ರೌಡಿಶೀಟರ್​ ನಾಗ ಅಲಿಯಾಸ್​​ ನಾಗರಾಜ್​​​ ಮನೆ ಮತ್ತು ಕಚೇರಿ ಮೇಲೆ ನೂರಾರು ಪೊಲೀಸರು ದಾಳಿ ನಡೆಸಿ, ನಾಕಬಂಧಿ ಹಾಕಿ ಸರ್ಚ್​​​ ನಡೆಸಿ ಇಂದು ಭಾರೀ ದೊಡ್ಡ ಸುದ್ದಿ ಮಾಡಿದ್ದಾರೆ. ಅಷ್ಟಕ್ಕೂ ಈ ನಾಗ ಯಾರು..? ಆತನ ಇತಿಹಾಸ ಏನು..? ಇಲ್ಲಿದೆ ಡಿಟೈಲ್ಸ್​​...

ಬೆಂಗಳೂರು(ಏ. 14): ಶ್ರೀರಾಂಪುರ ಮೂಲದ ನಾಗ ಅಲಿಯಾಸ್​​ ಜಾನರಾಜ 1981ರಿಂದ ಅಂಡರ್'​ವರ್ಲ್ಡ್​'​​ನಲ್ಲಿ ಸಕ್ರಿಯವಾಗಿದ್ದು ನೂರಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಕೊತ್ವಾಲ್ ರಾಮಚಂದ್ರ, ಜಯರಾಜ್, ಬೆಕ್ಕಿನ ಕಣ್ಣು ರಾಜೇಂದ್ರ, ಕಾಟನ್ ಪೇಟೆ ಪುಷ್ಪ ಅವರುಗಳ ಕಾಲದಲ್ಲಿ ಪುಡಿರೌಡಿಯಾಗಿದ್ದವ ಬಾಂಬ್ ನಾಗ. ಆ ಕಾಲದಲ್ಲಿ ಶ್ರೀರಾಂಪುರದಲ್ಲಿ ನಾಗನದ್ದೇ ಹಾವಳಿ. ಈವರೆಗೂ ನಾಗನ ವಿರುದ್ಧ ಒಟ್ಟು 44 ಪ್ರಕರಣಗಳು ದಾಖಲಾಗಿವೆ. ದಾಖಲಾಗದೇ ಇರೋ ಪ್ರಕರಣಗಳು ನೂರಾರಿವೆ.

ಪೊಲೀಸರ ವಿರುದ್ಧವೇ ಮೂಗರ್ಜಿ:
ನಾಲ್ಕು ದಶಕಗಳಿಂದ ರಾಜಧಾನಿಯ ಪಾತಕ ಲೋಕದಲ್ಲಿ ಮೆರೆಯುತ್ತಿರುವ ನಾಗನ ವಿರುದ್ಧ ದಾಖಲಾದ ಕೇಸ್'​ಗಳಿಗಿಂತ ಈತ ಪೊಲೀಸರ ವಿರುದ್ಧ ನೀಡಿದ ದೂರುಗಳೇ ಹೆಚ್ಚು. ರೌಡಿ ಜಯರಾಜ್'ನಿಂದ ಕಲಿತ ಈ ಖಯಾಲಿಯನ್ನು ಮುಂದುವರೆಸಿರುವ ನಾಗ, ಪೊಲೀಸರ ವಿರುದ್ಧ ನೂರಾರು ಅರ್ಜಿಯನ್ನು ಕೋರ್ಟ್​'​ನಲ್ಲಿ ಸಲ್ಲಿಸಿದ್ದಾನೆ.

ರೌಡಿ ಪಟ್ಟ ತೆಗಿಸಿದ್ದ ನಾಗ..!
1981ರಿಂದ ಸಾಕಷ್ಟು ಪ್ರಕರಣ ದಾಖಲಾಗಿದ್ದರೂ, 2000ನೇ ದಶಕಲ್ಲಿ ಸೈಲೆಂಟ್​ ಆದಂತೆ ನಟಿಸಿದ್ದ ನಾಗ ರೌಡಿ ಶೀಟ್​ ಕ್ಲೋಸ್​ ಮಾಡುವಂತೆ ಕೋರ್ಟ್ ಮೊರೆಹೋಗಿದ್ದ. ಅಲ್ಲದೆ, ತನ್ನ ಹೆಸರಿನ ಹಿಂದಿದ್ದ ಬಾಂಬ್​ ಎಂಬ ಪದ ಬಳಕೆ ಮಾಡದಂತೆ ಕೋರ್ಟ್​​ ಮೆಟ್ಟಿಲೇರಿ ಜಯಗಳಿಸಿದ್ದ. ನಂತರ ರಾಜಕೀಯದಲ್ಲಿ ಬೆಳೆದ ನಾಗ ತೆರೆಮರೆಯಲ್ಲಿ ರೌಡಿ ಚಟುವಟಿಕೆ ಮುಂದುವರೆಸಿದ್ದ. ರೌಡಿಶೀಟ್​ ತೆಗೆದ ನಂತರ ನಾಗ ಕಾರ್ಪೋರೇಟರ್ ಆಗಿ ಆಯ್ಕೆಯಾದ. ಅಲ್ಲದೆ, ತನ್ನ ಹೆಂಡತಿಯನ್ನೂ ಕಾರ್ಪೋರೇಟರ್​ ಮಾಡಿ, ರಾಜಕೀಯವಾಗಿ ಬಲಿಷ್ಟನಾಗುತ್ತ ಹೋದ. 2013ರಲ್ಲಿ ಬಿಎಸ್'ಆರ್ ಕಾಂಗ್ರೆಸ್'ನಿಂದ ಸ್ಪರ್ಧಿಸಿದ್ದ. ಅಲ್ಲದೆ, ನಾಗ ಮತ್ತವನ ಪಟಾಲಂಗೆ ಪ್ರಭಾವಿ ರಾಜಕಾರಣಿಗಳ ಬೆಂಬಲ ಕೂಡ ಇದೆ..

ಬೆಟ್ಟಿಂಗ್ ದಂಧೆ:
ನಾಗ ಐಪಿಎಲ್ ಬೆಟ್ಟಿಂಗ್'ನಲ್ಲಿ ಬಹಳ ಸಕ್ರಿಯನಾಗಿದ್ದನೆನ್ನಲಾಗಿದೆ. ಶ್ರೀರಾಮಪುರದ ಕಚೇರಿ ಮತ್ತು ಡಾಬಸ್'ಪೇಟೆಯ ಫಾರ್ಮ್'ಹೌಸ್'ನಲ್ಲಿ ಈತ ಬೆಟ್ಟಿಂಗ್ ನಡೆಸುತ್ತಾನೆ. ಸ್ನೇಹ ಸೇವಾ ಸಮಿತಿ ಎಂದು ಟ್ರಸ್ಟ್ ಮಾಡಿಕೊಂಡು, ಬೆಟ್ಟಿಂಗ್ ಹಣವನ್ನು ಅದರಲ್ಲಿ ಇಟ್ಟಿದ್ದಾನೆ. ಪೊಲೀಸ್ ಮೂಲಗಳು ತಿಳಿಸಿರುವ ಪ್ರಕಾರ ನಾಗನಿಗೆ ಮುಂಬೈ ಮೂಲದ ಕ್ರಿಕೆಟ್ ಬುಕ್ಕಿ ವೀರೇಂದ್ರ ಸೇರಿದಂತೆ ಹಲವು ಪ್ರಮುಖ ಬೆಟ್ಟಿಂಗ್ ಕುಳಗಳ ಜೊತೆ ಸಂಪರ್ಕವಿದೆಯಂತೆ.

ನೋಟ್ ಬ್ಯಾನ್ ಬಳಿಕದ ದಂಧೆ:
ಕೇಂದ್ರ ಸರ್ಕಾರ ಹಳೆ ನೋಟುಗಳನ್ನ ಬ್ಯಾನ್ ಮಾಡಿದ​ ನಂತರ ನಾಗ ಬ್ಲ್ಯಾಕ್ ಅಂಡ್​ ವೈಟ್​ ದಂಧೆಗಿಳಿದು ಹತ್ತಾರು ಕೋಟಿ ಸಂಪಾದಿಸಿದ್ದ. ಬ್ಯಾಂಕ್​ ಅಧಿಕಾರಿಗಳ ಮೂಲಕ ದಂಧೆ ನಡೆಸಿದ್ದ. ಹಲವು ಭ್ರಷ್ಟರಿಗೆ ಈತ ಕೋಟಿಗಟ್ಟಲೆ ಕಪ್ಪು ಹಣವನ್ನು ಬಿಳಿ ಮಾಡಿಕೊಟ್ಟಿದ್ದ. ಇಂಥ ಕ್ರಿಮಿಯನ್ನು ಬೆಂಗಳೂರು ಪೊಲೀಸರು ಮಟ್ಟ ಹಾಕಲು ಮುಂದಾಗಿದ್ದು, ಅಭಿನಂದನಾರ್ಹ ವಿಚಾರ.

- ರಮೇಶ್​​ ಕೆ.ಹೆಚ್.​, ಕ್ರೈಂ ಬ್ಯೂರೋ, ಸುವರ್ಣ ನ್ಯೂಸ್​​