ಬಿಬಿಎಂಪಿ ಕಾರ್ಯವೈಖರಿ ಬಗ್ಗೆ ಹೈಕೋರ್ಟ್ ಅಸಮಾಧಾನ | ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್ | ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಬಿಲ್ಡರ್‌ರಿಂದ ಸತಾಯಿಸುವ ಆರೋಪ ಕೇಳಿ ಬಂದಿದೆ.
ಬೆಂಗಳೂರು (ಏ. 09): ‘ರಸ್ತೆ ಬದಿಯಲ್ಲಿ ಕಡ್ಲೇಬೀಜ ಮಾರುವವರಿಗೂ ಬಿಬಿಎಂಪಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೂ ಯಾವ ವ್ಯತ್ಯಾಸವೂ ಇಲ್ಲ. ಬಿಬಿಎಂಪಿ ಅಧಿಕಾರಿಗಳಿಗೆ ಓಸಿ ಮತ್ತು ಖಾತೆ ನೀಡುವುದು ದೊಡ್ಡ ಡರ್ಟಿ ಬಿಸಿನೆಸ್ ಆಗಿದ್ದು, ಅದನ್ನು ನಡೆಸುವವರೆಲ್ಲರನ್ನೂ ಗಲ್ಲಿಗೆ ಹಾಕಬೇಕು!’
-ಇದು ಬಿಬಿಎಂಪಿ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಹೈಕೋರ್ಟ್ ವ್ಯಕ್ತಪಡಿಸಿದ ತೀವ್ರ ಆಕ್ರೋಶದ ಪರಿ!
ಸಂಬಂಧಪಟ್ಟ ಎಲ್ಲಾ ಪ್ರಾಧಿಕಾರಗಳಿಂದ ಅನುಮತಿ ಪಡೆದ ಹೊರತಾಗಿಯೂ ನಗರದ ಹುಳಿಮಾವಿನಲ್ಲಿ ತಾನು ನಿರ್ಮಿಸಿರುವ ಖಾಸಗಿ ಅಪಾರ್ಟ್‌ಮೆಂಟ್‌ಗೆ ಸ್ವಾಧೀನಾನುಭವ ಪತ್ರ(ಒಸಿ) ನೀಡಲು 2015 ರಿಂದಲೂ ಬಿಬಿಎಂಪಿ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಬಿಲ್ಡರ್ ಸಂಸ್ಥೆಯಾದ ನಾಕೋಡಾ ಕನ್ಸ್‌ಸ್ಟ್ರಕ್ಷನ್ಸ್ ಲಿಮಿಟೆಡ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅವರು, ಬಿಬಿಎಂಪಿ ಮಂಜುನಾಥ್ ಪ್ರಸಾದ್ ಸಮ್ಮುಖದಲ್ಲಿ ಪಾಲಿಕೆಯ ಅಧಿಕಾರಿಗಳನ್ನು ಹಾಗೂ ಅವರ ಕಾರ್ಯ ವೈಖರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಅಂತಿಮವಾಗಿ ಪಾಲಿಕೆ ಅಧಿಕಾರಿ ಪಾಲಿಕೆ ಜಂಟಿ ಆಯುಕ್ತ ರಘು, ಅರ್ಜಿದಾರರಿಗೆ ಸ್ವಾಧೀನಾನುಭವ ಪತ್ರ ನೀಡಲು ಈ ಮೊದಲು ಹಾಕಿದ್ದ ಷರತ್ತುಗಳನ್ನು ಏಕೆ ವಾಪಸ್ ಪಡೆಯಲಾಗುತ್ತಿದೆ? ಎಂದು ಕಾರಣಗಳನ್ನು ವಿವರಿಸಿ ಪ್ರಮಾಣ ಪತ್ರ ಸಲ್ಲಿಸಬೇಕು. ಹಾಗೆಯೇ, ಅರ್ಜಿದಾರರು ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳನ್ನು ನೋಂದಣಿ ಮಾಡದಂತೆ ಯಾವ ಆಧಾರದ ಮೇಲೆ ಮುದ್ರಾಂಕ ಇಲಾಖೆಗೆ ಪತ್ರ ಬರೆಯಲಾಗಿದೆ ಎಂಬ ವಿವರಣೆ ನೀಡಬೇಕು ಎಂದು ಉಪವಿಭಾಗಾಧಿಕಾರಿ ಎಲ್ .ಸಿ.ನಾಗರಾಜ್‌ಗೆ ತಾಕೀತು ಮಾಡಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು ಏ.12 ಕ್ಕೆ ಮುಂದೂಡಿದರು.
ಮುಂದಿನ ವಿಚಾರಣೆಗೆ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಬಿಟ್ಟು, ಅಧಿಕಾರಿಗಳಾದ ರಘು ಮತ್ತು ಎಲ್.ಸಿ.ನಾಗರಾಜ್ ಕಡ್ಡಾಯವಾಗಿ ಹಾಜರಿರಬೇಕು ತಾಕೀತು ಮಾಡಿದ ನ್ಯಾಯಮೂರ್ತಿಗಳು, ಪಾಲಿಕೆಯು 396 ಪ್ರಕರಣಗಳಲ್ಲಿ ಒಸಿ ನೀಡದಿರುವ ಬಗ್ಗೆ ನಿವೃತ್ತ ನ್ಯಾಯಮೂರ್ತಿಯೊಬ್ಬರಿಂದ ಸಮಗ್ರ ತನಿಖೆ ನಡೆಸಿ ತಪ್ಪಿಸ್ಥರನ್ನು ಶಿಕ್ಷಿಸಲಾಗುವುದು. ಅಗತ್ಯವೆನಿಸಿದರೆ ಸಾರ್ವಜನಿಕ ಹಿತದೃಷ್ಟಿಯಿಂದ ಮಾರ್ಗಸೂಚಿ ರಚಿಸಲಾಗುವುದು ಎಂದು ಇದೇ ವೇಳೆ ಮೌಖಿಕವಾಗಿ ನುಡಿದರು.
ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಬಿಬಿಎಂಪಿ ಗರಂ
