ಇಷ್ಟುದಿನ ರಾಜ್ಯದ ಒಳಗೆ ಮಾತ್ರ ಶೈಕ್ಷಣಿಕ ಪ್ರವಾಸ ಮಾಡುತ್ತಿದ್ದ ಪ್ರೌಢಶಾಲ ವಿದ್ಯಾರ್ಥಿಗಳಿಗೆ ಇನ್ನುಮುಂದೆ ಹೊರರಾಜ್ಯಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಭಾಗ್ಯ ದೊರೆಯಲಿದೆ.
ಬೆಂಗಳೂರು(ಆ.14): ರಾಜ್ಯ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿಗೆ ಹೊರರಾಜ್ಯಗಳಿಗೆ 'ಉಚಿತ ಶೈಕ್ಷಣಿಕ ಪ್ರವಾಸ' ಕೈಗೊಳ್ಳುವ ಅವಕಾಶ ದೊರೆಯಲಿದೆ.
ಕೇಂದ್ರ ಸರ್ಕಾರ ಇಂಥದ್ದೊಂದು ಅವಕಾಶ ಕಲ್ಪಿಸಿದ್ದು, ಮೊದಲ ಹಂತದಲ್ಲಿ 9 ಅಥವಾ 10ನೇ ತರಗತಿಯ ಯಾವುದಾದರೊಂದು ತರಗತಿಯ ವಿದ್ಯಾರ್ಥಿಗಳಿಗೆ ಈ ಅವಕಾಶ ಜಾರಿಗೊಳಿಸುವಂತೆ ರಾಜ್ಯಗಳಿಗೆ ಸೂಚಿಸಿದೆ.
ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ರಾಷ್ಟ್ರೀಯ ಮಾಧ್ಯಮಿಕ ಶಕ್ಷಣ ಅಭಿಯಾನ ಯೋಜನೆಯಡಿ 9/10ನೇ ತರಗತಿ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವಂತೆ ಎಲ್ಲಾ ರಾಜ್ಯಗಳ ಸರ್ವ ಶಿಕ್ಷಣ ಅಭಿಯಾನ(ಎಸ್ಎಸ್ಎ) ಅಧಿಕಾರಿಗಳಿಗೆ ಸೂಚಿಸಿದ್ದು, ಈ ಸಂಬಂಧ 2017-18ನೇ ಶೈಕ್ಷಣಿಕ ಸಾಲಿನಿಂದಲೇ ಇದನ್ನು ಜಾರಿಗೆ ತರುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಎಸ್ಎಸ್ಎ ಅಧಿಕಾರಿಗಳು ಹೇಳಿದ್ದಾರೆ. ಇದರೊಂದಿಗೆ ಇಷ್ಟುದಿನ ರಾಜ್ಯದ ಒಳಗೆ ಮಾತ್ರ ಶೈಕ್ಷಣಿಕ ಪ್ರವಾಸ ಮಾಡುತ್ತಿದ್ದ ಪ್ರೌಢಶಾಲ ವಿದ್ಯಾರ್ಥಿಗಳಿಗೆ ಇನ್ನುಮುಂದೆ ಹೊರರಾಜ್ಯಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಭಾಗ್ಯ ದೊರೆಯಲಿದೆ.
ಇದುವರೆಗೆ ರಾಜ್ಯ ಸರ್ಕಾರದ 'ಕರ್ನಾಟಕ ದರ್ಶನ, ಚಿಣ್ಣರ ದರ್ಶನ' ಎಂಬ ಯೋಜನೆಗಳಡಿ ಸರ್ಕಾರಿ ಶಾಲೆಗಳ ಪ.ಜಾತಿ, ಪ. ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಾತ್ರ ರಾಜ್ಯದ ಒಳಗೆ ಉಚಿತ ಶೈಕ್ಷಣಿಕ ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗುತ್ತಿತ್ತು.
