ಮೇ, 30ರ ಗುರುವಾರ ನರೇಂದ್ರ ಮೋದಿ ಎರಡನೇ ಅವಧಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಸ್ಪಷ್ಟಬಹುಮತ ಹೊಂದಿದ್ದ ಪಕ್ಷದ ಪ್ರಧಾನಿಯಾಗಿ 5 ವರ್ಷ ಪೂರೈಸಿ ಮತ್ತೊಮ್ಮೆ ಸ್ಪಷ್ಟಬಹುಮತದೊಂದಿಗೆ ಪ್ರಧಾನಿಯಾದ ಮೊದಲ ಕಾಂಗ್ರೆಸ್ಸೇತರ ವ್ಯಕ್ತಿ ಎಂಬ ಇತಿಹಾಸ ನಿರ್ಮಿಸಲಿದ್ದಾರೆ. ಸುಮಾರು 10 ದೇಶಗಳ ಪ್ರಮುಖರು ಹಾಗೂ ದೇಶದ ಗಣ್ಯಾತಿಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ರಾಷ್ಟ್ರಪತಿ ಭವನದ ಮುಂಭಾಗದ ಬಯಲಿನಲ್ಲಿ ನಡೆಯುವ ಭವ್ಯ ಸಮಾರಂಭದಲ್ಲಿ 68 ವರ್ಷದ ನರೇಂದ್ರ ಮೋದಿ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಪ್ರಮಾಣ ವಚನ ಹಾಗೂ ಗೋಪ್ಯತಾ ವಿಧಿಯನ್ನು ಬೋಧಿಸಲಿದ್ದಾರೆ. ಹೀಗಿರುವಾಗ ಪ್ರಧಾನ ಮಂತ್ರಿಯಾಗಲಿರುವ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಪಡೆಯುವವರು ಯಾರು? ರಾಜ್ಯದಿಂದ ಯಾರೆಲ್ಲಾ ರೇಸ್‌ನಲ್ಲಿದ್ದಾರೆ? ಎಂಬ ಪ್ರಶ್ನೆ ಬಹಳಷ್ಟು ಕುತೂಹಲ ಮೂಡಿಸಿದೆ.

ಸಂಭಾವ್ಯ ಸಚಿವರು

-ಅಮಿತ್‌ ಶಾ

-ರಾಜ್‌ನಾಥ್‌ಸಿಂಗ್‌

-ನಿತಿನ್‌ ಗಡ್ಕರಿ

-ಪಿಯೂಷ್‌ ಗೋಯಲ್‌

-ನಿರ್ಮಲಾ ಸೀತಾರಾಮನ್‌

-ರವಿಶಂಕರ್‌ ಪ್ರಸಾದ್‌

-ಸ್ಮೃತಿ ಇರಾನಿ

-ಪ್ರಕಾಶ್‌ ಜಾವಡೇಕರ್‌

ರಾಜ್ಯದಿಂದ ಯಾರೆಲ್ಲಾ ರೇಸಲ್ಲಿ?

ನಿರ್ಮಲಾ ಸೀತಾರಾಮನ್‌

ಪ್ರಹ್ಲಾದ್‌ ಜೋಶಿ/ಅನಂತಕುಮಾರ್‌ ಹೆಗಡೆ

ಡಾ.ಉಮೇಶ್‌ ಜಾಧವ್‌/ರಮೇಶ್‌ ಜಿಗಜಿಣಗಿ

ಸುರೇಶ್‌ ಅಂಗಡಿ/ಪಿ.ಸಿ.ಗದ್ದಿಗೌಡರ್‌/ಶಿವಕುಮಾರ್‌ ಉದಾಸಿ/ಜಿ.ಎಸ್‌.ಬಸವರಾಜು

ಶೋಭಾ ಕರಂದ್ಲಾಜೆ/ಡಿ.ವಿ.ಸದಾನಂದಗೌಡ/ಪ್ರತಾಪ್‌ ಸಿಂಹ

ಪಿ.ಸಿ.ಮೋಹನ್‌

ಅಮಿತ್‌ ಶಾ ಸಂಪುಟ ಸೇರ್ತಾರಾ? ಬಿಜೆಪಿ ಅಧ್ಯಕ್ಷರಾಗಿರ್ತಾರಾ?

ಪ್ರಧಾನಿ ನರೇಂದ್ರ ಮೋದಿ ಅವರ ಅತ್ಯಂತ ನಿಕಟವರ್ತಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಈ ಬಾರಿ ಕೇಂದ್ರ ಸಂಪುಟ ಸೇರುವ ವದಂತಿ ದಟ್ಟವಾಗಿದೆ. ಹಾಗೊಂದು ವೇಳೆ ಸಂಪುಟ ಸೇರಿದರೆ ಹಣಕಾಸು ಅಥವಾ ಗೃಹ ಖಾತೆ ಸಿಗುವ ಸಂಭವವಿದೆ ಎಂದೂ ಹೇಳಲಾಗುತ್ತಿದೆ. ಈ ಮಧ್ಯೆ, ಅಮಿತ್‌ ಶಾ ಅವರು ಸಂಪುಟ ಸೇರುವ ಸಾಧ್ಯತೆ ಕಡಿಮೆ. ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿಯೇ ಮುಂದುವರಿಯುವ ನಿರೀಕ್ಷೆ ಇದೆ ಎಂದು ಟೈಮ್ಸ್‌ ನೌ ಸುದ್ದಿವಾಹಿನಿ ವರದಿ ಮಾಡಿದೆ.

ಸುಷ್ಮಾ ಸ್ವರಾಜ್‌ಗೆ ಮಂತ್ರಿಗಿರಿ ಸಿಗುತ್ತಾ?

ಹಿಂದಿನ ಎನ್‌ಡಿಎ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಜನಪ್ರಿಯರಾಗಿದ್ದ ಹಿರಿಯ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್‌ ಅವರು ಈ ಬಾರಿಯೂ ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆಯುತ್ತಾರಾ ಎಂಬುದು ಕುತೂಹಲ ಮೂಡಿಸಿದೆ. ಅನಾರೋಗ್ಯದಿಂದ ಬಳಲುತ್ತಿರುವ ಅವರು ಈ ಬಾರಿ ಸಂಪುಟ ಸೇರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ನಂಗೆ ಮಂತ್ರಿ ಪದವಿ ಬೇಡ: ಜೇಟ್ಲಿ ಪತ್ರ

ತಾವು ಅನಾರೋಗ್ಯದಿಂದ ಬಳಲುತ್ತಿದ್ದು, ಮತ್ತೊಮ್ಮೆ ಮಂತ್ರಿಗಿರಿಯ ಹೊಣೆ ಹೊರಲು ಸಾಧ್ಯವಾಗದು ಎಂದು ಮೋದಿ ಸಂಪುಟದಲ್ಲಿ ಹಣಕಾಸು ಖಾತೆ ನಿಭಾಯಿಸಿ ಪ್ರಭಾವಿ ಸಚಿವರಾಗಿದ್ದ ಅರುಣ್‌ ಜೇಟ್ಲಿ ಪತ್ರ ಬರೆದಿದ್ದಾರೆ. ಇದಾಗುತ್ತಿದ್ದಂತೆ ಸ್ವತಃ ಮೋದಿ ಅವರು ಜೇಟ್ಲಿ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಅದರ ವಿವರ ಲಭ್ಯವಾಗಿಲ್ಲ.