ಇಸ್ಲಾಮಾಬಾದ್[ಜು.30]: ಭ್ರಷ್ಟಾಚಾರ ಪ್ರಕರಣದಲ್ಲಿ ಪದಚ್ಯತಗೊಂಡು ಸೆರೆವಾಸ ಶಿಕ್ಷೆ ಅನುಭವಿಸುತ್ತಿರುವ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಆಸ್ಪತ್ರೆಯಲ್ಲಿ ಭಾನುವಾರ ಒಂದು ವಿಚಿತ್ರ ವಿದ್ಯಾಮಾನ ಸಂಭವಿಸಿತು.

ಅನಾರೋಗ್ಯದ ಕಾರಣದಿಂದ ನವಾಜ್ ಷರೀಪ್ ಅವರು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ವೈದ್ಯ ಡಾ. ಎಜಾಜ್ ಖ್ವಾದೀರ್ ಷರೀಷರಿಗೆ  ಚಿಕಿತ್ಸೆ ನೀಡುತ್ತಿರುವಾಗಲೇ ಹೃದಯಾಘಾತಕ್ಕೆ ತುತ್ತಾದರು. ತಕ್ಷಣವೇ ಅವರನ್ನು ಷರೀಫರು ದಾಖಲಾಗಿದ್ದ ವಾರ್ಡಿಗೆ ದಾಖಲಿಸಲಾಯಿತು. ಸದ್ಯ ಖ್ವಾದೀರ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಪ್ರಾಣಾಪಾಯವಿಲ್ಲ ಎನ್ನಲಾಗಿದೆ. 

ಅಕ್ರಮ ಸಂಪತ್ತು, ವಿದೇಶದಲ್ಲಿ ಆಸ್ತಿ ಮುಂತಾದ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನ ಕೋರ್ಟ್ ನವಾಜ್ ಷರೀಫ್ ಹಾಗೂ ಅವರ ಪುತ್ರಿಗೆ ದಂಡವನ್ನು ಒಳಗೊಂಡು 10 ವರ್ಷಗಳ ಕಾಲ ಜೈಲು ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿತ್ತು. ಪತ್ನಿಯ ಚಿಕಿತ್ಸೆಯ ಕಾರಣದಿಂದ ಲಂಡನ್ ನಲ್ಲಿ ನೆಲಸಿದ್ದ ನವಾಜ್ ಷರೀಫ್ ರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಕೆಲ ದಿನಗಳ ಹಿಂದಷ್ಟೆ ಬಂಧಿಸಿದ್ದರು. 

ಇತ್ತೀಚಿಗೆ ಪಾಕ್ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ನವಾಜರ ಪಿಎಂಎಲ್ ಪಕ್ಷ ನಿರೀಕ್ಷಿತ ಮಟ್ಟದ ಜಯ ಗಳಿಸಿರಲಿಲ್ಲ. ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಹೆಚ್ಚು ಸ್ಥಾನ ಪಡೆದು ಸರ್ಕಾರ ರಚಿಸಲು ಮುಂದಾಗಿದೆ. ಆಗಸ್ಟ್ 14 ರಂದು ಇಮ್ರಾನ್ ಖಾನ್ ಪಾಕ್ ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿದೆ. ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರವಾದಗಿನಿಂದ ಯಾವೊಂದು ಪಕ್ಷವು ಕೂಡ ಅಧಿಕಾರವನ್ನು ಪೂರ್ಣಗೊಳಿಸಿಲ್ಲ. ಸೇನೆಯೇ ಪರೋಕ್ಷವಾಗಿ ಸರ್ಕಾರವನ್ನು ಆಳುತ್ತಿದೆ.