ತಿರುಚಿರಾಪಲ್ಲಿ[ಜೂ.09: ನೂತನ ಶಿಕ್ಷಣ ನೀತಿಯಲ್ಲಿ ತ್ರಿಭಾಷಾ ಸೂತ್ರ ಜಾರಿ ಕುರಿತ ಶಿಫಾರಸಿಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದ ತಮಿಳುನಾಡಿನಲ್ಲಿ ಇದೀಗ, ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಹಿಂದಿ ಫಲಕಗಳಿಗೆ ಮಸಿ ಬಳಿದ ಘಟನೆ ನಡೆದಿದೆ.

ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಬಿಎಸ್‌ಎನ್‌ಎಲ್‌ ಮತ್ತು ವಿಮಾನ ನಿಲ್ದಾಣಗಳಲ್ಲಿ ಅಳವಡಿಸಲಾಗಿದ್ದ ಹಿಂದಿ ಫಲಕಗಳಿಗೆ ಅನಾಮಿಕರು ಮಸಿ ಬಳಿದಿದ್ದಾರೆ. ಆದರೆ ಫಲಕಗಳಿಗೆ ಯಾವುದೇ ಹಾನಿ ಮಾಡಿಲ್ಲ. ಈ ಘಟನೆ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ವಿಶೇಷವೆಂದರೆ ಮಸಿ ಬಳಿದವರು, ಅಂಗ್ಲ ಫಲಕದ ತಂಟೆಗೆ ಹೋಗಿಲ್ಲ.

ಇತ್ತೀಚೆಗಷ್ಟೇ ಇಸ್ರೋದ ಮಾಜಿ ಮುಖ್ಯಸ್ಥ ಕಸ್ತೂರಿ ರಂಗನ್‌ ನೇತೃತ್ವದ ಸಮಿತಿ ಹೊಸ ಶಿಕ್ಷಣ ನೀತಿ ಜಾರಿ ಸಂಬಂಧ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ತ್ರಿಭಾಷಾ ಸೂತ್ರ ಜಾರಿಗೆ ಶಿಫಾರಸು ಮಾಡಿತ್ತು. ಆದರೆ ಇದಕ್ಕೆ ತಮಿಳುನಾಡು, ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.