Asianet Suvarna News Asianet Suvarna News

ವಾಗ್ಮೋರೆ, ಕಾಳೆ ಪರ ಹಿಂದು ಸಂಘಟನೆಗಳ ‘ಜಿಂದಾಬಾದ್‌’!

ಅಮಾಯಕ ಹಿಂದು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಆರೋಪಿಸಿ ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ವಿವಿಧ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

Hindu Organisation Bat For Wagmore And Kale
Author
Bengaluru, First Published Sep 6, 2018, 7:53 AM IST

ಬೆಂಗಳೂರು :  ವಿಚಾರವಾದಿಗಳ ಹತ್ಯೆ ಸಂಬಂಧ ಸನಾತನ ಸಂಸ್ಥೆ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದ್ದು, ಅಮಾಯಕ ಹಿಂದು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಆರೋಪಿಸಿ ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ವಿವಿಧ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈ ವೇಳೆ, ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತ ಹಿಂದು ಪರ ಸಂಘಟನೆಗಳ ಕಾರ್ಯಕರ್ತರಾದ ಕೆ.ಟಿ.ನವೀನ್‌ಕುಮಾರ್‌, ಪರಶುರಾಮ್‌ ವಾಗ್ಮೋರೆ, ಎಸ್‌.ಎಸ್‌.ಸುರೇಶ್‌, ಅಮಿತ್‌ ದೆಗ್ವೇಕರ್‌, ಅಮೋಲ್‌ ಕಾಳೆ, ಮೋಹನ್‌ ನಾಯಕ್‌, ರಾಜೇಶ್‌ ಬಂಗೇರಾ, ಗಣೇಶ್‌ ಮಿಸ್ಕಿನ್‌, ಅಮಿತ್‌ ಬದ್ಧಿ ಅವರ ಹೆಸರು ಹೇಳಿಕೊಂಡು ಜಯಘೋಷಣೆ ಕೂಗಿದರು. ಹಿಂದು ಧರ್ಮ ಸೇವಕರಿಗೆ ಜಯವಾಗಲಿ... ರಾಷ್ಟ್ರ ಪ್ರೇಮಿಗಳಿಗೆ ಜಯವಾಗಲಿ... ಇತ್ಯಾದಿ ಘೋಷಣೆ ಮೊಳಗಿಸಿದರು. ಅಂತೆಯೇ ಎಸ್‌ಐಟಿ ಅಧಿಕಾರಿಗಳು, ಪೊಲೀಸ್‌ ಇಲಾಖೆ, ಹಿಂದಿನ ಕಾಂಗ್ರೆಸ್‌ ಸರ್ಕಾರದ ವಿರುದ್ಧವೂ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಪೊರೇಶನ್‌ ವೃತ್ತದ ಬನಪ್ಪ ಉದ್ಯಾನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿದ ಕಾರ್ಯಕರ್ತರು, ರಾಜ್ಯ ಸರ್ಕಾರ ಹಾಗೂ ಎಸ್‌ಐಟಿ ವಿರುದ್ಧ ಭಿತ್ತಿ ಫಲಕ ಪ್ರದರ್ಶಿಸಿ, ಘೋಷಣೆ ಕೂಗಿದರು.

ಪೊಲೀಸರಿಂದ ಹಿಂದುಗಳಿಗೆ ಹಿಂಸೆ:  ನಂತರ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಹಿಂದೂ ಜನಜಾಗೃತಿ ಸಮಿತಿ ರಾಜ್ಯ ಸಮನ್ವಯಕಾರ ಗುರುಪ್ರಸಾದ್‌ ಮಾತನಾಡಿ, ಎಸ್‌ಐಟಿ ಅಧಿಕಾರಿಗಳು ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಅಮಾಯಕ ಹಿಂದು ಕಾರ್ಯಕರ್ತರನ್ನು ಬಂಧಿಸಿದ್ದು, ಹಿಂಸೆ ನೀಡಿ ತಮಗೆ ಬೇಕಾದ ಹಾಗೆ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಅವರ ವಿರುದ್ಧ ಸಂಘಟಿತ ಅಪರಾಧ ಕಾಯ್ದೆ (ಕೋಕಾ) ಪ್ರಕರಣ ದಾಖಲಿಸಿದ್ದಾರೆ. ವಾಸ್ತವದಲ್ಲಿ ಬಂಧಿತ 14 ಮಂದಿ ಆರೋಪಿಗಳು ಹಿಂದುಪರ ಸಂಘಟನೆಗಳ ಕಾರ್ಯಕರ್ತರಾಗಿದ್ದಾರೆ. ಈ ಪೈಕಿ ಒಬ್ಬರೂ ಸನಾತನ ಸಂಸ್ಥೆ ಅಥವಾ ಹಿಂದೂ ಜನಜಾಗೃತಿ ಸಮಿತಿಯ ಸದಸ್ಯರಲ್ಲ. ಆದರೂ ಸಹ ಈ ಎರಡೂ ಸಂಘಟನೆಯ ಹೆಸರನ್ನು ಪ್ರಕರಣದಲ್ಲಿ ಎಳೆದು ತರುವ ಮೂಲಕ ವ್ಯವಸ್ಥಿತ ಷಡ್ಯಂತ್ರ ರೂಪಿಸಲಾಗಿದೆ ಎಂದು ಕಿಡಿಕಾರಿದರು.

ಗೌರಿ ಲಂಕೇಶ್‌ ಹತ್ಯೆಯಾದ ಕೆಲವೇ ನಿಮಿಷಗಳಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಈ ಹತ್ಯೆಯ ಹಿಂದೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕೈವಾಡವಿದೆ ಎಂದು ಟ್ವೀಟ್‌ ಮಾಡಿದ್ದರು. ಈ ಬಗ್ಗೆ ಅವರಿಗೆ ಕನಸು ಬಿದ್ದಿತ್ತಾ ಎಂದು ಪ್ರಶ್ನಿಸಿದ ಅವರು, ಎಸ್‌ಐಟಿ ಅಧಿಕಾರಗಳು ಕೂಡ ಅದೇ ಕೋನದಲ್ಲಿ ತನಿಖೆ ನಡೆಸುತ್ತಿದ್ದಾರೆ. ಗೌರಿ ಹತ್ಯೆ ಬಳಿಕ ಆಕೆಯ ಸಹೋದರ ಇಂದ್ರಜಿತ್‌ ಲಂಕೇಶ್‌, ಗೌರಿಗೆ ನಕ್ಸಲರಿಂದ ಬೆದರಿಕೆ ಇತ್ತು ಎಂದು ಹೇಳಿದ್ದರು. ಆದರೆ, ಎಸ್‌ಐಟಿ ಮಾತ್ರ ನಕ್ಸಲರ ಕೋನದಲ್ಲಿ ತನಿಖೆಗೆ ಮುಂದಾಗಲಿಲ್ಲ . ಈ ಪ್ರಕರಣದಲ್ಲಿ ಹಿಂದು ಸಂಘಟನೆಯ ಹೆಸರು ಎಳೆದು ತರುತ್ತಿರುವ ಷಡ್ಯಂತ್ರದ ವಿರುದ್ಧ ಹಿಂದುಗಳೆಲ್ಲಾ ಒಂದಾಗಬೇಕು ಎಂದು ಕರೆ ನೀಡಿದರು.

ಪಿಎಫ್‌ಐ ನಿಷೇಧಕ್ಕೆ ಆಗ್ರಹ:  ವಕೀಲ ಎನ್‌.ಪಿ.ಅಮೃತೇಶ್‌ ಮಾತನಾಡಿ, ಸನಾತನ ಸಂಸ್ಥೆಯು ಕಾಂಗ್ರೆಸ್‌ ನಾಯಕರ ಸಕ್ಕರೆ ಕಾರ್ಖಾನೆ, ಶಿಕ್ಷಣ ಸಂಸ್ಥೆ, ದೇವಾಲಯ ಆಡಳಿತ ಮಂಡಳಿಗಳ ಭ್ರಷ್ಟಾಚಾರವನ್ನು ಬಯಲಿಗೆ ಎಳೆದಿದೆ. ಇದರಿಂದ ಕಾಂಗ್ರೆಸ್‌ ನಾಯಕರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ವಿಚಾರವಾದಿಗಳ ಹತ್ಯೆಗೆ ಸನಾತನ ಸಂಸ್ಥೆ ಹೆಸರು ತಳುಕು ಹಾಕುತ್ತಿರುವುದರ ಹಿಂದೆ ಕಾಂಗ್ರೆಸ್‌ ಇದೆ. ದೇಶದಲ್ಲಿ ಬಾಂಬ್‌ ಸ್ಫೋಟ, ಭಯೋತ್ಪಾದನೆ, ಮತಾಂತರ ಮುಂತಾದ ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಮತಾಂಧ ಸಂಘಟನೆಗಳನ್ನು ನಿಷೇಧಿಸುವ ಬದಲು, ದೇಶ ಮತ್ತು ಧರ್ಮದ ಪರ ಕೆಲಸ ಮಾಡುತ್ತಿರುವ ಸನಾತನ ಸಂಸ್ಥೆಯ ನಿಷೇಧಕ್ಕೆ ಮುಂದಾಗಿರುವುದು ಖಂಡನೀಯ ಎಂದರು.

ಗೌರಿ ಹತ್ಯೆಯಲ್ಲಿ ಬಂಧಿಸಿರುವ ಅಮಾಯಕರ ವಿರುದ್ಧ ಕೋಕಾ ಕಾಯ್ದೆ ಹಾಕಲಾಗಿದೆ. ಅದೇ ಎಂಟು ಮಂದಿ ಹಿಂದು ಕಾರ್ಯಕರ್ತರ ಹತ್ಯೆಯಲ್ಲಿ ಭಾಗಿಯಾಗಿರುವ ಪಿಎಫ್‌ಐ ಸಂಘಟನೆಯ ಹಬೀಬ್‌ ಪಾಷಾನ ವಿರುದ್ಧ ಇದುವರೆಗೂ ಕೋಕಾ ಕಾಯ್ದೆ ಹಾಕಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು, ಆತನ ವಿರುದ್ಧ ಕೂಡಲೇ ಕೋಕಾ ಕಾಯ್ದೆ ಹಾಕಬೇಕು. ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಪಿಎಫ್‌ಐ ಸಂಘಟನೆ ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಹಿಂದೂ ಜನಜಾಗೃತಿ ಸಮಿತಿಯ ಮೋಹನಗೌಡ, ಶ್ರೀರಾಮಸೇನೆಯ ವಿನಯಗೌಡ, ಹಿಂದೂ ಮಹಾಸಭಾದ ಕಿಶೋರ್‌, ಲೋಹಿತ್‌, ಕಿಸಾನ್‌ ಸಂಘದ ವೆಂಕಟಸ್ವಾಮಿ ರೆಡ್ಡಿ, ಬಜರಂಗದಳದ ತೇಜಸ್‌ಗೌಡ ಮತ್ತಿತರರು ಇದ್ದರು.

Follow Us:
Download App:
  • android
  • ios