ಬೆಂಗಳೂರು (ಸೆ.23): ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಶೀಘ್ರದಲ್ಲಿ ಸರ್ಕಾರದ ನಿಲುವು ತಿಳಿಸುವಂತೆ ಹೈಕೋರ್ಟ್‌ ಸೂಚನೆ ನೀಡಿದೆ.

Add Asianetnews Kannada as a Preferred SourcegooglePreferred

ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ಮಾಡಿರುವ ಕ್ರಮ ಪ್ರಶ್ನಿಸಿ ಬಾಲಚಂದ್ರ ವಿಘ್ನೇಶ್ವರ್‌ ದೀಕ್ಷಿತ್‌ ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಆರ್‌.ಬಿ.ಬೂದಿಹಾಳ್‌ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ, ದೇವಾಲಯವು ಸಾರ್ವಜನಿಕರಿಗೆ ಸೇರಿದೆ. ಆದರೆ ಇದನ್ನು 2008ರಲ್ಲಿ ಅಂದಿನ ರಾಜ್ಯ ಸರ್ಕಾರ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿದೆ. ಸಾರ್ವಜನಿಕರ ಈ ಮಠವನ್ನು ಈಗ ಖಾಸಗಿಯವರ ಸುಪರ್ದಿಗೆ ಒಪ್ಪಿಸಿರುವುದು ಕಾನೂನು ಬಾಹಿರ. ಈ ಬಗ್ಗೆ ಸಾಕಷ್ಟುದೂರು ನೀಡಿದರೂ ಏನೂ ಪ್ರಯೋಜನವಾಗಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಅಡ್ವೊಕೇರ್ಟ್‌ ಜನರಲ್‌ ಎಂ.ಆರ್‌.ನಾಯಕ್‌, ಈ ಸಂಬಂಧ ಅಂದಿನ ಸರ್ಕಾರ ನಿರ್ಧಾರ ಕೈಗೊಂಡಿದೆ. ಈಗಾಗಲೇ ಈ ಕುರಿತು ರಾಜ್ಯಪಾಲರಿಗೆ ಹಾಗೂ ಸರ್ಕಾರಕ್ಕೆ ಅನೇಕ ದೂರುಗಳು ಬಂದಿವೆ. ಎಲ್ಲವನ್ನೂ ಸರ್ಕಾರ ಪರಿಶೀಲಿಸುತ್ತಿದೆ. ಅಂತಿಮ ನಿರ್ಧಾರ ತಿಳಿಸಲು ಇನ್ನೆರಡು ತಿಂಗಳ ಸಮಯಾವಕಾಶ ಬೇಕು ಎಂದು ಕೋರಿದರು.

ಪ್ರಕರಣ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಗೋಕರ್ಣ ಕ್ಷೇತ್ರದಲ್ಲಿರುವ ಮಹಾಬಲೇಶ್ವರ ದೇವಾಲಯವನ್ನು 2008ರ ಆಗಸ್ಟ್‌ನಲ್ಲಿ ಅಂದಿನ ಬಿಜೆಪಿ ಸರ್ಕಾರ ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ಮಾಡಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು ಗೋಕರ್ಣ ದೇವಾಲಯ ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ಕಾಯ್ದೆ 1997ಕ್ಕೆ ಒಳಪಡುತ್ತದೆ. ಈ ಹಿನ್ನೆಲೆಯಲ್ಲಿ ಅದನ್ನು ಹಸ್ತಾಂತರ ಮಾಡಿರುವುದು ಸರಿಯಲ್ಲ. ಈ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.