ಜೇನು ನೊಣ ಪ್ರಕರಣ, ಕಾರ್ಮಿಕರ ಮಗು ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಪ್ರಕರಣ ಮತ್ತು ವಿಕ್ರಮ್‌ ಸಾವು ಪ್ರಕರಣಗಳು ಲಾಲ್‌ಬಾಗ್‌ನ ಪ್ರಮುಖ ಪ್ರದೇಶಗಳಲ್ಲಿಯೇ ಸಂಭವಿಸಿವೆ. ಹೀಗಾಗಿ ಭದ್ರತಾ ಸಿಬ್ಬಂದಿ ಎಷ್ಟರ ಮಟ್ಟಿಗೆ ಜಾಗೃತವಾಗಿ ಕಾರ್ಯ ನಿರ್ವಹಿಸುತ್ತಾರೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.

ಬೆಂಗಳೂರು: ಕಲ್ಲಿನ ಕಂಬ ಉರುಳಿ ಸಂಭವಿಸಿದ ಆಕಸ್ಮಿಕ ಅವಘಡಕ್ಕೆ ಬಾಲಕ ವಿಕ್ರಮ್‌ ಬಲಿಯಾದ ನಂತರ ಎಚ್ಚೆತ್ತುಕೊಂಡಿರುವ ತೋಟಗಾರಿಕೆ ಇಲಾಖೆ, ಲಾಲ್‌ಬಾಗ್‌ ಉದ್ಯಾನದಲ್ಲಿ ಸಮರೋಪಾದಿಯಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಮುಂದಿನ 15 ದಿನಗಳಲ್ಲಿ ಲಾಲ್‌ಬಾಗ್‌ನಲ್ಲಿರುವ ಬೆಂಚು ಕಲ್ಲುಗಳು, ಕೆರೆ ಪಕ್ಕದ ಗ್ರಿಲ್‌ಗಳ ದುರಸ್ತಿ, ಒಣಗಿರುವ ಹಳೆಯ ಮರಗಳನ್ನು ಬುಡಸಮೇತ ಅಥವಾ ಅಪಾಯಕಾರಿ ರೆಂಬೆಗಳನ್ನಷ್ಟೇ ಕಡಿಯಲು ಚಿಂತನೆ ನಡೆಸಿದೆ. ಪ್ರಮುಖವಾಗಿ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಸಹ ನಿರ್ಧರಿಸಿದೆ.

ಮುಂದಿನ ತಿಂಗಳು ಗಣರಾಜ್ಯೋತ್ಸವ ಅಂಗವಾಗಿ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ಲಕ್ಷಾಂತರ ಜನರು ವೀಕ್ಷಣೆಗೆ ಬರಲಿದ್ದು, ಮಕ್ಕಳು, ಮಹಿಳೆಯರು, ದೇಶ-ವಿದೇಶಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಲಿದ್ದಾರೆ. ಈ ವೇಳೆ ಯಾವುದೇ ರೀತಿಯ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುತ್ತಿರುವ ತೋಟಗಾರಿಕೆ ಇಲಾಖೆ, ಫಲಪುಷ್ಪ ಪ್ರದರ್ಶನಕ್ಕೂ ಮುನ್ನವೇ ಸುರಕ್ಷತಾ ಮತ್ತು ಭದ್ರತಾ ಕ್ರಮ ಕೈಗೊಳ್ಳಲು ಗಂಭೀರವಾಗಿ ಚಿಂತನೆ ನಡೆಸಿದೆ. ಲಾಲ್‌ಬಾಗ್‌ನ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಅಗತ್ಯವಿರುವ ಸುರಕ್ಷತೆ ಒದಗಿಸುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತಿದೆ.

ಕ್ಯಾಮೆರಾ ಕಣ್ಗಾವಲು: ಲಾಲ್‌'ಬಾಗ್‌ ಮುಖ್ಯ​ದ್ವಾರ, ಪಶ್ಚಿಮ ದ್ವಾರ, ಕೆ.ಎಚ್‌. ರಸ್ತೆ ಮತ್ತು ಸಿದ್ದಾಪುರ ದ್ವಾರಗಳಲ್ಲಿ ಮಾತ್ರ ಈಗ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಮುಂದಿನ 15 ದಿನಗಳಲ್ಲಿ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಸಿದ್ಧತೆ ನಡೆಸುತ್ತಿದೆ. ಬಟಾನಿಕಲ್‌ ಗಾರ್ಡನ್‌, ಸಿದ್ದಾಪುರ ದ್ವಾರದ ಕೆರೆ ಬಳಿ, ಪಶ್ಚಿಮ ದ್ವಾರ ಕೆರೆ ಏರಿ, ಗಾಜಿನ ಮನೆ ಮುಂಭಾಗ ಸೇರಿದಂತೆ ವಿವಿಧೆಡೆ ಕ್ಯಾಮೆರಾ ಅಳವಡಿಸಲು ಯೋಜನೆ ರೂಪುಗೊಳ್ಳುತ್ತಿದೆ.

ಭದ್ರತಾ ಸಿಬ್ಬಂದಿ ದಕ್ಷತೆ ಪ್ರಶ್ನಾರ್ಹ: 2015ರ ಫಲ​ಪುಷ್ಪ ಪ್ರದರ್ಶನದ ಸಂದರ್ಭದಲ್ಲಿಯೇ ಜೇನು​ನೊಣ ಕಡಿದು ಬಾಲಕಿ ಮೃತಪಟ್ಟಿದ್ದ ಪ್ರಕರಣ ಹಸಿರಾಗಿರುವಾಗಲೇ ವಿಕ್ರಮ್‌ ಸಾವು ಪ್ರಕರಣ, ಲಾಲ್‌ಬಾಗ್‌ನಲ್ಲಿರುವ ಭದ್ರತಾ ಸಿಬ್ಬಂದಿಯ ದಕ್ಷತೆ ಬಗೆಗೆ ಪ್ರಶ್ನೆ ಹುಟ್ಟು ಹಾಕಿದೆ. ಸುಮಾರು 240 ಎಕರೆ ಪ್ರದೇಶವಿರುವ ಲಾಲ್‌ಬಾಗ್‌ನಲ್ಲಿ 72 ಭದ್ರತಾ ಸಿಬ್ಬಂದಿ ಮತ್ತು ಎಂಟು ಮಂದಿ ಮೇಲ್ವಿಚಾರಕರನ್ನು ಮಾತ್ರ ನಿಯೋಜಿಸಲಾಗಿದೆ. 

ಜೇನು ನೊಣ ಪ್ರಕರಣ, ಕಾರ್ಮಿಕರ ಮಗು ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಪ್ರಕರಣ ಮತ್ತು ವಿಕ್ರಮ್‌ ಸಾವು ಪ್ರಕರಣಗಳು ಲಾಲ್‌ಬಾಗ್‌ನ ಪ್ರಮುಖ ಪ್ರದೇಶಗಳಲ್ಲಿಯೇ ಸಂಭವಿಸಿವೆ. ಹೀಗಾಗಿ ಭದ್ರತಾ ಸಿಬ್ಬಂದಿ ಎಷ್ಟರ ಮಟ್ಟಿಗೆ ಜಾಗೃತವಾಗಿ ಕಾರ್ಯ ನಿರ್ವಹಿಸುತ್ತಾರೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.

ಆಯುಕ್ತರ ಅಸಮಾಧಾನ: ಘಟನೆ ಕುರಿತು ಪ್ರತ್ರಿಕ್ರಿಯೆ ನೀಡಿದ ರಾಜ್ಯ ತೋಟಗಾರಿಕಾ ಇಲಾಖೆ ಆಯುಕ್ತ ಪಿ.ಸಿ. ರೇ, ‘ಇಲಾಖೆ ಅಧಿಕಾರಿಗಳ ಮತ್ತು ಭದ್ರತಾ ಸಿಬ್ಬಂದಿ ನಿರ್ಲಕ್ಷ್ಯದ ಬಗ್ಗೆ ಆರೋಪ ಕೇಳಿಬಂದಿದೆ. ಈ ಬಗ್ಗೆ ಸರ್ಕಾರಕ್ಕೆ ದೂರು ಸಹ ನೀಡಲಾಗಿದೆ. ಮುಂದಿನ ಎರಡು ವಾರಗಳಲ್ಲಿ ವರದಿ ಬರಲಿದ್ದು, ನಂತರ ಬೇಜವಾಬ್ದಾರಿ ತೋರಿರುವವರ ಮೇಲೆ ಕ್ರಮ ಜರುಗಿಸಲಾಗುವುದು. ಭದ್ರತಾ ಸಿಬ್ಬಂದಿ​ಗಾಗಿ ಹೊಸ ಏಜೆನ್ಸಿಗೆ ಗುತ್ತಿಗೆ ನೀಡಲಾ​ಗುತ್ತಿದ್ದು, ಎಚ್ಚರಿಕೆ ವಹಿಸುವಂತೆ ಷರತ್ತುಗಳನ್ನು ವಿಧಿಸಲಾಗುವುದು. ಸಿದ್ದಾಪುರ ಗೇಟ್‌ನಲ್ಲಿ ನುಸುಳದಂತೆ ಎಚ್ಚರಿಕೆ ವಹಿಸಲು ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ'' ಎಂದು ತಿಳಿಸಿದರು.

ಪ್ರವೇಶ ನಿರ್ಬಂಧ: ಮಗುವಿನ ಸಾವಿನಿಂದ ಉದ್ಯಾನಕ್ಕೆ ಮಂಗಳವಾರ ಭೇಟಿ ನೀಡುವ ಪ್ರತಿಯೊಬ್ಬರೂ ಕುತೂಹಲದಿಂದ ಬೋನ್ಸಾಯ್‌ ಗಾರ್ಡನ್‌ನತ್ತ ದೃಷ್ಟಿಹರಿಸುತ್ತಿದ್ದರು. ಹೆಚ್ಚಿನ ಜನದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಬೋನ್ಸಾಯ್‌ ಗಾರ್ಡನ್‌ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಸಹಜ ಸ್ಥಿತಿಗೆ ಬಂದ ನಂತರ ಎಂದಿನಂತೆ ಪ್ರವೇಶಕ್ಕೆ ಮುಕ್ತವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಥಮ ಚಿಕಿತ್ಸೆ ಎಲ್ಲಿದೆ?: ವಾಯು ವಿಹಾರಿಗಳು ಮತ್ತು ಪ್ರವಾಸಿಗರಿಗೆಂದು ಲಾಲ್‌ಬಾಗ್‌ನ ಪ್ರಮುಖ ಸ್ಥಳಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಅಳವಡಿಸ​ಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಾ​ರಾದರೂ ಮಂಗಳವಾರ ನಡೆಸಿದ ರಿಯಾಲಿಟಿ ಚೆಕ್‌ ವೇಳೆ ಉದ್ಯಾನದ ಯಾವುದೇ ಪ್ರದೇಶದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳು ಕಾಣಲಿಲ್ಲ. 

ಸಿಬ್ಬಂದಿಗೆ ಕನ್ನಡ ಗೊತ್ತಿಲ್ಲ: ಲಾಲ್‌'ಬಾಗ್‌'ನಲ್ಲಿ ನಿಯೋಜನೆಗೊಂಡಿರುವ ಹೆಚ್ಚಿನ ಭದ್ರತಾ ಸಿಬ್ಬಂದಿ ಉತ್ತರ ಭಾರತ ಮೂಲದವರಾಗಿದ್ದು, ಹೆಚ್ಚಿನವರಿಗೆ ಕನ್ನಡ ಭಾಷೆ ಮಾತನಾಡುವುದಿರಲಿ, ಅರ್ಥವೂ ಆಗುವುದಿಲ್ಲ. ಸಾರ್ವಜನಿಕರು ಏನೇ ಮಾಹಿತಿ ಕೇಳಿದರೂ ಹಿಂದಿಯಲ್ಲಿ ಹೇಳಿ ಎಂದು ಪ್ರತಿಕ್ರಿಯೆ ನೀಡುತ್ತಾರೆ. ಹೀಗಾಗಿ ಇಲ್ಲಿ ಕನ್ನಡ ಬಲ್ಲ ಭದ್ರತಾ ಸಿಬ್ಬಂದಿ ಇದ್ದರೆ ಹೆಚ್ಚು ಅನುಕೂಲ ಎಂಬ ಮಾತು ಕೇಳಿ ಬಂದಿದೆ.

ಈಡೇರದ ಅಂಗದಾನದ ಆಸೆ:
ಲಾಲ್‌ಬಾಗ್‌ನಲ್ಲಿ ಸೋಮವಾರ ಕಲ್ಲು ತಲೆ ಮೇಲೆ ಬಿದ್ದು ಮೃತಪಟ್ಟ6 ವರ್ಷದ ಬಾಲಕ ವಿಕ್ರಮ್‌ ಅಂಗಾಂಗ ದಾನ ಮಾಡುವ ಪೋಷಕರ ಆಸೆ ಕೊನೆಗೂ ಈಡೇರಲಿಲ್ಲ. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ನೇತ್ರ ದಾನ ಸಾಧ್ಯವಾಗಿಲ್ಲ. ಉಳಿದ ಅಂಗಾಂಗ ದಾನ ಮಾಡಲು ಪೋಷಕರು ಮುಂದೆ ಬಂದಿದ್ದರಾದರೂ ಅಂಗಾಂಗ ತೆಗೆಯುವ ಸಮಯ ಮೀರಿದ್ದರಿಂದ ಪೋಷಕರು ಅಂಗಾಂಗ ದಾನದ ಆಸೆ ಕೈಗೂಡಲಿಲ್ಲ.

ಕುಟುಂಬಕ್ಕೆ ಪರಿಹಾರ:
ಮೃತಪಟ್ಟವಿಕ್ರಮ್‌ ಕುಟುಂಬಕ್ಕೆ ಪರಿಹಾರ ನೀಡಲು ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಲಾಲ್‌ಬಾಗ್‌ ಮತ್ತು ಕಬ್ಬನ್‌ ಪಾರ್ಕ್ಗಳ ಪ್ರವೇಶ ಶುಲ್ಕದಿಂದ ಸಂಗ್ರಹವಾಗುವ ಹಣ ಸುವರ್ಣ ಕರ್ನಾಟಕ ಉದ್ಯಾನವನ ಪ್ರತಿಷ್ಠಾನಕ್ಕೆ ಜಮೆಯಾಗುತ್ತಿದೆ. ಈ ಹಣದಲ್ಲಿಯೇ ಪರಿಹಾರ ನೀಡುವಂತೆ ಕೋರಿ ಸಚಿವರಿಗೆ ಪತ್ರ ಬರೆಯಲಾಗಿದೆ. ಎಷ್ಟುಪರಿಹಾರ ನೀಡಬೇಕು ಎಂಬುದನ್ನು ಸಚಿವರೇ ನಿರ್ಧರಿಸಲಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಆಯುಕ್ತ ಪಿ.ಸಿ. ರೇ ತಿಳಿಸಿದರು.

ಲಾಲ್‌ಬಾಗ್‌ನ ಪ್ರತಿ ಮರ, ಕಂಬಗಳ ಮಾಹಿತಿ ಪಡೆಯಲಾಗುತ್ತಿದೆ. ಸಂಕ್ರಾಂತಿಗೆ ಮುನ್ನ ಭದ್ರತಾ ಕ್ರಮ ಕೈಗೊಳ್ಳಲಾಗುವುದು. ಮರಗಳ ಬಗ್ಗೆ ಈ ಹಿಂದೆಯೂ ಸಮೀಕ್ಷೆ ಮಾಡಲಾಗಿದೆ. ಸುರಕ್ಷತಾ ದೃಷ್ಟಿಯಿಂದ ಮತ್ತೊಮ್ಮೆ ಸಮೀಕ್ಷೆ ನಡೆಸಿ ದುರಸ್ತಿ ಕೈಗೊಳ್ಳಲಾಗುವುದು.
- ಪಿ.ಸಿ. ರೇ, ತೋಟಗಾರಿಕಾ ಇಲಾಖೆ ಆಯುಕ್ತ

ವಿಕ್ರಮ್‌ ಪೋಷಕರು ಸಹ ಎಚ್ಚರಿಕೆ ವಹಿಸಬೇಕಿತ್ತು. ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಸಂದರ್ಭದಲ್ಲಿ ಜಾಗ್ರತೆ ವಹಿಸಬೇಕು. ಫೋಟೊ ಕ್ಲಿಕ್ಕಿಸಿಕೊಳ್ಳುವ ಧಾವಂತದಲ್ಲಿ ಜಾಗ್ರತೆ ತಪ್ಪಿದರೆ ಏನಾಗಲಿದೆ ಎಂಬುದಕ್ಕೆ ಇದೊಂದು ಉದಾಹರಣೆ
- ರಶ್ಮಿ, ವಿದ್ಯಾರ್ಥಿನಿ

ಲಾಲ್‌ಬಾಗ್‌ ಭದ್ರತಾ ಸಿಬ್ಬಂದಿ ಹಾಗೂ ಪೋಷಕರು ಇಬ್ಬರೂ ಎಚ್ಚರ ವಹಿಸಬೇಕಿತ್ತು. ಇನ್ನು ಮುಂದಾದರೂ ಪ್ರವಾಸಿಗರು ಅಪಾಯಕಾರಿ ಸ್ಥಳಗಳಲ್ಲಿ ಓಡಾಡುವಾಗ ಭದ್ರತಾ ಸಿಬ್ಬಂದಿ ಎಚ್ಚರಿಕೆ ವಹಿಸಬೇಕು
- ಕುಮಾರೇಶ್‌, ಪ್ರವಾಸಿ

(epaper.kannadaprabha.in)