ಇನ್ನು ಕೆಲವರಲ್ಲಿ 3 ದಿನ, ಮತ್ತೂ ಕೆಲವರಲ್ಲಿ 11 ದಿನಗಳ ಕಾಲ ಮನೆಯವರು ಅಡುಗೆ ಮಾಡಬಾರದು. ಬೇರೆಯವರೇ ಯಾರಾದರೂ ಮಾಡಬೇಕು.

ಮನೆಯಲ್ಲಿ ಯಾರಾದರೂ ಮೃತಪಟ್ಟರೆ ಕುಟುಂಬದ ಇತರ ಸದಸ್ಯರು ಉಪವಾಸ ಇರುವುದಕ್ಕೆ ಸಾಧ್ಯವಿಲ್ಲ. ಅಡುಗೆ-ಊಟ ಮಾಡಲೇಬೇಕು. ಆದರೆ, ಹಿಂದೂ ಸಂಪ್ರದಾಯದ ಪ್ರಕಾರ ಮೃತರ ಮನೆಯವರು ಅಡುಗೆಮಾಡುವಂತಿಲ್ಲ. ಕೆಲ ಸಮುದಾಯಗಳಲ್ಲಿ ಮೃತದೇಹದ ಸಂಸ್ಕಾರ ಮಾಡುವ ದಿನ ಮಾತ್ರ ಮನೆಯವರು ಅಡುಗೆ ಮಾಡಬಾರದು.

ಇನ್ನು ಕೆಲವರಲ್ಲಿ 3 ದಿನ, ಮತ್ತೂ ಕೆಲವರಲ್ಲಿ 11 ದಿನಗಳ ಕಾಲ ಮನೆಯವರು ಅಡುಗೆ ಮಾಡಬಾರದು. ಬೇರೆಯವರೇ ಯಾರಾದರೂ ಮಾಡಬೇಕು. ಮನೆಯವರು ಅಡುಗೆ ಮಾಡಿದರೆ ಮೃತರ ದೇಹದ ಜೊತೆಗೆ ಆತ್ಮ ಕೂಡ ಸುಟ್ಟುಹೋಗುತ್ತದೆ ಎಂದು ಹೇಳುವುದುಂಟು. ಅದು ಮೂಢ ನಂಬಿಕೆಯಷ್ಟೆ. ವಾಸ್ತವವಾಗಿ ಹೀಗೆ ಮನೆಯವರು ಅಡುಗೆ ಮಾಡಬಾರದು ಎಂಬುದಕ್ಕೆ ಕಾರಣ ಅವರಿಗೆ ದುಃಖಿಸಲು ಹಾಗೂ ಮೃತರಿಗೆ ಸಂತಾಪ ವ್ಯಕ್ತಪಡಿಸಲು ಒಂದಷ್ಟು ಸಮಯ ಸಿಗಲಿ ಎಂಬುದೇ ಆಗಿದೆ.

ಬೇರೆಯವರು ಅಡುಗೆ ಮಾಡಿ ಮನೆಯವರಿಗೆ ಬಡಿಸುವ ಮೂಲಕ ಆ ಮನೆಯಲ್ಲಿ ಒಬ್ಬರು ಹೊರಟುಹೋಗಿದ್ದರೂ ನಿಮ್ಮ ಜೊತೆ ನಾವಿದ್ದೇವೆ ಎಂದು ಸಾಂಕೇತಿಕವಾಗಿ ಹೇಳುತ್ತಾರೆ. 11 ದಿನದ ಸೂತಕದ ಆಶಯವೂ ಇದೇ ಆಗಿದೆ. ಅದು ಮಡಿ-ಮೈಲಿಗೆಗೆ ಸಂಬಂಧಿಸಿದ್ದಲ್ಲ. ಬದಲಿಗೆ, ಮೃತರ ಸಮೀಪದ ಸಂಬಂಧಿಗಳಿಗೆ ದುಃಖ ನೀಗಿಕೊಳ್ಳಲು ಒಂದಷ್ಟು ಸಮಯಾವಕಾಶ ನೀಡುವುದು. ಹಿಂದೂಗಳಲ್ಲಿ 11 ದಿನದ ಸೂತಕವಿದ್ದರೆ, ಕ್ರಿಶ್ಚಿಯನ್ನರಲ್ಲಿ 30 ದಿನದ ಶೋಕಾಚರಣೆ ಹಾಗೂ ಇಸ್ಲಾಂನಲ್ಲಿ 3 ದಿನದ ಶೋಕಾಚರಣೆಯಿದೆ. ತಂದೆ-ತಾಯಿ, ಗಂಡ, ಮಕ್ಕಳಂತಹ ಸಮೀಪವರ್ತಿಗಳನ್ನು ಕಳೆದುಕೊಂಡರೆ ಸಾಮಾನ್ಯವಾಗಿ ಗರಿಷ್ಠ ದಿನಗಳ ಸೂತಕವಿರುತ್ತದೆ. ಸ್ವಲ್ಪ ದೂರದವರನ್ನು ಕಳೆದುಕೊಂಡರೆ ಕಡಿಮೆ ದಿನಗಳ ಸೂತಕವಿರುತ್ತದೆ. ಹೆಚ್ಚು ದುಃಖ ನೀಡುವ ಸಾವಿಗೆ ಹೆಚ್ಚು ಸೂತಕ, ಕಡಿಮೆ ದುಃಖ ನೀಡುವ ಸಾವಿಗೆ ಕಡಿಮೆ ಸೂತಕ ಎಂಬುದೇ ಇದರ ಹಿಂದಿನ ಲೆಕ್ಕ.