ಬೆಂಗಳೂರು : ಯಲಹಂಕ ವಾಯುನೆಲೆ ತರಬೇತಿ ಪಡೆದ ಚಂಡೀಗಢದ ಫ್ಲೈಟ್ ಲೆಫ್ಟಿನೆಂಟ್ ಹೀನಾ ಜೈಸ್ವಾಲ್ ಅವರು ಭಾರತದ ಮೊಟ್ಟ ಮೊದಲ ಫ್ಲೈಟ್ ಎಂಜಿನಿಯರ್ ಆಗಿ ದಾಖಲೆ ಸೃಷ್ಟಿಸಿದ್ದಾರೆ. ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಆರು ತಿಂಗಳು ಫ್ಲೈಟ್ ಎಂಜಿನಿಯರಿಂಗ್ ತರಬೇತಿ ಪಡೆದ 27 ವರ್ಷದ ಹೀನಾ ಜೈಸ್ವಾಲ್, ಕಳೆದ ಜ. 5 ರಂದು ನಡೆದ ಆಯ್ಕೆ ಪ್ರಕ್ರಿಯೆಯನ್ನು ಯಶಸ್ವಿ ಯಾಗಿ ಪೂರ್ಣಗೊಳಿಸಿ ಫ್ಲೈಟ್ ಎಂಜಿನಿಯರ್ ಆಗಿ ದಾಖಲೆ ಬರೆದಿದ್ದಾರೆ.

ಛಂಡೀಗಢದ ಡಿ.ಕೆ.ಜೈಸ್ವಾಲ್ ಹಾಗೂ ಅನಿತಾ ಜೈಸ್ವಾಲ್ ದಂಪತಿಯ ಏಕೈಕ ಪುತ್ರಿಯಾಗಿರುವ ಹೀನಾ, ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಬಿ.ಇ ಪದವಿ ಪಡೆದು ಇದೀಗ ಫ್ಲೈಟ್ ಎಂಜಿನಿಯರ್ ಕೋರ್ಸ್‌ನಲ್ಲಿ ಉತ್ತೀರ್ಣರಾಗುವ ಮೂಲಕ ಭಾರತದ ಮೊದಲ ಮಹಿಳಾ ಫ್ಲೈಟ್ ಎಂಜಿನಿಯರ್ ಆಗಿ ಆಯ್ಕೆಯಾಗಿದ್ದಾರೆ. 

2018 ರ ವರೆಗೆ ಕೇವಲ ಪುರುಷರಿಗೆ ಮಾತ್ರವೇ ಸೀಮಿತವಾಗಿದ್ದ ಫ್ಲೈಟ್ ಎಂಜಿನಿಯರ್ ಕೋರ್ಸ್‌ಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಒತ್ತಡ ಹಾಗೂ ಅಪಾಯದ ಸಂದರ್ಭದಲ್ಲಿ ಏರ್‌ಕ್ರಾಫ್ಟ್‌ನ ನಿಯಂತ್ರಣ ಹಾಗೂ ನಿಗಾ ವಹಿಸುವ ಬಗ್ಗೆ ವಿಶೇಷ ತರಬೇತಿಯನ್ನು ಈ ಕೋರ್ಸ್‌ನಲ್ಲಿ ನೀಡಲಾಗುತ್ತದೆ.

ಫ್ಲೈಟ್ ಎಂಜಿನಿಯರ್ ಆಯ್ಕೆಗೆ ಮುನ್ನ ಭಾರತೀಯ ವಾಯುಸೇನೆಯ ಏರ್ ಮಿಸೈಲ್ ಸ್ಕ್ವಾಡ್ರ ನ್‌ನಲ್ಲಿ ಫಯರಿಂಗ್ ತಂಡದ ಮುಖ್ಯಸ್ಥೆ ಹಾಗೂ ಬ್ಯಾಟರಿ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು.