ಐದು ದಿನಗಳ ಹಿಂದೆ ಹನಿಟ್ರ್ಯಾಪ್ ಮೂಲಕ ಕನ್ನಡ ಚಲನಚಿತ್ರದ ನವ ನಾಯಕ ನಟನೊಬ್ಬನಿಂದ ಹಣ ಹಾಗೂ ಎರಡು ಐ ಫೋನ್ ಸುಲಿಗೆ ಮಾಡಿದ್ದ ಯುವತಿ ಸೇರಿದಂತೆ 8 ಮಂದಿಯನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ
ಬೆಂಗಳೂರು(ಜು.14): ಐದು ದಿನಗಳ ಹಿಂದೆ ಹನಿಟ್ರ್ಯಾಪ್ ಮೂಲಕ ಕನ್ನಡ ಚಲನಚಿತ್ರದ ನವ ನಾಯಕ ನಟನೊಬ್ಬನಿಂದ ಹಣ ಹಾಗೂ ಎರಡು ಐ ಫೋನ್ ಸುಲಿಗೆ ಮಾಡಿದ್ದ ಯುವತಿ ಸೇರಿದಂತೆ 8 ಮಂದಿಯನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾಮಾಕ್ಷಿಪಾಳ್ಯದ ತಿಲಕ್ ಅಲಿಯಾಸ್ ರೆಬಲ್, ಮೈಸೂರು ಎನ್.ಆರ್. ಮೊಹಲ್ಲಾದ ದಿವ್ಯಾ, ಮಾಗಡಿ ರಸ್ತೆಯ ಲೋಕೇಶ್, ಚಿಕ್ಕಸಂದ್ರದ ಕೆ. ಮಂಜುನಾಥ್, ಹೇರೋಹಳ್ಳಿಯ ಪುನೀತ್, ಆಂಧ್ರಹಳ್ಳಿಯ ಮದನ್ ಹಾಗೂ ಸುಮಂತ್ ಕುಮಾರ್ ಬಂಧಿತರು. ಆರೋಪಿಗಳಿಂದ ಮೊಬೈಲ್ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ. ಚಲನಚಿತ್ರದಲ್ಲಿ ನಟನೆಗೆ ಅವಕಾಶ ಕೇಳುವ ನೆಪದಲ್ಲಿ ಜು. ೬ರಂದು ಬಾಗಲಗುಂಟೆ ವೃತ್ತದಿಂದ ದಿವ್ಯಾ ಮೂಲಕ ಕರೆಸಿಕೊಂಡ ತಿಲಕ್ ಹಾಗೂ ಆತನ ಸಹಚರರು, ಬಳಿಕ ನಟನನ್ನು ಅಪಹರಿಸಿ ಹಣ ಸುಲಿಗೆ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಮೈಸೂರಿನಿಂದ ಕೆಲಸ ಅರಸಿಕೊಂಡು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ದಿವ್ಯಾಳಿಗೆ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ತಿಲಕ್ ಪರಿಚಯವಾಗಿತ್ತು. ಈ ಗೆಳೆತನ ಗಾಢವಾದ ನಂತರ ತಿಲಕ್, ತನ್ನ ಗೆಳೆತಿಯನ್ನು ಬಳಸಿಕೊಂಡು ಹನಿಟ್ರ್ಯಾಪ್ ಮೂಲಕ ಹಣ ಸಂಪಾದನೆಗೆ ಸಂಚು ರೂಪಿಸಿದ್ದ. ಇದಕ್ಕಾಗಿ ತನ್ನ ನಂಬಿಕಸ್ಥರನ್ನು ಒಟ್ಟಾಗಿಸಿಕೊಂಡು ವ್ಯವಸ್ಥಿತ ತಂಡ ಕಟ್ಟಿದ್ದ. ಅದರಂತೆ ಈ ತಂಡದ ಗಾಳಕ್ಕೆ ನಟ ಬಿದ್ದಿದ್ದಾನೆ.
ಕೆಲ ದಿನಗಳ ಹಿಂದೆ ನಂದಿನಿ ಲೇಔಟ್‌ನಲ್ಲಿ ನೆಲೆಸಿರುವ ನಟನ ಮೊಬೈಲ್‌ಗೆ ಕರೆ ಮಾಡಿದ ದಿವ್ಯಾ,‘ನನಗೂ ನಟನೆ ಬಗ್ಗೆ ಆಸಕ್ತಿ ಇದೆ. ನಿಮ್ಮ ಚಿತ್ರದಲ್ಲಿ ಅವಕಾಶ ಕೊಡಿ. ಬೇಕಿದ್ದರೆ ಎಲ್ಲಾ ರೀತಿಯಲ್ಲೂ ನಿಮ್ಮೊಂದಿಗೆ ಸಹಕರಿಸುತ್ತೇನೆ’ ಎಂದಿದ್ದಳು. ಮೊದ ಮೊದಲು ಆಕೆಯ ಕರೆಯನ್ನು ನಿರ್ಲಕ್ಷಿಸಿದ್ದ ಅವರು, ನಟನೆಗೆ ಅವಕಾಶ ಕೋರಿ ಆಕೆಯಿಂದ ನಿರಂತರವಾಗಿ ಕರೆಗಳು ಬರಲಾರಂಭಿಸಿದಾಗ ‘ಸಹಾಯ’ ಮಾಡಲು ಒಲವು ತೋರಿದ್ದರು. ಬಳಿಕ ದಿವ್ಯಾಳ ಭೇಟಿಗೂ ಅವರು ನಿರ್ಧರಿಸಿದ್ದರು.
ಜುಲೈ 6ರಂದು ಮಧ್ಯಾಹ್ನ 2.30ರ ಸುಮಾರಿಗೆ ನಟನಿಗೆ ಕರೆ ಮಾಡಿದ್ದ ದಿವ್ಯಾ, ಬಾಗಲಗುಂಟೆ ಮುಖ್ಯರಸ್ತೆಯಲ್ಲಿ ಇರುವುದಾಗಿ ತಿಳಿಸಿದ್ದಳು. ತಕ್ಷಣ ತನ್ನ ಕಾರಿನಲ್ಲಿ ಆ ಸ್ಥಳಕ್ಕೆ ಅವರು ತೆರಳಿದ್ದರು. ಈ ವೇಳೆ ಇನ್ನೊಂದು ಕಾರಿನಲ್ಲಿ ಕುಳಿತಿದ್ದ ದಿವ್ಯಾ, ನಟನನ್ನು ಮಾತುಕತೆಗೆ ಕರೆದಿದ್ದರು. ಅವರು ವಾಹನ ಹತ್ತುತ್ತಿದ್ದಂತೆಯೇ ಉಳಿದ ಆರೋಪಿಗಳು ಸಹ ಕಾರನ್ನು ಹತ್ತಿ ಚಾಕುವಿನಿಂದ ಬೆದರಿಸಿದ್ದು, ನಂತರ ನಟನನ್ನು ಅಪಹರಿಸಿಕೊಂಡು ಪೀಣ್ಯ ೮ನೇ ಮೈಲಿ ಮಾರ್ಗವಾಗಿ ತಿಪ್ಪೇನಹಳ್ಳಿಗೆ ಕರೆದೊಯ್ದು ಶೆಡ್'ವೊಂದರಲ್ಲಿ ಕೂಡಿ ಹಾಕಿದ್ದರು. ಅಲ್ಲಿ ಕೈ ಕಾಲು ಕಟ್ಟಿ ಹಾಕಿ ಇಡೀ ದಿನ ಅವರಿಗೆ ಚಿತ್ರಹಿಂಸೆ ನೀಡಿದ್ದ ಆರೋಪಿಗಳು, ನಟನಿಂದ ₹15 ಸಾವಿರ ನಗದು, ಎರಡು ಐಫೋನ್ ಹಾಗೂ ನಾಲ್ಕು ಎಟಿಎಂ ಕಾರ್ಡ್‌ಗಳನ್ನು ಕಿತ್ತುಕೊಂಡು ಮರು ದಿನ ಬೆಳಗ್ಗೆ ಬಿಟ್ಟು ಕಳುಹಿಸಿದ್ದರು. ಬಳಿಕ ಈ ಬಗ್ಗೆ ಬಾಗಲಗುಂಟೆ ಠಾಣೆಗೆ ಬಂದು ಶೋಷಿತ ನಟ ದೂರು ಕೊಟ್ಟಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರೀತಿ ನೆಪದಲ್ಲಿ ಬಾಡಿಗೆ:
ನನ್ನ ಗೆಳೆಯ ಯುವತಿಯೊಬ್ಬಳನ್ನು ಪ್ರೀತಿ ಮಾಡಿದ್ದಾನೆ. ಅವರಿಗೆ ಸಮಸ್ಯೆ ಉಂಟಾಗಿದೆ. ಹೀಗಾಗಿ ರಕ್ಷಣೆ ಸಲುವಾಗಿ ಅವರಿಬ್ಬರು ಒಂದು ದಿನ ಉಳಿದುಕೊಳ್ಳಲು ನಿಮ್ಮ ಶೆಡ್ ಬಾಡಿಗೆ ಕೊಡಿ. ಇದಕ್ಕೆ ₹1 ಸಾವಿರ ಬಾಡಿಗೆ ಕೊಡುತ್ತೇನೆ ಎಂದು ಶೆಡ್ ಮಾಲೀಕರಿಗೆ ಹೇಳಿ ತಿಲಕ್ ಅದನ್ನು ಬಾಡಿಗೆ ಪಡೆದಿದ್ದ ಎಂದು ಪೊಲೀಸರು ಹೇಳಿದ್ದಾರೆ.
