"ರಜನೀಕಾಂತ್ ಅವರು ರಾಜಕಾರಣಕ್ಕೆ ಬರುವುದು ಖಚಿತ. ಅವರು ತಮ್ಮದೇ ಸ್ವಂತ ರಾಜಕೀಯ ಪಕ್ಷವನ್ನು ಆರಂಭಿಸಲಿದ್ದಾರೆ. ರಜನೀ ಸರ್ ರಾಜಕಾರಣಕ್ಕೆ ಬರಲು ಇದು ಸಕಾಲ. ತಮಿಳುನಾಡನ್ನು ಸದ್ಯದ ಬಿಕ್ಕಟ್ಟಿನಿಂದ ಪಾರು ಮಾಡಲು ಅವರಿಗೆ ಸಾಧ್ಯವಿದೆ," ಎಂದು ಹಿಂದೂ ಮಕ್ಕಳ್ ಕಚ್ಚಿಯ ಮುಖಂಡರು ಹೇಳಿದ್ದಾರೆ.

ಚೆನ್ನೈ(ಜೂನ್ 19): ತಮಿಳುನಾಡು ಸೂಪರ್'ಸ್ಟಾರ್ ರಜನೀಕಾಂತ್ ಅವರು ತಮಿಳುನಾಡಿನ ಬಲಪಂಥೀಯ ಪಕ್ಷವಾದ ಹಿಂದೂ ಮಕ್ಕಳ್ ಕಚ್ಚಿಯ ಮುಖಂಡರನ್ನು ಭೇಟಿಯಾಗಿರುವ ಸುದ್ದಿ ಕೇಳಿಬರುತ್ತಿದೆ. ರಜನೀ ಹೊಸ ಪಕ್ಷ ಕಟ್ಟಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆನ್ನುವ ಸುದ್ದಿ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಹಿಂದೂ ಮಕ್ಕಳ್ ಕಚ್ಚಿಯೊಂದಿಗೆ ರಜನೀ ಭೇಟಿ ನಿಜಕ್ಕೂ ಕುತೂಹಲ ಮೂಡಿಸಿದೆ.

ಹಿಂದೂ ಮಕ್ಕಳ್ ಕಚ್ಚಿ ಅಧ್ಯಕ್ಷ ಅರ್ಜುನ್ ಸಂಪತ್ ಅವರು ರಜನೀಕಾಂತ್ ನಿವಾಸಕ್ಕೆ ತೆರಳಿ 45 ನಿಮಿಷಗಳ ಕಾಲ ಮಾತನಾಡಿದ್ದಾರೆ. ಹಾಗೆಂದು ಅರ್ಜುನ್ ಸಂಪತ್ ಅವರೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಅವರು ನೀಡಿದ ಮಾಹಿತಿ ಪ್ರಕಾರ ರಜನೀಕಾಂತ್ ಅವರು "ರಜನೀಕಾಂತ್ ಅವರು ರಾಜಕಾರಣಕ್ಕೆ ಬರುವುದು ಖಚಿತ. ಅವರು ತಮ್ಮದೇ ಸ್ವಂತ ರಾಜಕೀಯ ಪಕ್ಷವನ್ನು ಆರಂಭಿಸಲಿದ್ದಾರೆ. ರಜನೀ ಸರ್ ರಾಜಕಾರಣಕ್ಕೆ ಬರಲು ಇದು ಸಕಾಲ. ತಮಿಳುನಾಡನ್ನು ಸದ್ಯದ ಬಿಕ್ಕಟ್ಟಿನಿಂದ ಪಾರು ಮಾಡಲು ಅವರಿಗೆ ಸಾಧ್ಯವಿದೆ," ಎಂದು ಹಿಂದೂ ಮಕ್ಕಳ್ ಕಚ್ಚಿಯ ಮುಖಂಡರು ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷವು ಮುಕ್ತಹಸ್ತದಿಂದ ರಜನೀಕಾಂತ್ ಅವರನ್ನ ಪಕ್ಷಕ್ಕೆ ಆಹ್ವಾನಿಸುತ್ತಲೇ ಇದೆ. ಆದರೆ, ಸ್ವಂತ ಪಕ್ಷದ ಮೂಲಕ ರಾಜಕಾರಣಕ್ಕೆ ಪ್ರವೇಶ ಮಾಡುತ್ತೇನೆಂದು ಪರೋಕ್ಷವಾಗಿ ಸೂಚನೆ ನೀಡಿರುವುದನ್ನು ಬಿಟ್ಟರೆ ಸೂಪರ್'ಸ್ಟಾರ್ ತಮ್ಮ ಯಾವುದೇ ದಾಳವನ್ನೂ ಇನ್ನೂ ಉರುಳಿಸಿಲ್ಲ.

ಆದರೆ, ರಾಜಕೀಯಕ್ಕೆ ಎಂಟ್ರಿ ಕೊಡುತ್ತೇನೆಂದು ರಜನೀಕಾಂತ್ ಸೂಚನೆ ಕೊಟ್ಟ ಬಳಿಕ ತಮಿಳುನಾಡಿನಲ್ಲಿ ಕೆಲ ಸಣ್ಣಪುಟ್ಟ ಸಂಘಟನೆಗಳು ಇದನ್ನು ಬಲವಾಗಿ ವಿರೋಧಿಸಿದ್ದವು. ರಜನೀಕಾಂತ್ ರಾಜಕಾರಣ ಪ್ರವೇಶಿಸಕೂಡದು ಎಂದು ಪ್ರತಿಭಟನೆಗಳು ನಡೆದಿದ್ದವು.