ಖಾಸಗಿ ಆಸ್ಪತ್ರೆಗಳಿಗೆ ಏಕ ನೀತಿಯ ದರ ರೂಪಿಸಬೇಕೆಂಬ ಅಂಶ ಕಾಯ್ದೆಯಲ್ಲಿಲ್ಲ. ಆಸ್ಪತ್ರೆ ಇರುವ ಸ್ಥಳ, ಆಸ್ಪತ್ರೆ ನೀಡುವ ಸೌಲಭ್ಯವನ್ನು ಆಧರಿಸಿ ಮತ್ತು ವೈದ್ಯರ ಅಭಿಪ್ರಾಯ ಪಡೆದು ಬೆಲೆ ನಿಗದಿಪಡಿಸಲಾಗುತ್ತದೆ.

ಬೆಂಗಳೂರು(ನ.17): ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಸಂಬಂಧಿಸಿದ ತಿದ್ದುಪಡಿ ಮಸೂದೆ ವೈದ್ಯಕೀಯ ವಲಯದಲ್ಲಿ ಸಾಕಷ್ಟು ಗೊಂದಲಗಳನ್ನು ಮೂಡಿಸಿದೆ. ರೋಗಿಗೆ ಚಿಕಿತ್ಸೆ ನೀಡುವುದರಲ್ಲಿ ಎಡವಟ್ಟಾದರೆ ವೈದ್ಯರಿಗೆ ಜೈಲು ಶಿಕ್ಷೆ ಎಂಬುದರಿಂದ ಆರಂಭಗೊಂಡು ಹಲವು ತಪ್ಪು ಮಾಹಿತಿಯನ್ನು ನೀಡಲಾಗಿದೆ. ಆದರೆ, ನ.7ಕ್ಕೆ ಸಿದ್ಧಪಡಿಸಲಾದ ಕರಡು ಮಸೂದೆಯಲ್ಲಿ ಅಂತಹ ಅಂಶಗಳೇ ಇಲ್ಲ. ಜೈಲು ಶಿಕ್ಷೆ ಪ್ರಸ್ತಾಪವನ್ನು ಸರ್ಕಾರ ಕೈಬಿಟ್ಟೇ 10 ದಿನಗಳು ಸಂದಿವೆ. ಹಾಗಾಗಿ, ಅಸಲಿಗೆ ಮಸೂದೆಯಲ್ಲಿ ಏನಿದೆ ಎಂದರೆ.

1. ತಿದ್ದುಪಡಿ ವಿಧೇಯಕದಲ್ಲಿ ವೈದ್ಯರನ್ನು ಜೈಲಿಗೆ ಕಳುಹಿಸುವ ಅಂಶವಿಲ್ಲ. ಏಕೆಂದರೆ, ತಪ್ಪು ಚಿಕಿತ್ಸೆ ನೀಡಿದ ವೈದ್ಯರ ಬಗ್ಗೆ ವಿಚಾರಣೆಯನ್ನು ನಡೆಸುವ ದೂರು ನಿವಾರಣಾ ಸಮಿತಿಗೆ ಶಿಕ್ಷೆ ವಿಧಿಸುವ ಅಧಿಕಾರವಿಲ್ಲ. ಈ ಸಮಿತಿಗೆ ಕೆಳ ಹಂತದ ನ್ಯಾಯಾಲಯದ ಅಧಿಕಾರ ಮಾತ್ರವಿದೆ.

2. ಖಾಸಗಿ ಆಸ್ಪತ್ರೆಗಳಿಗೆ ಏಕ ನೀತಿಯ ದರ ರೂಪಿಸಬೇಕೆಂಬ ಅಂಶ ಕಾಯ್ದೆಯಲ್ಲಿಲ್ಲ. ಆಸ್ಪತ್ರೆ ಇರುವ ಸ್ಥಳ, ಆಸ್ಪತ್ರೆ ನೀಡುವ ಸೌಲಭ್ಯವನ್ನು ಆಧರಿಸಿ ಮತ್ತು ವೈದ್ಯರ ಅಭಿಪ್ರಾಯ ಪಡೆದು ಬೆಲೆ ನಿಗದಿಪಡಿಸಲಾಗುತ್ತದೆ.

3. ದೂರು ನಿವಾರಣಾ ಸಮಿತಿಯಲ್ಲಿ ವೈದ್ಯರಿಗೆ ಅವಕಾಶವಿಲ್ಲ ಎಂಬುದು ತಪ್ಪು ಗ್ರಹಿಕೆ. ವಾಸ್ತವವಾಗಿ ಜಿಲ್ಲಾ ವೈದ್ಯಾಧಿಕಾರಿ ಹಾಗೂ ಒಬ್ಬ ಖಾಸಗಿ ಆಸ್ಪತ್ರೆಯ ವೈದ್ಯರು ಸಮಿತಿಯ ಸದಸ್ಯರಾಗಿರುತ್ತಾರೆ.

4. ದೂರು ನಿವಾರಣಾ ಸಮಿತಿಗೆ ಹೋದಾಗ ವಾದ ಮಂಡಿಸಲು ಖಾಸಗಿ ವೈದ್ಯರಿಗೆ ಮಾತ್ರವಲ್ಲ, ರೋಗಿಗಳಿಗೂ ವಕೀಲರನ್ನು ಇಟ್ಟುಕೊಳ್ಳುವ ಅವಕಾಶವಿಲ್ಲ.(ವಕೀಲರು ಇದ್ದರೆ ಪ್ರಕರಣ ವಿಳಂಬವಾಗುತ್ತದೆ ಎಂಬುದು ಇದಕ್ಕೆ ಕಾರಣ) ಇಬ್ಬರೂ ನೇರವಾಗಿ ತಮ್ಮ ಅಳಲನ್ನು ಸಮಿತಿ ಮುಂದೆ ತೊಡಿಕೊಳ್ಳಬಹುದು.

5. ದೂರು ನಿವಾರಣಾ ಸಮಿತಿ ಇರುವುದು ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ನಿಯಂತ್ರಿಸುವುದಕ್ಕೇ ಹೊರತು ಖಾಸಗಿ ವೈದ್ಯರನ್ನು ನೇರವಾಗಿ ನಿಯಂತ್ರಿಸುವುದಕ್ಕಲ್ಲ.