ಜೊತೆಗೆ ಇದನ್ನು ರದ್ದುಪಡಿಸುವ ಅಧಿಕಾರ ಭಾರತದ ಸಂಸತ್ತಿಗೆ ಇಲ್ಲ ಎಂದು ಜಮ್ಮು ಕಾಶ್ಮೀರದ ರಾಜಕಾರಣಿಗಳು ವಾದಿಸುತ್ತಾರೆ.

ಏಕೆಂದರೆ ಜಮ್ಮು ಕಾಶ್ಮೀರಕ್ಕೆ ಭಾರತದ ಸಂವಿಧಾನಕ್ಕೆ ಹೊರತಾದ ಪ್ರತ್ಯೇಕ ಸಂವಿಧಾನವಿದೆ. ಇದನ್ನು ರಚಿಸಿದ್ದು ಜಮ್ಮು ಕಾಶ್ಮೀರದ ಸಂವಿಧಾನ ರಚನಾ ಸಮಿತಿ. ಈ ಸಮಿತಿ ಮತ್ತೊಮ್ಮೆ ಸಭೆ ನಡೆಸಿ ವಿಶೇಷ ಸ್ಥಾನಮಾನ ಕೈಬಿಡುವ ನಿರ್ಧಾರವನ್ನು ತಾನೇ ಅಂಗೀಕರಿಸಬೇಕು. ಆದರೆ, ಈಗ ಜಮ್ಮು ಕಾಶ್ಮೀರದ ಕೆಲ ಭಾಗ ಪಾಕ್‌ ಆಕ್ರಮಿತ ಕಾಶ್ಮೀರವಾಗಿರುವುದರಿಂದ ಸಮಗ್ರ ಜಮ್ಮು ಕಾಶ್ಮೀರದ ಸಂವಿಧಾನ ರಚನಾ ಸಮಿತಿ ಸಭೆಯನ್ನೇ ನಡೆಸುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ವಿಶೇಷ ಸವಲತ್ತನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಕೆಲ ತಜ್ಞರು ಹೇಳುತ್ತಾರೆ.

ಏನಿದು 35ಎ, ಇದನ್ನು ರದ್ದುಪಡಿಸಲು ಸಾಧ್ಯವೇ?

ಜಮ್ಮು-ಕಾಶ್ಮೀರದ ನಾಗರಿಕರಿಗೆ ಮಾತ್ರ ಆಸ್ತಿ, ಶಿಕ್ಷಣ, ಉದ್ಯೋಗದಲ್ಲಿ ವಿಶೇಷ ಅಧಿಕಾರ ನೀಡುವ ಕಲಂ ಇದಾಗಿದೆ. 35-ಎ ಪ್ರಕಾರ, ಆ ರಾಜ್ಯದ ಕಾಯಂ ನಿವಾಸಿಗಳನ್ನು ಅಂದರೆ ಸ್ಥಳೀಯರನ್ನು ಬಿಟ್ಟು ಹೊರಗಿನವರು ಯಾರೂ ಅಲ್ಲಿ ಸ್ಥಿರ ಆಸ್ತಿ ಹೊಂದುವಂತಿಲ್ಲ. ಅಲ್ಲದೆ ಶಿಕ್ಷಣ, ವಿದ್ಯಾರ್ಥಿವೇತನ ಮತ್ತು ಉದ್ಯೋಗಕ್ಕೆ ಸ್ಥಳೀಯರಷ್ಟೇ ಅರ್ಹರು. ಅಲ್ಲಿನ ಮಹಿಳೆ ರಾಜ್ಯದ ಹೊರಗಿನವರನ್ನು ವಿವಾಹವಾದರೆ ಈ ವಿಶೇಷ ಸೌಲಭ್ಯಗಳಿಂದ ವಂಚಿತಳಾಗುತ್ತಾಳೆ.

ಆದರೆ ಅಲ್ಲಿನ ಪುರುಷ ಹೊರರಾಜ್ಯದ ಸ್ತ್ರೀಯನ್ನು ವಿವಾಹವಾದರೆ ಆತನ ಹಕ್ಕಿಗೆ ಯಾವುದೇ ಧಕ್ಕೆ ಬರುವುದಿಲ್ಲ. ಜೊತೆಗೆ ಆತನ ಪತ್ನಿಗೂ ಈ ಎಲ್ಲಾ ಹಕ್ಕುಗಳು ಪ್ರಾಪ್ತವಾಗುತ್ತವೆ. ವಿವಾಹ, ಆಸ್ತಿ ಖರೀದಿ, ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ವಿಚಾರದಲ್ಲಿ ತಾರತಮ್ಯವಿದೆ.

ಆದ್ದರಿಂದ, ಕಲಂ 35-ಎ ಸಿಂಧುತ್ವ ಪ್ರಶ್ನಿಸಿ, ಕಲಂ 35-ಎ ಅನ್ವಯ ಕಣಿವೆ ರಾಜ್ಯದಲ್ಲಿನ ಕೆಲವು ಜನರಿಗೆ ಆ ಹಕ್ಕುಗಳು ಸಿಗುತ್ತಿಲ್ಲ ಎಂದು ಆರೋಪಿಸಿ ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಪ್ರಕರಣದ ವಿಚಾರಣೆ ಹಲವು ವರ್ಷಗಳಿಂದ ನಡೆಯುತ್ತಿದೆ. ಈ ಕಲಂನಿಂದಲೂ ಕಾಶ್ಮೀರ ಅಭಿವೃದ್ಧಿಯಾಗುತ್ತಿಲ್ಲ, ಉದ್ಯಮಕ್ಕೆ ಈ ಕಲಂ ಅವಕಾಶ ನೀಡುವುದಿಲ್ಲ. ಹಾಗಾಗಿ ಇದನ್ನು ರದ್ದು ಪಡಿಸಬೇಕು ಎಂದು ಹೇಳಲಾಗುತ್ತಿದೆ.

ಕಾಶ್ಮೀರಕ್ಕೆ ಕಾಲಿಡಬೇಡಿ: ಯುಕೆ, ಆಸೀಸ್, ಜರ್ಮನಿ ಎಚ್ಚರಿಕೆ!

ಪ್ರತ್ಯೇಕತಾವಾದಿಗಳಲ್ಲಿ ನಡುಕ

ಕಾಶ್ಮೀರ ಭಾರತದ ಭಾಗವಾದಲ್ಲಿನಿಂದ ಕಾಶ್ಮೀರ ಪ್ರತ್ಯೇಕ ರಾಷ್ಟ್ರವಾಗಬೇಕು ಎಂದು ಒಂದು ಬಣ ವಾದಿಸುತ್ತಿದ್ದರೆ, ಕಾಶ್ಮೀರ ಪಾಕಿಸ್ತಾನಕ್ಕೆ ಸೇರಬೇಕು ಎಂದು ಇನ್ನೊಂದು ಬಣ ವಾದಿಸುತ್ತಿದೆ. ಸದ್ಯ ಕೇಂದ್ರ ಸರ್ಕಾರ ಭಾರೀ ಬಿಗಿ ಭದ್ರತೆ ಕಲ್ಪಿಸುತ್ತಿರುವ ಹಿಂದೆ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಸಾರಲು ಪ್ರಯತ್ನಿಸುತ್ತಿದೆಯೇ ಎಂಬ ಗುಮಾನಿಯೊಂದು ಮುನ್ನೆಲೆಗೆ ಬಂದಿದೆ. ಇದು ಅಲ್ಲಿನ ಪ್ರತ್ಯೇಕತಾವಾದಿಗಳಲ್ಲಿ ನಡುಕ ಹುಟ್ಟಿಸಿದೆ.

ಇದಕ್ಕೆ ಪುಷ್ಟೀ ನೀಡುವಂತೆ ಪ್ರತ್ಯೇಕತಾವಾದಿ ನಾಯಕ ಸೈಯದ ಆಲಿ ಗಿಲಾನಿ, ‘ಕಣಿವೆಯಲ್ಲಿ ವಾಸಿಸುತ್ತಿರುವ ಎಲ್ಲಾ ಮುಸ್ಮಿಮರಿಗೊಂದು ಸಂದೇಶ. ನಾವೆಲ್ಲರೂ ಸತ್ತರೂ ನೀವು ಸುಮ್ಮನಿರುತ್ತೀರಿ. ಆದರೆ ನೀವು ಆ ಅಲ್ಲನಿಗೆ ಉತ್ತರ ಕೊಡಲೇಬೇಕು. ಭಾರತೀಯರು ಮಾನವಕುಲದ ಇತಿಹಾಸದಲ್ಲಿ ಅತಿದೊಡ್ಡ ನರಮೇಧವನ್ನು ಪ್ರಾರಂಭಿಸಲಿದ್ದಾರೆ. ಅಲ್ಲಾನು ನಮ್ಮನ್ನು ರಕ್ಷಿಸಲಿ’ ಎಂದು ಟ್ವೀಟ್‌ ಮಾಡಿದ್ದಾರೆ.

ಪಾಕಿಸ್ತಾನಕ್ಕೆ ಅತಿದೊಡ್ಡ ಪಾಠ ಕಲಿಸಲು ಸಿದ್ಧತೆ?

ಇದೇ ವರ್ಷ ಫೆಬ್ರವರಿಯಲ್ಲಿ ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಪಾಕ್‌ ಪ್ರಾಯೋಜಿತ ಆತ್ಮಹತ್ಯಾ ದಾಳಿ ಬಳಿಕ ಬಾಲಾಕೋಟ್‌ನ ಉಗ್ರರ ಶಿಬಿರಗಳ ಮೇಲೆ ಏರ್‌ಸ್ಟೆ್ರೖಕ್‌ ಕೈಗೊಳ್ಳುವ ಮೂಲಕ ಭಾರತ ಪಾಕ್‌ಗೆ ತಕ್ಕ ಪಾಠ ಕಲಿಸಿತ್ತು.

ಅದಾದ ಬಳಿಕವೂ ಗಡಿ ನಿಯಂತ್ರಣ ರೇಖೆ ಬಳಿ ತನ್ನ ಕುತಂತ್ರ ಬುದ್ಧಿ ತೋರುತ್ತಿರುವ ಹಾಗೂ ಭಯೋತ್ಪಾದಕರ ಅಡಗುತಾಣವಾಗಿರುವ ಪಾಕಿಸ್ತಾನಕ್ಕೆ ಹಿಂದೆಂದೂ ಕಲಿಸದ ಅತಿ ದೊಡ್ಡ ಪಾಠ ಕಲಿಸಬಹುದು, ಅದಕ್ಕಾಗಿಯೇ ಈ ಸಿದ್ಧತೆ ಎಂದು ಇರಬಹುದು ಎಂದೂ ಹೇಳಲಾಗುತ್ತಿದೆ.

ಜಮ್ಮು-ಕಾಶ್ಮೀರವನ್ನು 3 ಭಾಗ ಮಾಡಲು ಸಂವಿಧಾನದಲ್ಲಿ ಅವಕಾಶವಿದೆಯೇ?

ಈ ಸೇನಾ ಜಮಾವಣೆ ಹಿಂದೆ ಕಾಶ್ಮೀರವನ್ನು 3 ಭಾಗ ಮಾಡುವ ಉದ್ದೇಶ ಇದೆ ಎಂಬ ಮಾತುಗಳು ಕೇಳುತ್ತಿವೆ. ಅಂದರೆ ಕಾಶ್ಮೀರದಲ್ಲಿನ ಉಗ್ರ ಚಟುವಟಿಕೆಗಳ ಕಾರಣಕ್ಕೆ ಜಮ್ಮು ಮತ್ತು ಲಡಾಕ್‌ ಅಭಿವೃದ್ಧಿಯಾಗುತ್ತಿಲ್ಲ ಎಂಬ ಆರೋಪಗಳಿವೆ. ಹಾಗೆಯೇ ಕಾಶ್ಮೀರ ಹೊರತಾದ ಉಳಿದೆರಡು ಭಾಗದಲ್ಲಿ ಬಿಜೆಪಿ ಬಲಿಷ್ಠವಾಗಿದೆ.

ಆದ್ದರಿಂದ ಜಮ್ಮುವಿಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಿ, ಕಾಶ್ಮೀರ ಮತ್ತು ಲಡಾಕ್‌ಗೆ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನ ನೀಡುವ ಬಗ್ಗೆ ಚರ್ಚೆಯಾಗುತ್ತಿದೆ ಎನ್ನಲಾಗಿದೆ. ಈ ಪ್ರಸ್ತಾಪಕ್ಕೆ ಜಮ್ಮು ಮತ್ತು ಲಡಾಕ್‌ನ ಜನಪ್ರತಿನಿಧಿಗಳು ಈಗಾಗಲೇ ಒಪ್ಪಿಗೆ ಸೂಚಿಸಿದ್ದು, ಪ್ರಾದೇಶಿಕ ಪಕ್ಷಗಳಾದ ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಪಿಡಿಪಿ ಇದಕ್ಕೆ ವಿರೋಧ ವ್ಯಕ್ತಪಡಿಸಿವೆ ಎನ್ನಲಾಗಿದೆ.

ಏತನ್ಮಧ್ಯೆ ಕಾಶ್ಮೀರದೊಂದಿಗೆ ಗಡಿ ಹಂಚಿಕೊಳ್ಳುವ ರಾಜ್ಯಗಳ ಗಡಿಗಳನ್ನು ಬದಲಾಯಿಸಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ರಾಜ್ಯವನ್ನು ಜಮ್ಮು, ಕಾಶ್ಮೀರ ಹಾಗೂ ಲಡಾಕ್‌ ಎಂದು 3 ಭಾಗಗಳಾಗಿ ವಿಭಜನೆ ಮಾಡಿದ್ದೇ ಆದಲ್ಲಿ ಭಯೋತ್ಪಾದನೆಯು ಕಾಶ್ಮೀರಕ್ಕೆ ಮಿತಿಗೊಳ್ಳಬಹುದು ಎಂದು ಭಾವಿಸಲಾಗಿದೆ.

ಕಾಶ್ಮೀರ ತೊರೆದ 2 ಲಕ್ಷಕ್ಕೂ ಅಧಿಕ ಜನರು

ಕೇಂದ್ರ ಸರ್ಕಾರ 38,000 ಹೆಚ್ಚುವರಿ ಸೇನೆಯನ್ನು ಕಳುಹಿಸಿದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಅಲ್ಲಿನ ಸ್ಥಳೀಯ ಸರ್ಕಾರ ದಾಳಿ ನಡೆಯುವ ಸಾಧ್ಯತೆ ಇರುವ ಎಚ್ಚರಿಕೆಯನ್ನೂ ನೀಡಿದೆ.

ಅಮರನಾಥ ಯಾತ್ರೆಯಲ್ಲಿ ಉಗ್ರರು ದಾಳಿ ನಡೆಸುವ ಕುರಿತಾದ ಸಾಕ್ಷ್ಯಾದಾರಗಳು ಸಿಕ್ಕ ಕಾರಣ ಅಮರನಾಥ ಯಾತ್ರೆಯನ್ನೂ ರದ್ದು ಮಾಡಲಾಗಿದೆ. ಗುಪ್ತಚರ ಇಲಾಖೆಯು ಈ ಮಾಹಿತಿ ನೀಡಿದ ಬಳಿಕ 20,000 ಯಾತ್ರಾರ್ಥಿಗಳು ಮತ್ತು ಪ್ರವಾಸಿಗರು ಹಾಗೂ 2 ಲಕ್ಷ ಕಾರ್ಮಿಕರು ಕಾಶ್ಮೀರವನ್ನು ತೊರೆದಿದ್ದಾರೆ.

ಕಾಶ್ಮೀರದ ವಿದ್ಯಮಾನಗಳನ್ನು ಗಮನಿಸುತ್ತಿರುವ ಬ್ರಿಟನ್‌ ಮತ್ತು ಜರ್ಮನಿ ಸರ್ಕಾರಗಳೂ ಕೂಡ ಕಾಶ್ಮೀರಕ್ಕೆ ಪ್ರವಾಸ ಹೊರಟಿರುವ ತಮ್ಮ ನಾಗರಿಕರಿಗೆ ಸೂಕ್ತ ಭದ್ರತೆ ಇಲ್ಲದೆ ಪ್ರಯಾಣಿಸಬೇಡಿ ಎಂಬ ಎಚ್ಚರಿಕೆಯನ್ನು ನೀಡಿವೆ.

Follow Us:
Download App:
  • android
  • ios