ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಗೆ ಇನ್ಮುಂದೆ ಇಡ್ಲಿ, ದೋಸೆ, ಪೂರಿ ಮತ್ತಿತರ ತಿಂಡಿಯ ಜತೆಗೆ ಚಟ್ನಿ ಉಚಿತವಾಗಿ ದೊರೆಯೋದು ಡೌಟ್! ಅಷ್ಟೇ ಅಲ್ಲ ಎರಡು, ಮೂರು ಬಾರಿ ಚಟ್ನಿ ಹಾಕಿಸಿಕೊಳ್ಳುವವರಿಗೂ ಕತ್ತರಿ ಬೀಳಬಹುದು. ಏಕೆ ಅಂತೀರಾ? ಇದು ಜಿಎಸ್‌ಟಿ ಪ್ರಭಾವ.
ಬೆಂಗಳೂರು(ಆ.12): ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಗ್ರಾಹಕರಿಗೆ ಇನ್ಮುಂದೆ ಇಡ್ಲಿ, ದೋಸೆ, ಪೂರಿ ಮತ್ತಿತರ ತಿಂಡಿಯ ಜತೆಗೆ ಚಟ್ನಿ ಉಚಿತವಾಗಿ ದೊರೆಯೋದು ಡೌಟ್! ಅಷ್ಟೇ ಅಲ್ಲ ಎರಡು, ಮೂರು ಬಾರಿ ಚಟ್ನಿ ಹಾಕಿಸಿಕೊಳ್ಳುವವರಿಗೂ ಕತ್ತರಿ ಬೀಳಬಹುದು.
ಏಕೆ ಅಂತೀರಾ? ಇದು ಜಿಎಸ್ಟಿ ಪ್ರಭಾವ. ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ ಹೊಸ ರಾಷ್ಟ್ರೀಯ ಏಕರೂಪ ತೆರಿಗೆ ನೀತಿಯಲ್ಲಿ ಸಾಮಾನ್ಯ ಪದಾರ್ಥಗಳ ಪಟ್ಟಿಯಲ್ಲಿದ್ದ ಹುರಿಗಡ್ಲೆ ಯನ್ನು, ಗೋಡಂಬಿ, ಬಾದಾಮಿ, ಖರ್ಜೂ ರದಂತಹ ಶ್ರೀಮಂತರ ಆಹಾರ ಪದಾರ್ಥಗಳ ಪಟ್ಟಿಗೆ ಸೇರಿಸಿ ಅದರ ಮೇಲೆ ಶೇ.12ರಷ್ಟು ತೆರಿಗೆ ವಿಧಿಸಿದೆ. ಇದರ ಪರಿಣಾಮ ಮುಂದೆ ಹೋಟೆಲ್, ರೆಸ್ಟೋರೆಂಟ್ಗಳು ಚಟ್ನಿಗೂ ಬಿಲ್ ವಿಧಿಸಬಹುದು ಎಂದು ಅಖಿಲ ಕರ್ನಾಟಕ ಹುರಿಗಡ್ಲೆ ಉತ್ಪಾದಕರ ಸಂಘ ಹೇಳಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ರವಿ ಪ್ರಸಾದ್, ಹುರಿಗಡ್ಲೆ ಮೇಲೆ ಶೇ.12ರಷ್ಟು ಅಧಿಕ ಜಿಎಸ್ಟಿ ವಿಧಿಸಿರುವುದಕ್ಕೆ ಹೋಟೆಲ್, ರೆಸ್ಟೋರೆಂಟ್ ಮಾಲೀಕರು ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ ನಮ್ಮ ಸಂಘದ ವಿರೋಧವೂ ಇದೆ. ಹುರಿಗಡ್ಲೆ ಸಾಲಿನಲ್ಲಿ ಬರುವ ಇತರೆ ಪದಾರ್ಥಗಳ ಮೇಲಿನ ತೆರಿಗೆಯನ್ನು ಶೇ.0ಗೆ ಇಳಿಸಿರುವ ಸರ್ಕಾರ, ಹುರಿಗಡ್ಲೆ ಮೇಲಿನ ತೆರಿಗೆಯನ್ನು ಮಾತ್ರ ಶೇ.5ರಿಂದ 12ಕ್ಕೆ ಏರಿಸಿದೆ.
ಹುರಿಗಡ್ಲೆ ಉತ್ಪಾದಕ ಉದ್ಯಮದ ಕೈಗಾರಿಕೆಗಳು ಸಗಟು ಖರೀದಿದಾರರಾದ ಹೋಟೆಲ್, ರೆಸ್ಟೋರೆಂಟ್ಗಳ ಮೇಲೆ ಈ ತೆರಿಗೆ ವಿಧಿಸಬೇಕಾಗುತ್ತದೆ. ಇದರಿಂದ ಅನಿವಾರ್ಯವಾಗಿ ಗ್ರಾಹಕರ ಮೇಲೆ ಜಿಎಸ್ಟಿ ದರ ಹೇರಬೇಕಾಗುತ್ತದೆ. ಇದರಿಂದ ಇನ್ಮುಂದೆ ಹೋಟೆಲ್, ರೆಸ್ಟೋರೆಂಟ್ಗಳ ಉಪಾಹಾರದಲ್ಲಿ ಚಟ್ನಿಗೂ ಪ್ರತ್ಯೇಕ ಬಿಲ್ ವಿಧಿಸಬೇಕಾಗಬಹುದು ಎಂದು ಹೇಳಿದರು. ಅಲ್ಲದೆ, ಎರಡು ಮೂರು ಬಾರಿ ಗ್ರಾಹಕರು ಚಟ್ನಿ ಕೇಳುವುದಕ್ಕೂ ನಿರ್ಬಂಧ ಬೀಳುತ್ತದೆ. ಹೆಚ್ಚುವರಿ ಚಟ್ನಿಗೂ ಪ್ರತ್ಯೇಕ ಹಣ ಪಾವತಿ ಮಾಡಬೇಕಾಗಿಬರಹುದು.
ಉಚಿತವಾಗಿ ಚಟ್ನಿ ನೀಡಲಾಗುತ್ತಿರುವ ಈಗಿನ ಸಂದರ್ಭದಲ್ಲೇ ಗ್ರಾಹಕರು, ಬಿಲ್ಲುದಾರರ ನಡುವೆ ಆಗಾಗ ಹೆಚ್ಚುವರಿಯಾಗಿ ಚಟ್ನಿ ಕೇಳುವುದರಿಂದ ಜಗಳವಾಗುತ್ತಿರುತ್ತದೆ. ಹೀಗಿರುವಾಗ ಇನ್ನು ಚಟ್ನಿಗೂ ಬಿಲ್ ನೀಡುವುದರಿಂದ ಗ್ರಾಹಕರು ಹೊರೆಯನ್ನು ಅಷ್ಟು ಸುಲಭವಾಗಿ ಸಹಿಸುವುದಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ಹುರಿಗಡ್ಲೆ ಮೇಲಿನ ಶೇ.12ರಷ್ಟು ಜಿಎಸ್ಟಿ ದರವನ್ನು ಇಳಿಸುವ ಸಂಬಂ‘ ಮರು ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
500 ಕೋಟಿ ವಹಿವಾಟು:
ಸದ್ಯ ರಾಜ್ಯದಲ್ಲಿ ಹುರಿಗಡ್ಲೆ ಉದ್ಯಮದಲ್ಲಿ ಸುಮಾರು 500 ಕೋಟಿ ರು.ನಷ್ಟು ವ್ಯಾಪಾರ ನಡೆಯುತ್ತಿದೆ. 10 ಸಾವಿರಕ್ಕೂ ಹೆಚ್ಚು ಜನರು ಈ ಕೈಗಾರಿಕೆಗಳಲ್ಲಿ ಉದ್ಯೋಗ ಪಡೆದಿದ್ದಾರೆ. ಹುಬ್ಬಳ್ಳಿ, ಗದಗ, ರಾಯಚೂರು, ಚಿತ್ರದುರ್ಗ, ಬಳ್ಳಾರಿ, ದಾವಣ ಗೆರೆ, ತುಮಕೂರು, ಮಂಡ್ಯ, ಮೈಸೂರಿನಲ್ಲಿ ಈ ಉದ್ಯಮಗಳು ಕೇಂದ್ರಿಕೃತವಾಗಿದೆ. ಪ್ರಮುಖವಾಗಿ ಚಟ್ನಿ, ಚಕ್ಕುಲಿ, ಮಂಡಕ್ಕಿ, ದೇವರ ಪ್ರಸಾದ, ಉಂಡೆ- ನಾಗರಪಂಚಮಿ, ಸಂಕ್ರಾಂತಿಗಳಲ್ಲಿ ಸಿಹಿ ತಿಂಡಿಗಳಿಗೆ ಹುರಿಗಡ್ಲೆ ಬಳಸಲಾಗುತ್ತದೆ.
