ತಂದೆಯೇ ಮೊದಲ ಗುರು ಹರೀಶ್ ಅವರ ತಂದೆ ಆಯುರ್ವೇದ ವೈದ್ಯರು. ಹವ್ಯಾಸ ಮತ್ತು ಆಯುರ್ವೇದಕ್ಕಾಗಿ ಕೆಲವು ಜೇನು ಪೆಟ್ಟಿಗೆಗಳನ್ನು ಇಟ್ಟು ಜೇನು ಸಾಕುತ್ತಿದ್ದರು. ಒಮ್ಮೆ ತಂದೆಯೊಟ್ಟಿಗೆ ಹೋದ ಹರೀಶ್ ಜೇನಿನ ರುಚಿ ಸವಿದ ಬಳಿಕ ನಾನೂ ಏಕೆ ಜೇನು ಸಾಕಾಣಿಕೆ ಮಾಡಬಾರದು ಎಂಬ ತೀರ್ಮಾನಕ್ಕೆ ಬರುತ್ತಾರೆ. ಹೀಗಂದುಕೊಂಡದ್ದೇ ತಡ ಕೊಡಗಿನ ಭಾಗಮಂಡಲಕ್ಕೆ ತೆರಳಿ ಅಲ್ಲಿ 3 ತಿಂಗಳ ಜೇನು ಕೃಷಿ ತರಬೇತಿ ಪಡೆದೇ ಬಿಡುತ್ತಾರೆ.

ಅವರು ಓದಿದ್ದು ಡಿಪ್ಲೊಮಾ. ಓದಿಗೆ ಅನುಗುಣವಾಗಿಯೇ ವೃತ್ತಿಯನ್ನೂ ಆಯ್ಕೆ ಮಾಡಿಕೊಳ್ಳಬೇಕು ಎಂದುಕೊಂಡಿರುವಾಗಲೇ ಹೊಸ ಐಡಿಯಾವೊಂದು ಹೊಳೆಯುತ್ತದೆ. ತಕ್ಷಣ ಹಿಂದು ಮುಂದು ನೋಡದೇ ವೃತ್ತಿ ಪಥದ ದೃಷ್ಟಿಯನ್ನೇ ಬದಲಿಸಿ ಸಿದಾ ‘ಮಧುಕರ’ನಾಗಿಬಿಡುತ್ತಾರೆ.

ಹೆಸರು ಹರೀಶ್ ಕೋಡ್ಳ. ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕನ್ಯಾನ, ಕರೋಪಾಡಿ ಗ್ರಾಮಗಳನ್ನು ಪ್ರವೇಶಿಸುತ್ತಿದ್ದಂತೆಯೇ ಇವರು ಮಾಡಿರುವ ಕಾರ್ಯವೇ ನಮ್ಮನ್ನು ಮೊದಲು ಸ್ವಾಗತಿಸುವುದು. ಕಿವಿಗೆ ಆನಂದ ನೀಡುವ ಜೇನಿನ ಝೇಂಕಾರ. ನಾಸಿಕಕ್ಕೆ ಗಮ್ಮೆಂದು ಬಡಿಯುವ ಜೇನು ತುಪ್ಪದ ಪರಿಮಳ. ಇದೆಲ್ಲದರ ಹಿಂದೆ ಹರೀಶ್ ಅವರ ಕಠಿಣ

ಪರಿಶ್ರಮವಿದೆ. ಮೊದ ಮೊದಲಿಗೆ ನಷ್ಟದ ಹೊಡೆತಗಳು ಬೀಳುತ್ತಿದ್ದರೂ ಗೆದ್ದೇ ಗೆಲ್ಲುತ್ತೇನೆ ಎನ್ನುವ ಛಲದೊಂದಿಗೆ ಮುನ್ನಡೆದ ಸಾಹಸದ ಹಾದಿಯ ಪಯಣವಿದೆ. ತಂದೆಯೇ ಮೊದಲ ಗುರು ಹರೀಶ್ ಅವರ ತಂದೆ ಆಯುರ್ವೇದ ವೈದ್ಯರು. ಹವ್ಯಾಸ ಮತ್ತು ಆಯುರ್ವೇದಕ್ಕಾಗಿ ಕೆಲವು ಜೇನು ಪೆಟ್ಟಿಗೆಗಳನ್ನು ಇಟ್ಟು ಜೇನು ಸಾಕುತ್ತಿದ್ದರು. ಒಮ್ಮೆ ತಂದೆಯೊಟ್ಟಿಗೆ ಹೋದ ಹರೀಶ್ ಜೇನಿನ ರುಚಿ ಸವಿದ ಬಳಿಕ ನಾನೂ ಏಕೆ ಜೇನು ಸಾಕಾಣಿಕೆ ಮಾಡಬಾರದು ಎಂಬ ತೀರ್ಮಾನಕ್ಕೆ ಬರುತ್ತಾರೆ. ಹೀಗಂದುಕೊಂಡದ್ದೇ ತಡ ಕೊಡಗಿನ ಭಾಗಮಂಡಲಕ್ಕೆ ತೆರಳಿ ಅಲ್ಲಿ 3 ತಿಂಗಳ ಜೇನು ಕೃಷಿ ತರಬೇತಿ ಪಡೆದೇ ಬಿಡುತ್ತಾರೆ. ತಕ್ಷಣ ತಮ್ಮ ಸ್ವಗ್ರಾಮಕ್ಕೆ ಬಂದು

2003ರಲ್ಲಿ ಜೇನು ಕೃಷಿ ಆರಂಭಿಸಿ, ಏಳು-ಬೀಳುಗಳ ದಾರಿಯಲ್ಲಿ ಸಾಗಿ ಇಂದು ಯಶದ ನಗೆ ಬೀರಿದ್ದಾರೆ. ಕಷ್ಟದ ಹಾದಿಯ ಪಯಣ ಹರೀಶ್ ಅವರು ಸದ್ಯ 400 ಜೇನು ಕುಟುಂಬಗಳನ್ನು ಹೊಂದಿದ್ದಾರೆ. ಆದರೆ ಕಳೆದ ಕೆಲ ವರ್ಷಗಳ ಹಿಂದಷ್ಟೇ ರೋಗ ಬಂದಾಗ ಜೇನು ಕುಟುಂಬಗಳ ಸಂಖ್ಯೆ ಸೊನ್ನೆಗೆ ಇಳಿದು ಅಪಾರ ನಿರಾಶೆಯನ್ನು ಹರಿಸಿದ್ದೂ ಇದೆ. ಆದರೆ ಜೇನಿನ ಸವಿ ಬೇಕಾದಾಗ ಈ ರೀತಿ ಗಾಯಗಳು, ನೋವುಗಳು ಆಗಲೇಬೇಕು ಎಂದು ಮತ್ತೆ ಮತ್ತೆ ಸತತ ಪ್ರಯತ್ನ ಮಾಡಿ ನೂರು, ಇನ್ನೂರು ಹೀಗೆ ಜೇನು ಕುಟುಂಬಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದ್ದಾರೆ. ಹೀಗೆ ಗೆಲುವಿನ ಓಟ ಸಾಗುತ್ತಲೇ ಇರುವಾಗ ಎದುರಾದದ್ದು ಜಾಗದ ಸಮಸ್ಯೆ. ಮನೆಯಲ್ಲಿ ಹೆಚ್ಚಿನ ಜಾಗವಿಲ್ಲ. ಆದರೆ ಅದಮ್ಯ ಉತ್ಸಾಹವಿದೆ. ಏನು ಮಾಡುವುದು ಎಂದುಕೊಂಡಾಗಲೇ ಕಾಡು ಪ್ರದೇಶ, ಹೆಚ್ಚು ಪುಷ್ಪರಸ ಸಿಗುವ ಬೇರೆ ಬೇರೆ ಸ್ಥಳಗಳನ್ನು ಜೇನು ಸಾಕುವ ಯೋಜನೆ ಮಾಡುತ್ತಾರೆ. ಇದನ್ನು ಅನುಷ್ಠಾನಕ್ಕೂ ತಂದು ಲಾಭದ ಪ್ರಮಾಣವನ್ನೂ ಹೆಚ್ಚು ಮಾಡಿಕೊಳ್ಳುತ್ತಾ ಸಾಗಿದ್ದಾರೆ. ಆದರೂ ಇವರು ಸ್ಥಳೀಯ ಬೇಡಿಕೆಯನ್ನೇ ನಿಭಾಯಿಸಲು ಸಾಧ್ಯವಾಗಿಲ್ಲ. ಉತ್ಪಾದನೆಯ ಅರ್ಧದಷ್ಟನ್ನು ಗ್ರಾಹಕರೇ ಮನೆಗೇ ಬಂದು ಕೊಳ್ಳುತ್ತಿದ್ದಾರೆ. ಇನ್ನರ್ಧದಷ್ಟು ಜಿಲ್ಲೆಯ ಜೇನು ಸೊಸೈಟಿಗೆ ಪೂರೈಕೆಯಾಗುತ್ತಿದೆ.

ಸಹಕಾರಿ ತತ್ವದ ಸಾಕಾರ ದಕ್ಷಿಣ ಕನ್ನಡ ಜಿಲ್ಲಾ ಜೇನು ಸಹಕಾರಿ ಸಂಘದ ಉಪಾಧ್ಯಕ್ಷ ಹಾಗೂ ಕರೋಪಾಡಿ ವ್ಯವಸಾಯಿಕ ಸಹಕಾರ ಸಂಘದ ನಿರ್ದೇಶಕರೂ ಆಗಿರುವ ಹರೀಶ್ ಸಹಕಾರಿ ತತ್ವವನ್ನು ಪಾಲಿಸಿಕೊಂಡೇ ಮುನ್ನಡೆಯುತ್ತಿದ್ದಾರೆ. ಮನೆಗೆ ಬಂದವರಿಗೆ ಜೇನಿನ ಕುರಿತು ಮಾಹಿತಿ ನೀಡುವುದಲ್ಲದೇ, ನೂರಾರು ಜನರಿಗೆ ತರಬೇತಿಯನ್ನೂ ನೀಡಿದ್ದಾರೆ. ಇವರ ಕಾರ್ಯ ಕೇವಲ ಬೋಧನೆಗೆ ಸೀಮಿತವಾಗದೇ ಬಡ ಕೃಷಿಕರಿಗೆ ಕಡಿಮೆ ದರದಲ್ಲಿ ಸ್ವತಃ ತಾವೇ ಪೆಟ್ಟಿಗೆಗಳನ್ನು ನೀಡಿ ಸೂಕ್ತ ತರಬೇತಿ ನೀಡುತ್ತಾ ಬರುತ್ತಿದ್ದಾರೆ.

‘ಜೇನು ಕೃಷಿಯಿಂದ ಒಳ್ಳೆಯ ಲಾಭವಿದೆ. ಒಂದು ಭಾಗದಲ್ಲಿ ಒಂದಿಬ್ಬರು ಕೃಷಿಕರು ಜೇನು ಸಾಕಲು ಮುಂದೆ ಬಂದರೆ ತಾನೇ ತಾನಾಗಿ ಜೇನು ಸಾಕಾಣಿಕೆ ಅಭಿವೃದ್ಧಿ ಕಾಣುತ್ತದೆ. ಇದಿಷ್ಟೇ ಅಲ್ಲದೇ ಇದರಿಂದ ಪರಾಗಸ್ಪರ್ಶ ಕ್ರಿಯೆ ಹೆಚ್ಚಾಗಿ ಬೆಳೆಯುವ ಬೆಳೆಗೂ ಅನುಕೂಲವಾಗುತ್ತದೆ. ಜೇನನ್ನು ಉಪಕಸುಬನ್ನಾಗಿಯಾದರೂ ಮಾಡಿಕೊಂಡು ನಾವಿಂದು ಜೇನಿಗೆ ಹತ್ತಿರವಾಗಬೇಕು. ಇದರಿಂದ ರೈತನ ಆದಾಯ ಹೆಚ್ಚಾದರೆ, ಸಮುದಾಯದ ಆರೋಗ್ಯವೂ ಸುಧಾರಿಸುತ್ತದೆ. ಸಹಕಾರವೂ ಬೆಳೆಯುತ್ತದೆ. ಪರಿಸರಕ್ಕೂ ಇದರಿಂದ ಸಾಕಷ್ಟು ಅನುಕೂಲವಾಗುತ್ತದೆ ಎನ್ನುತ್ತಾರೆ ಹರೀಶ್ ಕೋಡ್ಲ.

- ರಾಘವೇಂದ್ರ ಅಗ್ನಿಹೋತ್ರಿ,ಮಂಗಳೂರು, (ಕನ್ನಡಪ್ರಭ)