ಬಳ್ಳಾರಿ [ಜೂ.17] : ಜಿಂದಾಲ್ ಗೆ ಭೂಮಿ ಪರಭಾರೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೈ ಶಾಸಕ ಆನಂದ್ ಸಿಂಗ್ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಸರ್ಕಾರದ ನಡೆ ಬಗ್ಗೆ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು, ಇದೀಗ ಒಬ್ಬೊಬ್ಬರೇ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 

ಬಳ್ಳಾರಿಯಲ್ಲಿ ಮಾತನಾಡಿದ ಆನಂದ್ ಸಿಂಗ್ ಜಿಲ್ಲೆಯ ಜನರ ಹಿತದೃಷ್ಟಿಯಿಂದ ಹೋರಾಟಕ್ಕೆ ಇಳಿದಿರುವುದಾಗಿ ಹೇಳಿದ್ದಾರೆ. ಜಿಲ್ಲೆಯಲ್ಲಿ ಕೈಗಾರಿಕೆ ಹೆಸರಿನಲ್ಲಿ ಭೂಮಿ ಪಡೆದು ಇಲ್ಲಿ ಕೈಗಾರಿಕೆ ಸ್ಥಾಪನೆ ಮಾಡದ ಭೂಮಿಯನ್ನು ವಾಪಸ್ ಪಡೆಯಬೇಕು. 

ಇಂತಹ ಕಂಪನಿಗಳಿಗೆ ಸರ್ಕಾರ ಭೂಮಿ ನೀಡಿದ್ದು, ಇದರಿಂದ ಜಿಲ್ಲೆಯಲ್ಲಿ ಎಷ್ಟು ಯುವಕರಿಗೆ ಉದ್ಯೋಗ ದೊರೆತಿದೆ. ಎಷ್ಟು ಗ್ರಾಮಗಳ ಅಭಿವೃದ್ಧಿಯಾಗಿದೆ ಎಂದು ಶಾಸಕ ಆನಂದ್ ಸಿಂಗ್ ಪ್ರಶ್ನೆ ಮಾಡಿದ್ದಾರೆ.  

ಜಿಂದಾಲ್ ಗೆ ಭೂಮಿ ನೀಡಿರುವ ಸಂಬಂಧ ಹೋರಾಟ ನಡೆಸಿದರೂ ಸರ್ಕಾರ ಮಣಿಯದೇ ಇದ್ದರೆ ನಮ್ಮ ಹೋರಾಟದ ಪರಿಣಾಮ ಹೆಚ್ಚಾಗುತ್ತದೆ. ಇದರಿಂದ ತಾವು ಯಾವುದೇ ರೀತಿಯ ತ್ಯಾಗಕ್ಕೂ ಸಿದ್ಧ. ಸರ್ಕಾರ ಹಾಗೂ ಪಕ್ಷದ ವಿರುದ್ಧ ನಡೆಯಲೂ ಸಿದ್ಧವೆಂದಿದ್ದಾರೆ.