ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ! ಐತಿಹಾಸಿಕ ಸುಪ್ರೀಂ ಕೋರ್ಟ್ ತೀರ್ಪಿಗೆ ಅಪಸ್ವರ! ತೀರ್ಪು ಮರುಪರಿಶೀಲನೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ! ಹಿಂದೂ ಪರ ಸಂಘಟನೆಗಳಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ!ಎರ್ನಾಕುಲಂನಲ್ಲಿ ಅಯ್ಯಪ್ಪ ಭಕ್ತರಿಂದ ಭಾರೀ ಪ್ರತಿಭಟನೆ
ಎರ್ನಾಕುಲಂ(ಅ.8): ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಹೆಣ್ಣುಮಕ್ಕಳಿಗೆ ಪ್ರವೇಶದ ಅವಕಾಶ ನೀಡಿದ್ದ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಹಿಂದೂ ಪರ ಸಂಘಟನೆಗಳು ನಿರ್ಧರಿಸಿವೆ.
ಕೇರಳದ ಪ್ರತಿಷ್ಠಿತ ನಾಯರ್ ಸರ್ವೀಸ್ ಸೊಸೈಟಿ, ಪಂಡಾಲಮ್ ರಾಯಲ್ ಫ್ಯಾಮಿಲಿ ಹಾಗೂ ಶಬರಿಮಲೆ ದೇವಸ್ಥಾನದ ಮುಖ್ಯ ಅರ್ಚಕ, ಅಯ್ಯಪ್ಪ ಭಕ್ತ ಮಂಡಳಿ ಸೇರಿದಂತೆ ವಿವಿಧ ಸಂಘಟನೆಗಳು ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ.
ಈ ಕುರಿತು ಮಾಹಿತಿ ನೀಡಿರುವ ಶಬರಿಮಲೆ ದೇವಸ್ಥಾನದ ಮುಖ್ಯ ಅರ್ಚಕ ಮೋಹನಾರು ಕಂದಾರು, ಸುಪ್ರೀಂ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರಾಕರಿಸಿರುವ ರಾಜ್ಯ ಸರ್ಕಾರದೊಂದಿಗೆ ಯಾವುದೇ ಮಾತುಕತೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶದ ಅವಕಾಶ ನೀಡುವುದರಿಂದ ಶತಮಾನಗಳ ನಂಬಿಕೆ ಮತ್ತು ಪಾವಿತ್ರ್ಯವನ್ನು ಹಾಳು ಮಾಡಿದಂತೆ ಎಂದು ಮೋಹನಾರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ವಿವಿಧ ಹಿಂದೂ ಸಂಘಟನೆಗಳು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಸುಪ್ರೀಂ ಕೋರ್ಟ್ ದೇವಸ್ಥಾನದ ಪಾವಿತ್ರ್ಯ ಕಾಪಾಡಲಿದೆ ಎಂಬ ವಿಶ್ವಾಸವಿದೆ ಎಂದು ಮೋಹನಾರು ಭರವಸೆ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮೊದಲು ಸುಪ್ರೀಂ ಕೋರ್ಟ್ ತೀರ್ಪು ವಿರೋಧಿಸಿ ಅಯ್ಯಪ್ಪ ಭಕ್ತ ಮಂಡಳಿಯ ನೂರಾರು ಸದಸ್ಯರು ಎರ್ನಾಕುಲಂ, ನವದೆಹಲಿ ಮತ್ತು ಚೆನ್ನೈನಲ್ಲಿ ಪ್ರತಿಭಟನೆ ನಡೆಸಿದ್ದು, ಭಕ್ತಿ ಮತ್ತು ನಂಬಿಕೆಯನ್ನು ಕಾಪಾಡುವಂತೆ ಆಗ್ರಹಿಸಿದರು.
