Asianet Suvarna News Asianet Suvarna News

ಅಯ್ಯೋ ಪಾಪಿ: ಹಿಂದೂ ಮಹಾಸಭಾ ವೆಬ್‌ಸೈಟ್‌ನಲ್ಲಿ ಗೋಮಾಂಸ ರೆಸಿಪಿ!

ಹಿಂದೂ ಮಹಾಸಭಾ ವೆಬ್‌ಸೈಟ್ ಹ್ಯಾಕ್! ಗೋಮಾಂಸದ ರೆಸಿಪಿ ಹರಿಬಿಟ್ಟ ಹ್ಯಾಕರ್ಸ್! ಹಿಂದೂ ಮಹಾಸಭಾ ಅಧ್ಯಕ್ಷರ ವಿವಾದಾತ್ಮಕ ಹೇಳಿಕೆ! ಕೇರಳ ಪ್ರವಾಹಕ್ಕೆ ಗೋಮಾಂಸ ಸೇವೆನೆಯೇ ಕಾರಣ!ವಿವಾದಾತ್ಮಕ ಹೇಳಿಕೆ ನೀಡಿದ್ದ ಅಧ್ಯಕ್ಷ ಸ್ವಾಮಿ ಚಕ್ರಪಾಣಿ! ಸಂಘಟನೆಯ ವೆಬ್‌ಸೈಟ್ ಹ್ಯಾಕ್ ಮಾಡಿದ ಟೀಂ ಕೇರಳ ಸೈಬರ್ ವಾರಿಯರ್ಸ್

Hindu Mahasabha website hacked, beef recipe posted
Author
Bengaluru, First Published Aug 25, 2018, 4:04 PM IST

ಕೊಚ್ಚಿ(ಆ.25): ಇದೊಂದ್ ತರಾ ಟಿಟ್ ಫಾರ್ ಟ್ಯಾಟ್ ಇದ್ದಂತೆ. ಅಖಿಲ ಭಾರತ ಹಿಂದೂ ಮಹಾಸಭಾ ಒಂದು ಪಕ್ಕಾ ಬಲಪಂಥೀಯ ಮತ್ತು ಹಿಂದೂ ಧರ್ಮ ರಕ್ಷಣೆಗೆ ಸದಾ ಮುಂಚೂಣಿಯಲ್ಲಿರುವ ಸಂಘಟನೆ. ಹಿಂದೂ ರಾಷ್ಟ್ರ ಪರಿಕಲ್ಪನೆ ಹೊಂದಿರುವ ಈ ಸಂಘಟನೆ, ಹಿಂದೂ ಜೀವನ ಪದ್ದತಿ ಮತ್ತು ಅದರ ಅನುಷ್ಠಾನಕ್ಕೆ ನಿರತವಾಗಿರುವ ಸಂಘಟನೆಯಾಗಿದೆ. ಆದರೆ ಕೇರಳ ಪ್ರವಾಹಕ್ಕೆ ಸಂಬಂಧಿಸಿದಂತೆ ಹಿಂದೂ ಮಹಾಸಭಾ ಅಧ್ಯಕ್ಷ ನೀಡಿದ ಹೇಳಿಕೆ ಇದೀಗ ಭಾರೀ ವಿವಾದ ಸೃಷ್ಟಿಸಿದೆ.

ಕೇರಳ ಜನರು ಗೋಮಾತೆಗೆ ಗೌರವ ಕೊಡದೇ ಇರುವುದು ಮತ್ತು ಗೋಮಾಂಸ ತಿನ್ನುವುದೇ ಜಲಪ್ರಳಯಕ್ಕೆ ಕಾರಣ ಎಂದು ಅಖಿಲ ಭಾರತ ಹಿಂದೂ ಮಹಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದರಿಂದ ರೊಚ್ಚಿಗೆದ್ದಿರುವ ಕೇರಳ ಜನ, ಚಕ್ರಪಾಣಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಲ್ಲದೇ ಟೀಂ ಕೇರಳ ಸೈಬರ್ ವಾರಿಯರ್ಸ್ ಎಂಬ ಹ್ಯಾಕರ್ ಸಂಘಟನೆಯೊಂದು ಹಿಂದೂ ಮಹಾಸಭಾ ವೆಬ್‌ಸೈಟ್‌ನ್ನು ಹ್ಯಾಕ್ ಮಾಡಿ ಅದರಲ್ಲಿ ಕೇರಳ ಮಾದರಿಯ ಬೀಫ್ ರೆಸಿಪಿಯನ್ನು ಸೇರಿಸಿದೆ. ಹಿಂದೂ ಮಹಾಸಭಾ ವೆಬ್‌ಸೈಟ್ ಹ್ಯಾಕ್ ಮಾಡಿರುವ ಈ ತಂಡ, ಕೇರಳದ ಸಾಂಸ್ಕೃತಿಕ ಬೀಫ್ ತಯಾರಿಕೆಯ ವಿಧಾನವನ್ನು ಸೇರಿಸಿದೆ.

ಗೋಮಾಂಸ ತಿನ್ನುವವರಿಗೆ ಮತ್ತು ಹಿಂದೂಯೇತರರಿಗೆ ಸರ್ಕಾರ ಪ್ರವಾಹ ಪರಿಹಾರ ಕೊಡಬಾರದು ಎಂದು ಹಿಂದೂ ಮಹಾಸಭಾ ಅಧ್ಯಕ್ಷ ಚಕ್ರಪಾಣಿ ಆಗ್ರಹಿಸಿದ್ದರು, ಅಲ್ಲದೇ ಭೀಕರ ಪ್ರವಾಹಕ್ಕೆ ಗೋಮಾಂಸ ಸೇವನೆ ಮಾಡುವ ಜನರೇ ಕಾರಣ ಎಂದೂ ಅವರು ಆಪಾದಿಸಿದ್ದರು.

ಈ ಕಾರಣಕ್ಕೆ ಹಿಂದೂ ಮಹಾಸಭಾ ವೆಬ್‌ಸೈಟ್ ಹ್ಯಾಕ್ ಮಾಡಿರುವ ಟೀಂ ಕೇರಳ ಸೈಬರ್ ವಾರಿಯರ್ಸ್ ತಂಡ, ಬೀಫ್ ತಯಾರಿಕೆಯ ವಿಧಾನವನ್ನು ತಿಳಿಸುವ ಪೇಜ್‌ನ್ನು ಅದರಲ್ಲಿ ಸೇರಿಸಿತ್ತು. ಅಲ್ಲದೇ ನಾವು ವ್ಯಕ್ತಿಯ ಚಾರಿತ್ರ್ಯಕ್ಕೆ ಗೌರವ ಕೊಡುತ್ತೇವೆ ಹೊರತು ಆತ ಏನು ತಿನ್ನುತ್ತಾನೆ ಎನ್ನುವುದರ ಮೇಲಲ್ಲ ಎಂದು ಬರೆಯಲಾಗಿದೆ.

ಇನ್ನು ತನ್ನ ವೆಬ್‌ಸೈಟ್‌ನಲ್ಲಿ ಗೋಮಾಸದ ರೆಸಿಪಿ ಕಾಣಿಸಿಕೊಳ್ಳುತ್ತಿದ್ದಂತೇ ವೆಬ್‌ಸೈಟ್‌ನ್ನು ತಾತ್ಕಾಲಿವಾಗಿ ಬಂದ್ ಮಾಡಿರುವ ಹಿಂದೂ ಮಹಾಸಭಾ, ಗೋಮಾಂಸದ ರೆಸಿಪಿ ಇರುವ ಪೇಜ್‌ನ್ನು ಡಿಲಿಟ್ ಮಾಡಿ ಮತ್ತೆ ಹೊಸದಾಗಿ ವೆಬ್‌ಸೈಟ್ ಬಿಡುಗಡೆ ಮಾಡಿದೆ.

Follow Us:
Download App:
  • android
  • ios