ಡೆಹ್ರಾಡೂನ್[ಜೂ.25]: 200 ಕೋಟಿ ವೆಚ್ಚದ ಅದ್ದೂರಿ ಮದುವೆಗೆ ಪರವಾನಿಗೆ ನೀಡಿದ್ದ ಉತ್ತರಾಖಂಡ್ ನ ಔಲಿಯ ನಗರ ನಿಗಮ ಮಂಡಳಿ ಸದ್ಯ ಅಲ್ಲಿ ಬಿದ್ದಿರುವ ರಾಶಿ ರಾಶಿ ಕಸ ಹೇಗೆ ಖಾಲಿ ಮಾಡಿಸುವುದು ಎಂದು ತಲೆ ಚಚ್ಚಿಕೊಳ್ಳುತ್ತಿದೆ. 

ಹೌದು ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ವಿವಾದಿತ ಉದ್ಯಮಿ ಗುಪ್ತಾ ಕುಟುಂಬದ ಮದುವೆಯಾಗಿತ್ತು. ತುಲ್ ಗುಪ್ತಾರ ಮಗ ಶಶಾಂಕ್ ಗುಪ್ತಾ ಹಾಗೂ ದುಬೈನ ರಿಯಲ್ಟಿ ಉದ್ಯಮಿ ವಿಧಾಲ್ ಜಾಲಾನ್ ಮಗಳು ಶಿವಾಂಗಿ ಮದುವೆ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಒಂದು ಸ್ಕೀ ರೆಸಾರ್ಟ್ ನಲ್ಲಿ ಆಯೋಜಿಸಲಾಗಿತ್ತು. 

ಈ ಮದುವೆಯಲ್ಲಿ ಉತ್ತರಾಖಂಡ್ ನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್, ಬಾಲಿವುಡ್ ನಟಿ ಕತ್ರೀನಾ ಕೈಫ್, ಯೋಗ ಗುರು ಬಾಬಾ ರಾಮ್ ದೇವ್ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು. ಬಾಬಾ ರಾಮ್ ದೇವ್ ಮದುವೆ ಕಾರ್ಯಕ್ರಮದಲ್ಲಿ 2 ಗಂಟೆಗಳ ಯೋಗ ಕಾರ್ಯಕ್ರಮ ನಡೆಸಿದ್ದರು. ಅತಿಥಿಗಳನ್ನು ಕರೆ ತರಲು ಹೆಲಿಕಾಪ್ಟರ್ ಗಳನ್ನೂ ಬಾಡಿಗೆಗೆ ಪಡೆಯಲಾಗಿತ್ತು. ಇಲ್ಲಿನ ಬಹುತೇಕ ಎಲ್ಲಾ ಹೋಟೆಲ್ ಗಳನ್ನು ಅತಿಥಿಗಳಿಗಾಘಿ ಬುಕ್ ಮಾಡಲಾಗಿತ್ತು ಹಾಗೂ ಸ್ವಿಡ್ಜರ್ಲೆಂಡ್ ನಿಂದ ಹೂವುಗಳನ್ನು ತರಿಸಲಾಗಿತ್ತು. 

ಇಂತಹ ಅದ್ಧೂರಿ ಮದುವೆ ಕಾರ್ಯಕ್ರಮ ಸದ್ಯ ಮುಕ್ತಾಯವಾಗಿದೆ. ಆದರೆ ಕುಟುಂಬಸ್ಥರು ಮಾತ್ರ ನಗರ ನಿಗಮ ಪಾಲಿಕೆ ಸಿಬ್ಬಂದಿಗಳಿಗೆ ಬರೋಬ್ಬರಿ 40 ಕ್ವಿಂಟಾಲ್ ಗೂ ಹೆಚ್ಚು ಕಸದವನ್ನು ಬಿಟ್ಟು ಹೋಗಿದ್ದಾರೆ. ಸದ್ಯ ನಗರಪಾಲಿಕಾ ಸಚಿವ ಜೋಶಿಮಠ್ ಜೊತೆಗೆ 20 ಜನರ ತಂಡಕ್ಕೆ ಕಸ ಕಸ ನಿರ್ವಹಣಾ ಜವಾಬ್ದಾರಿ ಹೊರಿಸಲಾಗಿದೆ. 

ಇಲ್ಲಿನ ಸ್ಥಳೀಯ ವ್ಯಕ್ತಿಯೊಬ್ಬರು ಈ ಕುರಿತಾಗಿ ಪ್ರತಿಕ್ರಿಯಿಸುತ್ತಾ 'ಎಲ್ಲೆಡೆ ಪ್ಲಾಸ್ಟಿಕ್ಪ್ಯಾಕೆಟ್ ಹಾಗೂ ಬಾಟಲ್ ಗಳು ಬಿದ್ದಿವೆ. ನಮ್ಮ ಗೋವುಗಳು ಪ್ರತಿ ದಿನ ಇಲ್ಲಿನ ಗುಡ್ಡಗಾಡು ಪ್ರದೇಶಕ್ಕೆ ಮೇಯಲು ಹೋಗುತ್ತವೆ. ಹೀಗಿರುವಗ ಅವುಗಳು ಪ್ಲಾಸ್ಟಿಕ್ ತಿಂದರೆ ಏನು ಮಡುವುದು? ಇದಕ್ಕೆ ಯಾರು ಹೊಣೆ? ಇಲ್ಲಿನ ಸ್ಥಿತಿ ನೋಡಲಾಗುತ್ತಿಲ್ಲ' ಎಂದಿದ್ದಾರೆ.