ಬೆಂಗಳೂರು(ಸೆ.13): ಸುಪ್ರೀಂ ಕೋರ್ಟ್ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯದ ವಿರುದ್ಧವಾಗಿ ತೀರ್ಪು ನೀಡಿ, ತಮಿಳುನಾಡಿಗೆ ಮತ್ತಷ್ಟು ನೀರು ಬಿಡುವಂತೆ ಆದೇಶ ನೀಡಿದ ಹಿನ್ನಲೆಯಲ್ಲಿ ಬೆಂಗಳೂರು ಹೊತ್ತಿ ಉರಿದಿತ್ತು. ಈ ಹಿನ್ನಲೆಯಲ್ಲಿ ರಾಜಧಾನಿಯಲ್ಲಿ 25 ವರ್ಷಗಳ ಬಳಿಕ ಕರ್ಫ್ಯೂ ಜಾರಿಗೆ ತರಲಾಗಿದೆ.
ಈಗಾಗಲೇ ಗಡಿ ಭಾಗಗಳಲ್ಲಿ ಬಂದ್ ವಾತಾವರಣ ನಿರ್ಮಾಣವಾಗಿದೆ. ಮುಂಜಾಗೃತ ಕ್ರಮವಾಗಿ ಪೊಲೀಸರು ಎಲ್ಲೆಡೆ ಬಿಗಿ ಪೊಲೀಸ್ ಬಂದೊಬಸ್ತ್ ನೀಡಿದ್ದಾರೆ.
ಇನ್ನು ನಿನ್ನೇ ಹತ್ತಿ ಉರಿದಿದ್ದ ಮಾಗಡಿ ರೋಡ್, ಕೆ.ಪಿ ಅಗ್ರಹಾರ, ವಿಜಯನಗರ, ಚಂದ್ರಾಲೇಔಟ್, ಬ್ಯಾಟರಾಯನಪುರ, ರಾಜರಾಜೇಶ್ವರಿನಗರ, ಜ್ಞಾನಭಾರತಿ, ಕೆಂಗೇರಿ, ಕಾಮಾಕ್ಷಿಪಾಳ್ಯ, ರಾಜಗೋಪಾಲನಗರ, ಸುಂಕದಕಟ್ಟೆ, ಲಗ್ಗೆರೆ, ರಾಜಾಜಿನಗರ, ನಂದಿನಿ ಲೇಔಟ್, ಪೀಣ್ಯ, ಯಶವಂತಪುರ ಈ 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯು ಜಾರಿಗೊಳಿಸಲಾಗಿದೆ. ಪ್ರತಿಭಟನೆ ಹೆಸರಿನಲ್ಲಿ ಹಿಂಸಚಾರಕ್ಕೆ ಇಳಿದರೆ ಕಂಡಲ್ಲಿ ಗುಂಡು ಆದೇಶ ಜಾರಿಗೊಳಿಸಲಾಗಿದೆ.
ಈ ಹಿನ್ನಲೆಯಲ್ಲಿ ಜಾರಿ ಪ್ರದೇಶಗಳಲ್ಲಿ ಅಘೋಷಿತ ಬಂದ್ ನಿರ್ಮಾಣವಾಗಿದೆ. ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದ್ ಮಾಡಲಾಗಿದ್ದು, ಎಂದಿನಂತೆ ಹಾಲು, ಪೇಪರ್ ಖರೀದಿ ನಡೆದಿದ್ದು, ಕರ್ಫ್ಯೂ ಜಾರಿ ಪ್ರದೇಶಗಳಿಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.
ಕೆಲವೆಡೆ ಪೆಟ್ರೋಲ್ ಬಂಕ್'ಗಳೂ ಬಂದ್ ಮಾಡಲಾಗಿದ್ದು, ತಮಿಳುನಾಡಿಗೆ ಹೋಗ ಬೇಕಿದ್ದ ಬಸ್ ಸಂಚಾರ ಸ್ಥಗಿತವಾಗಿದೆ. ಇದರೊಂದಿಗೆ ಮಂಡ್ಯ, ಮೈಸೂರಿನಲ್ಲಿ ಬಸ್ ಸಂಚಾರವನ್ನು ನಿಲ್ಲಿಸಲಾಗಿದೆ.
ಇದಲ್ಲದೇ ಈ ಭಾಗದಲ್ಲಿ ವಾಹನ ಸಂಚಾರವೂ ವಿರಳ, ಜನರ ಸಂಚಾರ ವಿರಳವಾಗಿದ್ದು, ಬೆಂಗಳೂರಿನ ಬಹುತೇಕ ರಸ್ತೆಗಳು ಖಾಲಿ ಖಾಲಿಯಾಗಿವೆ.
ಆದರೆ ಕರ್ಫ್ಯೂ ಜಾರಿಯಲ್ಲಿದ್ದರೂ ಹೆಗ್ಗನಹಳ್ಳಿಯಲ್ಲಿ ಪ್ರತಿಭಟನೆ ನಡೆಯಿತ್ತಿದ್ದು, ಹೆಗ್ಗನಹಳ್ಳಿಯಲ್ಲಿ ಮತ್ತೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದ್ದು, ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ.
ಡಿಸಿಪಿ ಹರ್ಷ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಒಂದೋ ಮನೆಯ ಒಳಗೆ ಹೋಗಿ ಇಲ್ಲ ವಶಕ್ಕೆ ಪಡೆಯುವದಾಗಿ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ.
