Asianet Suvarna News Asianet Suvarna News

ಜೆಡಿಎಸ್ ರಾಜ್ಯಾಧ್ಯಕ್ಷ ಫೈನಲ್ : ಮಧು ಬಂಗಾರಪ್ಪಗೆ ಮಹತ್ವದ ಹುದ್ದೆ

ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆ ಫೈನಲ್ ಆಗಿದೆ. ಅಲ್ಲದೇ ಮಧು ಬಂಗಾರಪ್ಪಗೆ ಮಹತ್ವದ ಹುದ್ದೆ ನೀಡಲು ನಾಯಕರಿಂದ ತೀರ್ಮಾನವಾಗಿದೆ. 

HK Kumaraswamy to replace H Vishwanath as JDS president
Author
Bengaluru, First Published Jul 4, 2019, 7:50 AM IST

ಬೆಂಗಳೂರು [ಜು.03] :  ಪಕ್ಷದ ಸಚಿವರ ನಡೆಯಿಂದ ಬೇಸತ್ತು ಶಾಸಕ ಎಚ್‌.ವಿಶ್ವನಾಥ್‌ ರಾಜೀನಾಮೆ ನೀಡಿದ ರಾಜ್ಯಾಧ್ಯಕ್ಷ ಹುದ್ದೆಗೆ ಸಕಲೇಶಪುರದ ಶಾಸಕ ಹಾಗೂ ದಲಿತ ಮುಖಂಡ ಎಚ್‌.ಕೆ. ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದ್ದು, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಗುರುವಾರ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.

ಪಕ್ಷದ ಪರಿಶಿಷ್ಟವರ್ಗಕ್ಕೆ ಸೇರಿದ ನಾಯಕರಿಗೆ ಸೂಕ್ತ ಸ್ಥಾನ-ಮಾನ ನೀಡಿಲ್ಲ ಎಂಬ ಕೊರಗು ಇದ್ದು, ಅವರಿಗೆ ಮನ್ನಣೆ ನೀಡಲಾಗುವುದು ಎಂದು ಇತ್ತೀಚೆಗಷ್ಟೇ ದೇವೇಗೌಡರು ಹೇಳಿಕೆ ನೀಡಿದ್ದರು. ಅದರಂತೆ ಆರು ಬಾರಿ ಶಾಸಕರಾಗಿರುವ ಎಚ್‌.ಕೆ.ಕುಮಾರಸ್ವಾಮಿಗೆ ಅಧ್ಯಕ್ಷ ಸ್ಥಾನ ನೀಡಲು ಮುಂದಾಗಿದ್ದಾರೆ. ಅಂತೆಯೇ ಪಕ್ಷದ ಯುವ ಘಟಕ ಅಧ್ಯಕ್ಷ ಮಧುಬಂಗಾರಪ್ಪ ಅವರಿಗೆ ಕಾರ್ಯಾಧ್ಯಕ್ಷ ಹುದ್ದೆಯೂ ನೀಡುವ ಬಗ್ಗೆ ಆಲೋಚನೆ ನಡೆದಿದೆ. ಗುರುವಾರ ಈ ಬಗ್ಗೆ ಸ್ಪಷ್ಟಚಿತ್ರಣ ಹೊರಬೀಳಲಿದೆ.

ವಿಶ್ವನಾಥ್‌ ಅವರು ರಾಜೀನಾಮೆ ನೀಡಿದರೂ ಅಂಗೀಕರಿಸಲು ಹಿಂದೇಟು ಹಾಕಿದ ದೇವೇಗೌಡ ಅವರು, ವಿಶ್ವನಾಥ್‌ ಅವರಿಂದಲೇ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಲಾಗುವುದು ಎಂದಿದ್ದರು. ಅದರಂತೆ ವಿಶ್ವನಾಥ್‌ ಅವರಿಂದ ಹೊಸ ಅಧ್ಯಕ್ಷರಿಗೆ ಪಕ್ಷದ ಬಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಬಹುದು. ಇದೇ ತಿಂಗಳು 11 ಅಥವಾ 12ರಂದು ಪರಿಶಿಷ್ಟರ ಸಮಾವೇಶ ನಡೆಸಿ, ಅಲ್ಲಿ ರಾಜ್ಯಾಧ್ಯಕ್ಷರನ್ನು ಘೋಷಿಸುವ ಬಗ್ಗೆ ದೇವೇಗೌಡ ಅವರು ತಿಳಿಸಿದ್ದರು. ಆದರೆ, ವಿಶ್ವನಾಥ್‌ ಅವರು ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಿರುವ ಕಾರಣ ಅದಷ್ಟುಬೇಗ ಹುದ್ದೆ ಹಸ್ತಾಂತರಿಸುವ ಕೆಲಸ ಮುಗಿಸಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಗುರುವಾರ ಉತ್ತಮ ದಿನ ಎಂಬ ಕಾರಣಕ್ಕಾಗಿ ನೂತನ ರಾಜ್ಯಾಧ್ಯಕ್ಷರ ಹೆಸರನ್ನು ಘೋಷಣೆ ಮಾಡಲಿದ್ದಾರೆ. ಪಕ್ಷದ ಸಂಘಟನೆಯಲ್ಲಿ ತೊಡಗಿರುವ ದೇವೇಗೌಡ ಅವರು ಪದಾಧಿಕಾರಿಗಳ ಬದಲಾವಣೆಯನ್ನು ಸಹ ಮಾಡಲು ಮುಂದಾಗಿದ್ದಾರೆ. ಹಲವು ಹುದ್ದೆಗಳನ್ನು ಕಾರ್ಯಕರ್ತರಿಗೆ ನೀಡಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿ ಬಲಗೊಳಿಸುವಲ್ಲಿ ಕಾರ್ಯೋನ್ಮುಖವಾಗಿದ್ದಾರೆ ಎನ್ನಲಾಗಿದೆ. 

"

Follow Us:
Download App:
  • android
  • ios