ಪುಟ್ಟೇನಹಳ್ಳಿಯಲ್ಲಿ ನೂತನವಾಗಿ ಆರಂಭಿಸಿರುವ ಪೊಲೀಸ್‌ ಠಾಣೆಯನ್ನು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಶನಿವಾರ ಉದ್ಘಾಟಿಸಿದರು. ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಆರ್‌.ಕೆ.ದತ್ತ, ಸಂಸದ ಡಿ.ಕೆ.ಸುರೇಶ್‌ ಮತ್ತಿತರರಿದ್ದರು.

ಬೆಂಗಳೂರು (ಫೆ.05): ರಿಯಲ್‌ ಎಸ್ಟೇಟ್‌ ವ್ಯಾಜ್ಯಗಳ ಸಂಬಂಧ ದೂರು ಸ್ವೀಕರಿಸಲು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಒಂದು ಪ್ರತ್ಯೇಕ ವಿಭಾಗ ತೆರೆಯಲು ಚಿಂತಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದ್ದಾರೆ.
ಕೋಣನಕುಂಟೆ, ಪುಟ್ಟೇನಹಳ್ಳಿ ಮತ್ತು ಬಾಗಲೂರು ನೂತನ ಪೊಲೀಸ್‌ ಠಾಣೆಗಳನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ರಿಯಲ್‌ ಎಸ್ಟೇಟ್‌ ವ್ಯಾಜ್ಯಗಳ ಸಂಬಂಧ ದೂರು ಸ್ವೀಕಾರಕ್ಕೆ ಪ್ರತ್ಯೇಕ ವಿಭಾಗ ಆರಂಭಿ​ಸುವ ಕುರಿತು ಮುಖ್ಯಮಂತ್ರಿ ಸಿದ್ದರಾ​ಮಯ್ಯ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಪೊಲೀಸರು ರಿಯಲ್‌ ಎಸ್ಟೇಟ್‌ ಮಾಫಿ​ಯಾಯ ಜತೆ ಕೈ ಜೋಡಿದರೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾ​ಗುವುದು ಎಂದು ಎಚ್ಚರಿಕೆ ನೀಡಿದರು.
ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದರ ಜತೆಗೆ ಅನ್ಯಾಯಕ್ಕೆ ಒಳಗಾದ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡ​ಬೇಕು. ಕಾನೂನು ಉಲ್ಲಂಘಿ​ಸುವವರ ವಿರುದ್ಧ ಮೂಲಾಜಿಲ್ಲದೆ ಕ್ರಮ ಜರುಗಿಸಬೇಕು. ಅಂತೆಯೆ ಅಪರಾಧ ನಿಯಂತ್ರಿಸಿ ತಪ್ಪಿತಸ್ಥರನ್ನು ಮಟ್ಟಹಾಕಲು ಸಾರ್ವಜನಿಕರು ಪೊಲೀಸರಿಗೆ ಸಹಕರಿ​ಸಬೇಕು ಎಂದು ಮನವಿ ಮಾಡಿದರು.
ಸಂಸದ ಡಿ.ಕೆ.ಸುರೇಶ್‌, ಪೊಲೀಸ್‌ ಮಹಾನಿರ್ದೇಶಕ ಆರ್‌.ಕೆ.ದತ್ತ, ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌, ಕೆಂಪಯ್ಯ ಉಪಸ್ಥಿತರಿದ್ದರು.

(ಸಾಂದರ್ಭಿಕ ಚಿತ್ರ)