ರಾಜ್ಯ ಸರ್ಕಾರದ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುವ ಹಿರಿಯ ನಾಯಕರು ತಮ್ಮ ಈ ಧೋರಣೆ ಮುಂದುವರೆಸದಂತೆ ತಡೆಯುವ ಪ್ರಯತ್ನಕ್ಕೆ ಖುದ್ದು ಹೈಕಮಾಂಡ್ ಮುಂದಾಗಿದ್ದು , ರೆಬೆಲ್ ನಾಯಕರಿಗೆ ದೂರವಾಣಿ ಮೂಲಕ ಕಿವಿ ಮಾತು ಹೇಳಿದ್ದಾರೆ.
ಬೆಂಗಳೂರು(ಫೆ.01): ರಾಜ್ಯ ಸರ್ಕಾರದ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುವ ಹಿರಿಯ ನಾಯಕರು ತಮ್ಮ ಈ ಧೋರಣೆ ಮುಂದುವರೆಸದಂತೆ ತಡೆಯುವ ಪ್ರಯತ್ನಕ್ಕೆ ಖುದ್ದು ಹೈಕಮಾಂಡ್ ಮುಂದಾಗಿದ್ದು , ರೆಬೆಲ್ ನಾಯಕರಿಗೆ ದೂರವಾಣಿ ಮೂಲಕ ಕಿವಿ ಮಾತು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಕ್ಕೆ ಹೊರಗಿನವರಿಗಿಂತ ಒಳಗಿನವರ ಕಿರಿಕಿರಿಯೇ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಪಕ್ಷದ ಹಿರಿಯ ಮುಖಂಡರು. ಒಂದು ಕಡೆ ಮಂಗಳೂರಿನಿಂದ ಜನಾರ್ದನ ಪೂಜಾರಿ ಚಾಟಿ ಬೀಸಿದರೆ, ಮತ್ತೊಂದು ಕಡೆ ಮೈಸೂರಿನಿಂದ ಎಚ್. ವಿಶ್ವನಾಥ್ ಸರ್ಕಾರದ ವಿರುದ್ಧ ಗುಡುಗುತ್ತಿದ್ದಾರೆ. ಇದರ ಮಧ್ಯೆ ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ಸಹ ಸಿಎಂ ಸಿದ್ದರಾಮಯ್ಯ ಹಾಗೂ ಕೆಲ ಸಚಿವರ ವಿರುದ್ಧ ಸಿಟ್ಟಾಗಿದ್ದಾರೆ. ಇವರ ಕೋಪವನ್ನು ಶಮನ ಮಾಡಲು ಕೆಪಿಸಿಸಿ ವಿಫಲವಾದ ಹಿನ್ನೆಲೆಯಲ್ಲಿ ಈ ಬಗ್ಗೆ ಮಧ್ಯಪ್ರವೇಶಿಸುವಂತೆ ರಾಜ್ಯನಾಯಕರು ಹೈಕಮಾಂಡ್ ಮೊರೆಹೋಗಿದ್ದರು.
ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಹೈಕಮಾಂಡ್ ಮಧ್ಯಪ್ರವೇಶಿಸಿ ಪಕ್ಷ ದ ವಿರುದ್ಧ ರೆಬೆಲ್ ಆಗಿರುವ ಹಿರಿಯ ನಾಯಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಂಯಮ ಕಾಯ್ದುಕೊಳ್ಳುವಂತೆ ಕೋರಿದ್ದು, ಇದಕ್ಕೆ ಕೆಲ ನಾಯಕರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದು ಬಂದಿದೆ.
‘ಬಹಿರಂಗವಾಗಿ ಮಾತನಾಡಬೇಡಿ’
ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಅವರು ಹಿರಿಯ ಮುಖಂಡ ಜನಾರ್ದನ ಪೂಜಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪಕ್ಷ ರಾಷ್ಟ್ರೀಯ ಮಟ್ಟದಲ್ಲಿ ಸಂಕಷ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 2018ರಲ್ಲಿ ನಡೆಯುವ ಚುನಾವಣೆ ರಾಷ್ಟ್ರ ಮಟ್ಟದಲ್ಲಿ ಅತ್ಯಂತ ಮುಖ್ಯ. ಹೀಗಾಗಿ ಬಹಿರಂಗ ಹೇಳಿಕೆ ನೀಡದಂತೆ ಸೂಚಿಸಿದ್ದಾರಂತೆ. ಒಂದು ವೇಳೆ ರಾಜ್ಯ ನಾಯಕತ್ವದ ನಡವಳಿಕೆ ಹಾಗೂ ಸರ್ಕಾರದ ಮಟ್ಟದಲ್ಲಿ ನಡೆದಿರುವ ತಪ್ಪುಗಳ ಬಗ್ಗೆ ದೂರುಗಳಿದ್ದರೆ ಅದನ್ನು ನೇರವಾಗಿ ಸಿಎಂ ಅಥವಾ ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತನ್ನಿ. ಇದು ಸಾಧ್ಯವಾಗದಿದ್ದಲ್ಲಿ ನೇರವಾಗಿ ನಮ್ಮ ಬಳಿಗೆ ಬನ್ನಿ . ನೀವು ಹೀಗೆ ವಾಗ್ದಾಳಿ ನಡೆಸುತ್ತಾ ಹೋದರೆ ರಾಷ್ಟ್ರದಲ್ಲಿ ಪಕ್ಷಕ್ಕೆ ಮುಜುಗರ ಆಗುತ್ತದೆ ಎಂದು ತಿಳಿಸಿದ್ದಾರಂತೆ.
ಜಾಫರ್ ಗೆ ದೂರವಾಣಿ ಮೂಲಕ ಸೂಚನೆ
ಇದೇ ವೇಳೆ ಪಕ್ಷ ದ ವಿರುದ್ಧ ಹೇಳಿಕೆ ನೀಡುತ್ತಿರುವ ಮತ್ತೊಬ್ಬ ನಾಯಕರಾದ ಕೇಂದ್ರ ಮಾಜಿ ಸಚಿವ ಜಾಫರ್ ಷರೀಫ್ ಅವರ ಮನವೊಲಿಕೆಗೂ ಪ್ರಾಥಮಿಕ ಪ್ರಯತ್ನ ನಡೆಸಿದ್ದು, ಗಂಭಿರಪ್ರಯತ್ನ ನಡೆದಿಲ್ಲ. ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರು ಜಾಫರ್ ಷರೀಫ್ ಅವರೊಂದಿಗೆ ದೂರವಾಣಿ ಮೂಲಕ ಮಾತು ಕತೆ ನಡೆಸಿದ್ದಾರೆ ಎನ್ನಲಾಗಿದೆ.
ವಿಶ್ವನಾಥ್ ವಿಚಾರ ಸಿಎಂಗೆ ಬಿಟ್ಟದ್ದು
ಇನ್ನು ಮಾಜಿ ಎಚ್. ವಿಶ್ವನಾಥ್ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ರಾಹುಲ್ಗಾಂಧಿ ವಿರುದ್ಧ ಗುಡುಗಿರುವ ಹಿನ್ನೆಲೆಯಲ್ಲಿ ಹೈಕಮಾಂಡ್ನ ವರಿಷ್ಠರು ವಿಶ್ವನಾಥ್ ಅವರೊಂದಿಗೆ ಮಾತುಕತೆ ನಡೆಸಿಲ್ಲ. ಬದಲಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಆ ಹೊಣೆಯನ್ನು ವಹಿಸಲಾಗಿದೆ. ಸಿದ್ದರಾಮಯ್ಯ ಹಾಗೂ ವಿಶ್ವನಾಥ್ ಒಂದೇ ಸಮುದಾಯಕ್ಕೆ ಸೇರಿದವರಾದ ಕಾರಣ ಮನವೊಲಿಸಲಿ ಅನ್ನೋದು ಹೈಕಮಾಂಡ್ ಧೋರಣೆ. ಈ ಮಧ್ಯೆ ವಿಶ್ವನಾಥ್ಗೆ ಕೆಪಿಸಿಸಿ ನೋಟಿಸ್ ನೀಡಿದ್ದು , ಅದಕ್ಕೆ ಉತ್ತರಿಸುವಂತೆಯೂ ತಿಳಿಸಿದೆ. ಒಟ್ಟಿನಲ್ಲಿ ಪಕ್ಷದ ವಿರು ದ್ಧ ರೆಬೆಲ್ ಆಗಿರೋ ನಾಯಕರಿಗೆ ಹೈಕಮಾಂಡ್ ತಿದ್ದಿ, ಬುದ್ಧಿ ಹೇಳಿದೆ. ಇನ್ನಾದರೂ ಎಚ್ಚೆತ್ತುಕೊಳ್ಳುತ್ತಾರಾ ನೋಡಬೇಕಿದೆ.
