Asianet Suvarna News Asianet Suvarna News

ಕೇಳಿದಿರಾ ಕೆಂಪುಕೋಟೆಯ ಕಲ್ಲಿನ ಕಥೆಯಾ?

ಭಾರತದ ಇತಿಹಾಸದಲ್ಲಿ ಮೊಘಲರದ್ದು ಮಹತ್ವದ್ದ ಆಡಳಿತ. ಇಲ್ಲಿ ಆಳಿದ ದೊರೆಗಳು ಒಂದೊಂದು ಅಂಶಗಳಿಗೆ ಇತಿಹಾಸ ಪುಟಗಳಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಅವರಲ್ಲಿ, 5 ನೇ ದೊರೆ ಷಹಜಹಾನ್ ಕೂಡ ಒಬ್ಬನು. ಆಗ್ರಾದ ತಾಜ್ ಮಹಲ್ ಮತ್ತು ದೆಹಲಿಯ ಕೆಂಪು ಕೋಟೆ ನಿರ್ಮಾಣ ಗೊಂಡಿದ್ದು ಇವನಿಂದಲೇ. 

Historical significant of Red Port
Author
Bengaluru, First Published Aug 15, 2018, 12:29 PM IST

ನವದೆಹಲಿ (ಆ. 15): ಭಾರತದ ಇತಿಹಾಸದಲ್ಲಿ ಮೊಘಲರದ್ದು ಮಹತ್ವದ್ದ ಆಡಳಿತ. ಇಲ್ಲಿ ಆಳಿದ ದೊರೆಗಳು ಒಂದೊಂದು ಅಂಶಗಳಿಗೆ ಇತಿಹಾಸ ಪುಟಗಳಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಅವರಲ್ಲಿ, 5 ನೇ ದೊರೆ ಷಹಜಹಾನ್ ಕೂಡ ಒಬ್ಬನು. ಆಗ್ರಾದ ತಾಜ್ ಮಹಲ್ ಮತ್ತು ದೆಹಲಿಯ ಕೆಂಪು ಕೋಟೆ ನಿರ್ಮಾಣ ಗೊಂಡಿದ್ದು ಇವನಿಂದಲೇ.

ಷಹಜಹಾನ್ ಆಗ್ರಾದಿಂದ ತನ್ನ ಆಡಳಿತ ಕೇಂದ್ರ, ರಾಜಧಾನಿಯನ್ನು ಬೇರೆಡೆಗೆ ಸ್ಥಳಾಂತರಿಸಲು ತೀರ್ಮಾನಿಸಿದ. ಆ ಹೊಸ ಪ್ರದೇಶಕ್ಕೆ ಷಹಜನಾಬಾದ್ ಎಂದು ನಾಮಕರಣ ಮಾಡಲಾಯಿತು. ಅಲ್ಲಿ ಕೋಟೆಯೊಂದನ್ನು ಕಟ್ಟಲು ತೀರ್ಮಾನಿಸಿದ. ತಾಜ್ ಮಹಲ್‌ನ್ನು ನಿರ್ಮಿಸಿದ್ದ ವಾಸ್ತುಶಿಲ್ಪಿ ಉಸ್ತಾದ್ ಅಹ್ಮದ್ ಲಾಹೌರಿಯೇ ಕೆಂಪು ಕೋಟೆಗೂ ವಾಸ್ತು ಶಿಲ್ಪವನ್ನು ರಚಿಸಿದ.

13 ಮೇ 1638 ರಂದು ಪವಿತ್ರ ಮೊಹರಮ್‌ನಲ್ಲಿ ಕೋಟೆಯ ನಿರ್ಮಾಣ ಕಾರ್ಯಕ್ಕೆ ಷಹಜಹಾನ್ ಚಾಲನೆ ನೀಡಿದ ಮತ್ತು 6 ಏಪ್ರಿಲ್ 1648 ರಲ್ಲಿ ಇದರ ಕಾರ್ಯ ಪೂರ್ಣಗೊಂಡಿತು ಎಂದು ಇತಿಹಾಸ ಹೇಳುತ್ತದೆ. ಕೋಟೆಯ ನಿರ್ಮಾಣಕ್ಕೆ ಕೆಂಪು ಮತ್ತು ಬಿಳಿ ಮರಳು ಶಿಲೆಗಳನ್ನು ಉಪಯೋಗಿಸಲಾಗಿದೆ. ಕೆಂಪು ಮತ್ತು ಬಿಳಿ ಷಹಜಹಾನ್‌ಗೆ ಇಷ್ಟವಾದ ಬಣ್ಣಗಳು ಎಂಬ ಕಾರಣವನ್ನೂ ಇದಕ್ಕೆ ನೀಡಲಾಗುತ್ತದೆ. ಆದರೆ, ಕೆಂಪು ಮತ್ತು ಬಿಳಿ ಬಣ್ಣಗಳು ಮೊಘಲ್ ಸಾಮ್ರಾಜ್ಯ ರಾಜಕೀಯ ಮತ್ತು ಸಾಂಸ್ಕೃತಿ ಭವ್ಯತೆಯ ಸೂಚಕವಾಗಿವೆ ಎಂದೂ ಹೇಳಲಾಗುತ್ತದೆ.

ಈಗ ಷಹಜನಾಬಾದ್‌ನ ಕೋಟೆಯು ಮೊಘಲರ ನೂತನ ಆಡಳಿತ ಕೇಂದ್ರವಾಯಿತು. ಯಮುನಾ ನದಿದಂಡೆಯಲ್ಲಿ ಸುಂದರವಾದ ಕೋಟೆ ನಿರ್ಮಾಣವಾಗಿದೆ. ಕೋಟೆಯ ಒಳಗೆ ಸುಂದರವಾದ ಅರಮನೆ, ಸಾರ್ವಜನಿಕ ಸಭಾಂಗಣ, ಬಾವಿ, ನೀರಿನ ವ್ಯವಸ್ಥೆ, ಒಂದಕ್ಕಿಂತ ಒಂದು ಮೋಹಕವಾಗಿರುವ ಕಲಾಕೃತಿಗಳು ಅರಳಿದವು. ಪ್ರಜಾಪ್ರಭುತ್ವದಲ್ಲೆ ರಾಜಕೀಯ ಮತ್ತು ಆಡಳಿತ ಏಕಸ್ವಾಮ್ಯವಾಗಿರುವಾಗ ಇನ್ನು ರಾಜ್ಯಾಡಳಿತದಲ್ಲಿ ಕೇಳಬೇಕೇ? ಸಿಂಹಾಸನದ ದಾಹ, ಮಕ್ಕಳಿಗೇ ಅಧಿಕಾರ ನೀಡುವುದು ವಾಡಿಕೆಯಾಗಿತ್ತು.

ಷಹಜಹಾನ್ ನಂತರ ಅವನ ಮಗ ಔರಂಗಜೇಬ ಅಧಿಕಾರಕ್ಕೆ ಬಂದನು. ಔರಂಗಜೇಬ ನಂತರ ಜಲಂದರ್ ಶಾ ಅಧಿಕಾರಕ್ಕೆ ಬಂದನು. ಜಲಂದರ್ ಶಾ ಕೊಲೆಯ ನಂತರ ಫಕ್ರುಶಿಯಾರ್ ಅಧಿಕಾರಕ್ಕೆ ಬಂದನು. ಇದಾದ ನಂತರ ಮೊಹಮೊದ್ ಶಾ ಕೆಂಪು ಕೋಟೆಯಲ್ಲಿ ಆಡಳಿತವನ್ನು ಪ್ರಾರಂಭಿಸಿದ. ಆದರೆ, ಈ ವೇಳೆಗೆ ಮೊಘಲರ ಸೈನ್ಯದ ಶಕ್ತಿ ಕಡಿಮೆ ಆಗಿದ್ದಿರಬೇಕು.

1739 ರಲ್ಲಿ ತುರ್ಕ್ ಆಡಳಿತಗಾರ ನಾದಿರ್ ಶಾ ಷಹಜನಾಬಾದ್ ಮೇಲೆ ದಾಳಿ ಮಾಡುತ್ತಾನೆ. ಅತೀ ಸುಲಭವಾಗಿಯೂ ಗೆಲ್ಲುತ್ತಾನೆ ಕೂಡ. ಒಬ್ಬ ರಾಜ ಒಂದು ರಾಜ್ಯದ ಮೇಲೆ ದಾಳಿ ಮಾಡಿ ಗೆದ್ದರೆ ಸೋತ ರಾಜ್ಯವನ್ನು ಲೂಟಿ ಮಾಡುವಂತೆ ನಾದಿರ್ ಶಾ ಮಾಡಿದ ಲೂಟಿ ಅಂದಿನ ಮೊಘಲ ಆಡಳಿತಕ್ಕಷ್ಟೇ ಅಲ್ಲದೆ ಇಂದಿನ ಭಾರತಕ್ಕೂ ನಷ್ಟವನ್ನು ಉಂಟುಮಾಡಿದೆ. ಏಕೆಂದರೆ, ನಾದಿರ್ ಶಾ, ಕೋಟೆ ಮತ್ತು ನಗರವನ್ನ ಲೂಟಿ ಮಾಡಿದಾಗ ಮಯೂರ ಸಿಂಹಾಸನ ಮತ್ತು ಕೋ ಇ ನೂರ್(ಬೆಳಕಿನ ಬೆಟ್ಟ) ವಜ್ರವನ್ನು ತೆಗೆದುಕೊಂಡು ಹೋದ.ಇವನ ನಂತರದಲ್ಲಿ ಮರಾಠರು, ಶಿಖ್ಖರು, ಜಾಟರು, ಗುರ್ಜಾರರು, ರೋಹಿಲ್ಲಾಗಳು ಮತ್ತು ಅಫ್ಘನ್ನರು ದಾಳಿ ಮಾಡಿದರು.

ಮೊಘಲರ ವೈಭವಕ್ಕೆ ನಿದರ್ಶನವಾಗಿದ್ದ ಕೆಂಪು ಕೋಟೆ ಅನೇಕ ದಾಳಿಯಿಂದ, ಲೂಟಿಯ ನಂತರ ಬ್ರಿಟಿಷರ ವಶವಾಯಿತು. 1803 ರಲ್ಲಿ ಷಹಜನಾಬಾದ್(ದೆಹಲಿ)ಯನ್ನು ವಶಪಡಿಸಿಕೊಂಡು ಬ್ರಿಟಿಷರು ಕೆಂಪು ಕೋಟೆಯ ಮೇಲೆ ನಿಯಂತ್ರಣ ಇಟ್ಟುಕೊಂಡರು. ಬ್ರಿಟಿಷರು ನಿಯಂತ್ರಣದಲ್ಲಿದ್ದು ಹಾನಿ ಅನುಭವಿಸುತ್ತಿದ್ದ ಜನರು ಅವರ ವಿರುದ್ಧ ದಂಗೆ ಎದ್ದರು. ಬಹದ್ದೂರ ಷಾ ಜಾಫರ್ ನೇತೃತ್ವದಲ್ಲಿ ದಂಗೆಕೋರರು ಬ್ರಿಟಿಷರ ನಿಯಂತ್ರಣದಲ್ಲಿದ್ದ ಕೆಂಪು ಕೋಟೆಯನ್ನು ಮತ್ತೆ ತಮ್ಮ ವಶಕ್ಕೆ ಪಡೆದುಕೊಂಡು, ಮೊಹಮೊದ್ ಭಕ್ತ ಖಾನ್ ನೇತೃತ್ವದಲ್ಲಿ ಆಡಳಿತವನ್ನು ಪ್ರಾರಂಭಮಾಡಿದರು. ಆದರೆ, ಬ್ರಿಟಿಷರು ಇಷ್ಟಕ್ಕೆ ಸುಮ್ಮನಾಗದೆ ದಂಗೆಕೋರರನ್ನು ಹತ್ತಿಕ್ಕಲು ಮುಂದಾಗುತ್ತಾರೆ.

ಸಿಕ್ಕಸಿಕ್ಕವರನ್ನು ಸಿಕ್ಕಸಿಕ್ಕಲ್ಲಿ ಗಲ್ಲಿಗೇರಿಸುವುದು ಮತ್ತು ಬಂದೂಕಿನಿಂದ ಕೊಲ್ಲುತ್ತಾರೆ. ಬಹದ್ದೂರ ಷಾ ಜಾಫರ್ ಯಮುನಾ ನದಿಯನ್ನು ದಾಟಿ ಪಲಾಯನ ಮಾಡಿ ಹುಮಾಯೂನ್ ಆಶ್ರಯ ಪಡೆದುಕೊಳ್ಳುತ್ತಾನೆ. ಇತ್ತ ಬ್ರಿಟಿಷರು, ಈಗಾಗಲೇ ವಿವಿಧ ದಾಳಿಗೆ ಒಳಗಾಗಿದ್ದ ಕೆಂಪು ಕೋಟೆ ಮೇಲೆ ಇನ್ನೊಂದು ರೀತಿಯ ದಾಳಿಮಾಡುತ್ತಾರೆ. ಒಳಾಂಗಣದ ಹೆಚ್ಚಿನ ವಿನ್ಯಾಸಗಳನ್ನು ಹಾಳು ಮಾಡುತ್ತಾರೆ. ಕೋಟೆಯಲ್ಲಿದ್ದ ಸುಂದರ ಅರಮನೆಯನ್ನು ಬ್ರಿಟಿಷ ಪಡೆಗಳ ವಸತಿಪ್ರದೇಶವನ್ನಾಗಿ ಮಾಡುತ್ತಾರೆ.

ಇದಾನಾ ಇ ಆಮ್(ಸಾರ್ವಜನಿಕ ಸಭಾಂಗಣ)ವನ್ನು ಆಸ್ಪತ್ರೆಯನ್ನಾಗಿ ಮಾಡುತ್ತಾರೆ. ದಿವಾನ್ ಇ ಖಾಸ್‌ಅನ್ನು ಸೈನ್ಯದ ತುಗಡಿಗಳಿಗೆ ನೀಡುತ್ತಾರೆ. ಮೌಲ್ಯಯುತ ಹರಳುಗಳು, ಚಿನ್ನಾಭರಣಗಳನ್ನು ಲೂಟಿ ಮಾಡುತ್ತಾರೆ. ಮೊಘಲರ ಕಾಲದಲ್ಲಿ ಅತ್ಯಂತ ಮಹತ್ವದ ಸ್ಥಳ ಬ್ರಿಟಿಷರ ಗೋಡೌನ್ ಆಗಿ ಮಾರ್ಪಾಡಾಗುತ್ತದೆ. ಕೆಲವು ವರ್ಷಗಳ ನಂತರ ಈಸ್ಟ್ ಇಂಡಿಯಾ ಕಂಪನಿ ಆಡಳಿತ ಮುಗಿದು ರಾಣಿ ವಿಕ್ಟೋರಿಯಾ ಅಡಳಿತ ಪ್ರಾರಂಭವಾಗುತ್ತದೆ. ಭಾರತದ ಆಡಳಿತ
 ನೋಡಿಕೊಳ್ಳಲು ಒಂದು ಸೆಕ್ರಟರಿ ಆಫೀಸ್ ತೆರೆದುಕೊಳ್ಳುತ್ತದೆ. ಬ್ರಿಟಿಷರು ತಮ್ಮ ಆಡಳಿತ ಕೇಂದ್ರವನ್ನು ಕೋಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸುತ್ತಾರೆ. ಕೋಟೆಯಲ್ಲಿ ಅನೇಕ ಮಾರ್ಪಾಡುಗಳನ್ನು ಮಾಡುತ್ತಾರೆ.

ಬ್ರಿಟಿಷರ ವಿರುದ್ಧ 1945-46 ರ ವೇಳೆಯಲ್ಲಿ ಸುಭಾಷ್‌ಚಂದ್ರ ಬೋಸ್ ಇಂಡಿಯನ್ ನ್ಯಾಷನಲ್ ಆರ್ಮಿ ಕಟ್ಟಿಕೊಂಡು ಹೋರಾಡಲು ಪ್ರಯತ್ನಿಸುತ್ತಾರೆ. ದ್ವಿತೀಯ ಮಹಾಯುದ್ಧದ ನಂತರ ಸೆರೆ ಸಿಕ್ಕ ಐಎನ್‌ಎಯ ಮೂವರು ಅಧಿಕಾರಿಗಳಾದ ಕರ್ನಲ್. ಷಹಾ ನವಾಜ್ ಖಾನ್, ಕರ್ನಲ್. ಪ್ರೇಮ್ ಕುಮಾರ್.  ಸಹ್ಗಲ್ ಮತ್ತು ಕರ್ನಲ್ ಗುರುಭಕ್ಷ ಸಿಂಗ್ ದಿಲ್ಲೋನ್ ಅವರನ್ನು ವಿಚಾರಣೆಗಾಗಿ ಇದೇ ಕೆಂಪು ಕೋಟೆಯಲ್ಲಿ ಬಂಧಿಸುತ್ತಾರೆ.

ಮೊಘಲರ ಮೇರು ವೈಭದ ಕೋಟೆ ಈಸ್ಟ್ ಇಂಡಿಯಾ ಕಂಪನಿಯ ಗೋಡೌನ್ ಆಯ್ತು ಮತ್ತು ಜೈಲಾಗಿಯೂ ಬದಲಾಯಿತು. ಎಲ್ಲ ಪ್ರಯತ್ನಗಳಾದಿಯಾಗಿ 1947 ರ ಅಗಸ್ಟ್ 15 (14 ರಂದು ಮಧ್ಯರಾತ್ರಿ)ರಂದು ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ ನೀಡಿದರು. ಆಗ ಮೊದಲ ಬಾರಿಗೆ ಕೆಂಪುಕೋಟೆಯ ಮೇಲೆ ಸ್ವತಂತ್ರ ಭಾರತದ ಧ್ವಜಾರೋಹಣವನ್ನು ಅಂದಿನ ಮತ್ತು ಪ್ರಥಮ ಪ್ರಧಾನಿಯೂ ಆಗಿದ್ದ ಜವಹಾರ್ ಲಾಲ್ ನೆಹರು ನೆರವೇರಿಸಿದರು. ಅದರ ಪ್ರತೀಕವಾಗಿ ಇಂದಿಗೂ ಪ್ರತಿ ಸ್ವಾತಂತ್ರ್ಯೋತ್ಸವ ದಿನದಂದು ಪ್ರಧಾನ ಮಂತ್ರಿಗಳು ಅದೇ ಕೆಂಪು ಕೋಟೆಯ ಮೇಲೆ ಧ್ಜಜಾರೋಹಣ ಮಾಡುತ್ತಾರೆ. ಮೊಘಲರ ವೈಭವವನ್ನು ಬ್ರಿಟಿಷರ ಆಡಳಿತದಲ್ಲಿ ಕಳೆದುಕೊಂಡಿದ್ದ ಈ ಕೋಟೆಗೆ ಮತ್ತೆ ಮೆರಗು ಬಂದಿದ್ದು ಸ್ವತಂತ್ರಭಾರತದಲ್ಲೇ.

-ರವಿ ಪೂಜಾರ

Follow Us:
Download App:
  • android
  • ios