Asianet Suvarna News Asianet Suvarna News

ನೆರೆ ಪರಿಹಾರ: ಸರ್ಕಾರ ಏನು ಮಾಡಬೇಕು?

ಪ್ರವಾಹ ಸಂತ್ರಸ್ತರಿಗೆ ಉದ್ಯೋಗ ಭರವಸೆ ನೀಡುವ ತಾತ್ಕಾಲಿಕ ಯೋಜನೆಯೊಂದನ್ನು ಪ್ರಾರಂಭಿಸಬೇಕು. ಪ್ರವಾಹದ ದಿನದಿಂದ ಈವರೆಗೂ ನಷ್ಟಅನುಭವಿಸಿದ ಕುಟುಂಬಕ್ಕೆ ಉದ್ಯೋಗ ನಷ್ಟದ ಹಣವಾಗಿ 25,000 ರು. ಎಕ್ಸ್‌ಗ್ರೇಷಿಯಾ ಮಾದರಿಯ ಹಣ ನೀಡಬೇಕು. 

Here are the tips for What govt should do for flood relief
Author
Bengaluru, First Published Sep 24, 2019, 4:33 PM IST

ಆಗಸ್ಟ್‌ ತಿಂಗಳ ಮೊದಲ ವಾರದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೃಷ್ಣಾ ಕೊಳ್ಳದ ಎಲ್ಲ ನದಿಗಳು, ಉಪ ನದಿಗಳು ಪ್ರವಾಹ ಪೀಡಿತವಾಗಿ ಸತತ 20 ದಿನಗಳ ಕಾಲ ತನ್ನ ರೌದ್ರಾವತಾರ ತೋರಿದ ಹಿನ್ನೆಲೆಯಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಕೊಪ್ಪಳ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜನಜೀವನ ಎರಡು ದಶಕದಷ್ಟುಹಿಂದಕ್ಕೆ ಹೋಗಿದೆ.

ಆಗಸ್ಟ್‌ 1ರಿಂದಲೇ ಮಹಾರಾಷ್ಟ್ರ ಮತ್ತು ಮುಂಬೈ ಕರ್ನಾಟಕದ ಜಿಲ್ಲೆಗಳಲ್ಲಿ ಸುರಿದ ಅಬ್ಬರದ ಮಳೆಯಿಂದ ಕೃಷ್ಣಾ ಕೊಳ್ಳದ ಅಪಾರ ಪ್ರಮಾಣದ ನೀರು ಹಿಪ್ಪರಗಿ, ಆಲಮಟ್ಟಿ, ನಾರಾಯಣಪುರ, ಹಿಡಕಲ್‌ ಜಲಾಶಯಗಳನ್ನು ತುಂಬಿ ಹೊರಚೆಲ್ಲುವಂತೆ ಮಾಡಿತ್ತು. ಕೃಷ್ಣಾ ಕೊಳ್ಳದ ಮುಖ್ಯ ನದಿ ಕೃಷ್ಣಾ ಅಷ್ಟೇ ಅಲ್ಲದೇ ತುಂಗಭದ್ರಾ, ಮಲಪ್ರಭಾ, ಘಟಪ್ರಭಾ, ದೂದ್‌ಗಂಗಾ, ವೇದಗಂಗಾ, ಮಾರ್ಕಂಡೇಯ, ಹಿರಣ್ಯಕೇಶಿ ನದಿಗಳೂ ಉಕ್ಕಿ ಹರಿದವು.

ರಾಜ್ಯದ 21 ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ , Yellow Alert!

22 ಜಿಲ್ಲೆಗಳ 103 ತಾಲೂಕುಗಳಲ್ಲಿ ಅಂದಾಜು 2 ಕೋಟಿಯಷ್ಟುಜನರು ಪ್ರವಾಹ ಪೀಡಿತರಾದರು. ಭೂಕುಸಿತ, ರಸ್ತೆ ಸಂಚಾರ ಸ್ಥಗಿತ, ಸೇತುವೆಗಳ ಕುಸಿತ ಪ್ರವಾಹ ಪ್ರದೇಶಗಳಲ್ಲಿನ ಜನರ ಬದುಕನ್ನು ಮತ್ತಷ್ಟುನಿಕೃಷ್ಟಗೊಳಿಸಿದವು. ಎಲ್ಲ ನದಿಗಳು ಕಡಲಿನಂತಾಗಿ ಜನರ ಜೀವನವೇ ಕಕ್ಕಾಬಿಕ್ಕಿಯಾಗಿ ಹೋಗಿದೆ.

10 ದಿನಗಳ ಕಾಲವಂತೂ ತೀವ್ರವಾಗಿದ್ದ ಪ್ರವಾಹದ ವೇಳೆ ಉತ್ತರ ಕರ್ನಾಟಕದ 13 ಜಲಾಶಯಗಳಿಂದ ಐತಿಹಾಸಿಕ ದಾಖಲೆ ಎನ್ನುವಂತೆ ಒಟ್ಟು 1500 ಟಿಎಂಸಿ ನೀರು ಹರಿದು ನದಿ ಪಾತ್ರದ ಜೀವನವೇ ಛಿದ್ರವಾಗಿ ಹೋಯಿತು.

ಕೃಷಿಗೆ ಯೋಗ್ಯವಿಲ್ಲದಂತಾದ ಭೂಮಿ

1 ಲಕ್ಷ ಎಕರೆಗೂ ಅಧಿಕ ಫಲವತ್ತಾದ ಭೂಮಿ ಭೂಕೊರತಕ್ಕೆ ಒಳಗಾಗಿ ಕೃಷಿಗೆ ಯೋಗ್ಯವಿಲ್ಲದಂತಾಗಿದೆ. 2 ಲಕ್ಷ ಮನೆಗಳಿಗೆ ಭಾರೀ ಹಾನಿಯಾಗಿದೆ. 3 ಸಾವಿರ ಗ್ರಾಮಗಳು ಭಾಗಶಃ ಮುಳುಗಡೆಯಾಗಿದ್ದವು. 1 ಸಾವಿರಕ್ಕೂ ಹೆಚ್ಚಿನ ಗ್ರಾಮಗಳನ್ನು ಪುನರ್‌ ನಿರ್ಮಾಣ ಮಾಡಬೇಕಿದೆ. 100 ಜೀವ ಹಾನಿಯಾಗಿದೆ.

ಕೃಷಿಕರ ಹೊಲಗಳು ಮಾತ್ರವಲ್ಲ, ಅವರು ಬಳಕೆ ಮಾಡುತ್ತಿದ್ದ ಕೃಷಿ ಉಪಕರಣಗಳು, ಗೃಹ ವಸ್ತುಗಳು, ವಿದ್ಯಾರ್ಥಿಗಳ ಪಠ್ಯಪುಸ್ತಕಗಳು, ಮೇವು, ಚಕ್ಕಡಿ, ಟ್ರ್ಯಾಕ್ಟರ್‌, ಸಾರ್ವಜನಿಕ ಆಸ್ತಿಗಳಾದ ಶಾಲಾ ಕಟ್ಟಡ, ರಸ್ತೆಗಳು, ಸೇತುವೆಗಳು ಸರ್ಕಾರಿ ಸಂಘ-ಸಂಸ್ಥೆಗಳ ಆಸ್ತಿಗಳಿಗೆ ಭಾರಿ ಪ್ರಮಾಣದ ಹಾನಿಯಾಗಿದೆ.

ಅಚ್ಚರಿಯೆಂದರೆ, ಭಾರಿ ಪ್ರವಾಹಕ್ಕೆ ನಷ್ಟಅನುಭವಿಸಿದ ಸಂತ್ರಸ್ತರಿಗೆ ಇದುವರೆಗೂ ಪರಿಹಾರದ ಹಣ ಬಂದಿಲ್ಲ. ಕೇಂದ್ರ ಸರ್ಕಾರ ಕಿಂಚಿತ್ತು ಹಣ ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ಗಂಭೀರ ಪ್ರಯತ್ನ ಮಾಡುತ್ತಿದೆ ಎಂದು ಹೇಳುವ ಸಂದರ್ಭದಲ್ಲಿ ಪರಿಹಾರ ಬರುವ ಮೊದಲೇ ಮತ್ತೊಮ್ಮೆ ಪ್ರವಾಹ (ಸೆಪ್ಟೆಂಬರ್‌ ಮೊದಲ ವಾರದಲ್ಲಿ) ಬಂದು ಹೋಯಿತು. ಮೊದಲೇ ಬೀದಿಗೆ ಬಂದಿದ್ದ ಬದುಕಿನ ಮೇಲೆ ಮತ್ತೊಂದು ಬರೆ ಬಿದ್ದಿತು.

ನೆರೆ ಪರಿಹಾರ ಕಾರ್ಯ ಹೇಗಿರಬೇಕು?

ಗ್ರಾಮಗಳ ಪುನರ್‌ ನಿರ್ಮಾಣ ಮತ್ತು ಪುನರ್‌ವಸತಿಗಾಗಿ ಸದ್ಯ ಇರುವ ಪದ್ಧತಿ ವಿಪರೀತ ವಿಳಂಬಕ್ಕೆ ಕಾರಣವಾಗುತ್ತಿದ್ದು, ಪುನರ್‌ವಸತಿ ಮತ್ತು ಪುನರ್‌ ನಿರ್ಮಾಣಕ್ಕಾಗಿ ಒಂದು ಉನ್ನತ ಮಟ್ಟದ ಪ್ರಾಧಿಕಾರ ತಕ್ಷಣ ರಚನೆ ಮಾಡಬೇಕು. ಪ್ರವಾಹ ಹಾಗೂ ಮಳೆಯಿಂದಾಗಿ ಭಾರಿ ಹಾನಿ, ಜನರ ಬದುಕಿಗೆ ಸಂಕಷ್ಟತಂದ ಈ ಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ ಅದರಡಿ ನೆರವು ನೀಡಬೇಕು.

ಪ್ರವಾಹಪೀಡಿತ ಜಿಲ್ಲೆಗಳಿಗೆ ಅಪರ ಮುಖ್ಯ ಕಾರ್ಯದರ್ಶಿ ಮಟ್ಟದ ಅಧಿಕಾರಿಯನ್ನು ಉಸ್ತುವಾರಿಯನ್ನಾಗಿ ನೇಮಿಸಿ ಕಾಲಮಿತಿಗೊಳಪಟ್ಟು ಆ ಅಧಿಕಾರಿಗಳು ಕೆಲಸ ಮಾಡುವಂತೆ ಸರ್ಕಾರ ಎಚ್ಚರವಹಿಸಬೇಕು. ಈ ಹಿಂದೆ 2009ರಲ್ಲಿ ಇದೇ ರೀತಿಯ ಪ್ರವಾಹ ಉಂಟಾದ ವೇಳೆ ಅಂದಿನ ಪ್ರಧಾನಿ ಮನಮೋಹನಸಿಂಗ್‌ ತಕ್ಷಣವೇ .2 ಸಾವಿರ ಕೋಟಿ ಅನುದಾನ ನೀಡಿದ್ದರು. ರಾಜ್ಯ ಸರ್ಕಾರ ತಕ್ಷಣವೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಪರಿಹಾರ ಪಡೆಯಬೇಕು.

ಪ್ರವಾಹಪೀಡಿತ ಪ್ರದೇಶಗಳ ಎಲ್ಲ ಗ್ರಾಮಗಳಲ್ಲಿ ಮುಂದಿನ ಒಂದು ವರ್ಷದವರೆಗೆ ತಾತ್ಕಾಲಿಕವಾಗಿ ಇಂದಿರಾ ಕ್ಯಾಂಟೀನ್‌ ಮಾದರಿಯಲ್ಲಿ ರಿಯಾಯ್ತಿ ದರದಲ್ಲಿ ಆಹಾರ ಪೂರೈಕೆ ಮಾಡಲು ಕ್ಯಾಂಟೀನ್‌ಗಳನ್ನು ತಕ್ಷಣ ಪ್ರಾರಂಭಿಸಬೇಕು. ಭೂಕೊರೆತ ಉಂಟಾಗಿರುವ ಭೂಮಿಯನ್ನು ಮರಳಿ ಕೃಷಿ ಯೋಗ್ಯ ಮಾಡಲು ಕ್ರಮ ಕೈಗೊಳ್ಳಬೇಕಾದ ತುರ್ತು ಅಗತ್ಯವಿದೆ.

ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಮತ್ತು ಇನ್ನಿತರ ಯೋಜನೆಗಳ ಮೂಲಕ ತುರ್ತು ಕಾಮಗಾರಿ ಕೈಗೊಂಡು ಭೂಕೊರೆತ ಸರಿಪಡಿಸಿ ರೈತರಿಗೆ ತಲಾ 4ರಿಂದ 5 ಎಕರೆ ಭೂಮಿಯನ್ನು ತಕ್ಷಣ ಕೃಷಿಯೋಗ್ಯವಾಗಿಸಿ ಕೊಡಬೇಕು.

ದರ್ಪಣ ತೀರ್ಥದಲ್ಲಿ ಪ್ರವಾಹ: ಕುಕ್ಕೆ ಸುಬ್ರಮಣ್ಯ ದೇವಳದೊಳಗೆ ನೀರು

ಸವಳು- ಜವಳಿನಿಂದಾಗಿ ಸಾಕಷ್ಟುಭೂಮಿ ಹಾನಿಗೀಡಾಗುವುದರಿಂದ ಈ ಭೂಮಿಯನ್ನು ಮರಳಿ ಕೃಷಿಯೋಗ್ಯಗೊಳಿಸಲು ಶಾಶ್ವತವಾದ ಅಗತ್ಯ ಕ್ರಮಗಳಿಗೆ ತಕ್ಷಣದಿಂದಲೇ ಕಾರ್ಯಕ್ರಮ ರೂಪಿಸಬೇಕು. ಪ್ರವಾಹಪೀಡಿತ ಪ್ರದೇಶಗಳಿಗೆ ನೆರವು ನೀಡುವ ಸಂದರ್ಭದಲ್ಲಿ ಸೂಕ್ತ ಮಾನದಂಡಗಳು ಇರಬೇಕು ಮತ್ತು ನೆರವಿನ ಹಂಚಿಕೆ ಸಮಾನವಾಗಿ ಇರುವಂತೆ ಸರ್ಕಾರ ಗಮನ ನೀಡಬೇಕು.

ಪ್ರವಾಹಪೀಡಿತ ಪ್ರದೇಶಗಳ ಜನರಿಗೆ ವಿಶೇಷವಾಗಿ ಸಂತ್ರಸ್ತರಿಗೆ ಉದ್ಯೋಗ ಭರವಸೆ ನೀಡುವ ತಾತ್ಕಾಲಿಕ ಯೋಜನೆಯೊಂದನ್ನು ಪ್ರಾರಂಭಿಸಬೇಕು. ಪ್ರವಾಹದ ದಿನದಿಂದಲೂ ಈವರೆಗೂ ನಷ್ಟಅನುಭವಿಸಿದ ಕುಟುಂಬಕ್ಕೆ ಉದ್ಯೋಗ ನಷ್ಟದ ಹಣವಾಗಿ 25 ಸಾವಿರ ಎಕ್ಸ್‌ಗ್ರೇಷಿಯಾ ಮಾದರಿಯ ಹಣ ನೀಡಬೇಕು.

ನೆರೆಪೀಡಿತ ಪ್ರದೇಶಗಳ ಪಾಲಕರು ತಮ್ಮ ಮಕ್ಕಳ ಶುಲ್ಕ ಪಾವತಿ ಮಾಡಲು ಸಾಧ್ಯವಿಲ್ಲದಂತಹ ಸ್ಥಿತಿ ಇದ್ದು, ಶಾಲಾ ಕಾಲೇಜು, ವಿಶ್ವವಿದ್ಯಾಲಯದ ಶುಲ್ಕಗಳನ್ನು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸಂಗ್ರಹಿಸುವುದಕ್ಕೆ ವಿಶೇಷ ಆದ್ಯತೆಯ ಮೇಲೆ ವಿನಾಯಿತಿ ನೀಡಬೇಕು. ಈಗಾಗಲೇ ವಿವಿಧ ಇಲಾಖೆಗಳ ನೇಮಕಾತಿ ಪ್ರಕ್ರಿಯೆಗಳಿಗೆ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕಗಳನ್ನು ಡಿಸೆಂಬರ್‌ವರೆಗೆ ಮುಂದೂಡಬೇಕು.

ಪ್ರವಾಹದಲ್ಲಿ ಹಲವಾರು ಮಹತ್ವದ ಶೈಕ್ಷಣಿಕ ದಾಖಲೆಗಳು ಕೊಚ್ಚಿಹೋಗಿದ್ದು, ಅವುಗಳನ್ನು ವಿದ್ಯಾರ್ಥಿಗಳಿಗೆ ಮರಳಿ ಒದಗಿಸಲು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಮಂಡಳಿಗಳು ಹಾಗೂ ಎಲ್ಲ ವಿವಿಗಳು ವಿಶೇಷ ಗಮನ ನೀಡಬೇಕು. ಎಲ್ಲ ವಿವಿಗಳಲ್ಲಿಯೂ ಇದಕ್ಕಾಗಿಯೇ ವಿಶೇಷ ಕೌಂಟರ್‌ ತೆರೆಯಬೇಕು. ಈ ದಾಖಲೆಗಳ ನಷ್ಟಅಥವಾ ಕಳೆದುಹೋಗಿರುವ ಬಗ್ಗೆ ಪೊಲೀಸ್‌ ದೂರು ದಾಖಲು ಮಾಡಲು ಬೆಂಗಳೂರಿನಲ್ಲಿರುವ ಇ-ಲಾಸ್ಟ್‌ ಮಾದರಿಯಲ್ಲಿ ದೂರು ಸ್ವೀಕರಿಸಲು ಪ್ರತ್ಯೇಕ ಪೊಲೀಸ್‌ ವೆಬ್‌ಸೈಟ್‌ ಪ್ರಾರಂಭಿಸಬೇಕು.

ಈಗಾಗಲೇ ಜೂನ್‌ ತಿಂಗಳಿನಲ್ಲಿ ಪ್ರಾರಂಭವಾದ ಶೈಕ್ಷಣಿಕ ವರ್ಷ ಜೂನ್‌, ಜುಲೈ, ಆಗಸ್ಟ್‌ ತಿಂಗಳಲ್ಲಿ ಅನೇಕ ಅಡ್ಡಿ ಆತಂಕಗಳನ್ನು ಎದುರಿಸಿದೆ. ತಿಂಗಳುಗಟ್ಟಲೆ ಶಾಲಾ ಕಾಲೇಜುಗಳಿಗೆ ರಜೆ ನೀಡಿ ಬೋಧನಾ ಚಟುವಟಿಕೆ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷವನ್ನು ಜೂನ್‌ ತಿಂಗಳಿಂದ ಮಾಚ್‌ರ್‍ವರೆಗಿನ ಬದಲಾಗಿ ಸೆಪ್ಟೆಂಬರ್‌ನಿಂದ ಮೇ ತಿಂಗಳವರೆಗೆ ಎಂದು ಘೋಷಣೆ ಮಾಡಬೇಕು. ಇದಕ್ಕಾಗಿ ಸೂಕ್ತ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕು.

ಪ್ರವಾಹ ಪೀಡಿತ ಪ್ರದೇಶದ ಮಕ್ಕಳ ಶಿಕ್ಷಣ ಶುಲ್ಕಕ್ಕೆ ವಿನಾಯಿತಿ ನೀಡಬೇಕು. ಪ್ರವಾಹದಲ್ಲಿ ಕೊಚ್ಚಿಹೋದ ಪುಸ್ತಕಗಳ ಮರುಮುದ್ರಣ ಮತ್ತು ವಿತರಣೆಗೆ ಸೂಕ್ತವಾದ ವ್ಯವಸ್ಥೆ ರೂಪಿಸಬೇಕು. ಜಿಲ್ಲಾವಾರು ಪುಸ್ತಕಗಳ ಹಂಚಿಕೆಗೆ ನೋಡಲ್‌ ಏಜೆನ್ಸಿ ರಚನೆ ಮಾಡಬೇಕು. ಪ್ರಸಕ್ತ ವರ್ಷ ಪ್ರವಾಹಪೀಡಿತ ಗ್ರಾಮಗಳ ಕೃಷಿಕನಿಗೆ ಆದಾಯ ನಷ್ಟವಾಗಿರುವುದರಿಂದ ಆದಾಯಕ್ಕೆ ಪರ್ಯಾಯ ಮೂಲಗಳನ್ನು ಒದಗಿಸಬೇಕು. ಬಿದ್ದು ಹೋಗಿರುವ ಮನೆಗಳ ಪುನರ್‌ನಿರ್ಮಾಣಕ್ಕೆ ಕಾಲಮಿತಿ ಕಾರ್ಯಕ್ರಮ ರೂಪಿಸಬೇಕು.

ಪ್ರವಾಹಪೀಡಿತ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗೆ ಪ್ರಸಕ್ತ ಸಾಲಿಗೆ ಸೀಮಿತವಾಗಿ ಜಿಎಸ್‌ಟಿಯಿಂದ ವಿನಾಯಿತಿ ನೀಡಬೇಕು. ತೋಟಗಾರಿಕೆ ಮಾಡುವವರಿಗೆ ನಷ್ಟದ ಹಿನ್ನೆಲೆಯಲ್ಲಿ ವಿಶೇಷ ರಕ್ಷಣೆ ಹಾಗೂ ಕಾರ್ಯಕ್ರಮ ರೂಪಿಸಬೇಕು. ಮುಳುಗಡೆಯಾದ ಪ್ರದೇಶಗಳ ಗುಡಿ, ಮಸೀದಿ, ಚಚ್‌ರ್‍ಗಳ ಪುನರ್‌ನಿರ್ಮಾಣಕ್ಕೆ ಸಂಬಂಧಿತ ಇಲಾಖೆಗಳ ಮೂಲಕ ಅವುಗಳ ಪುನರ್‌ ನಿರ್ಮಾಣ ಅಥವಾ ದುರಸ್ತಿ ಕಾರ್ಯಕ್ರಮಕ್ಕೆ ವಿಶೇಷ ಗಮನ ನೀಡಬೇಕು.

ಮುಖ್ಯವಾಗಿ ಶಾಶ್ವತ ಮನೆಗಳು ನಿರ್ಮಾಣವಾಗುವ ಪೂರ್ವದಲ್ಲಿಯೇ ಸಮರೋಪಾದಿಯಲ್ಲಿ ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಾಣ ಮಾಡಬೇಕಿದೆ. ಮನೆ ಹಾನಿಯಾಗಲಿ, ಬೆಳೆ ಹಾನಿಯಾಗಲಿ, ಮೃತರ ಕುಟುಂಬಗಳಾಗಲಿ, ಗಾಯಗೊಂಡವರಾಗಲಿ, ಎಲ್ಲ ಪರಿಹಾರಗಳು ತೀವ್ರವಾಗಿ ಬಾಧಿತರಿಗೆ ತಲುಪುವಂತಾಗಬೇಕು.

ಯಾವ ಸರ್ಕಾರ ಬಡವರ ಪರವಾಗಿ, ಹಸಿದವರ ಪರವಾಗಿ ತಕ್ಷಣ ನೆರವಿಗೆ ಬರಬೇಕಾಗಿತ್ತೋ ಅದು ಮಾತ್ರ ಕಳೆದ ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳಲ್ಲಿ ಉಂಟಾದ ಪ್ರವಾಹದ ವೇಳೆಯಲ್ಲಿ ಬರಲಿಲ್ಲ. ಇಡೀ ಸರ್ಕಾರಿ ಯಂತ್ರ, ಸರ್ಕಾರದ ಸಚಿವಾಲಯ ಸಂಪೂರ್ಣವಾಗಿ ಪ್ರಾಮಾಣಿಕವಾಗಿ ಪ್ರವಾಹಪೀಡಿತರ ನೆರವಿಗೆ ಧಾವಿಸಿ ಬರಬೇಕಾಗಿತ್ತು. ದುರದೃಷ್ಟವಶಾತ್‌ ಹಾಗಾಗಲಿಲ್ಲ. ನಡೆದಿರುವ ಅಲ್ಪ ಪ್ರಯತ್ನಗಳು ಕೂಡಾ ಯಶಸ್ಸು ಕಂಡಿಲ್ಲ ಎನ್ನುವುದು ತೀವ್ರ ನೋವಿನ ಸಂಗತಿ.

- ಎಚ್‌ ಕೆ ಪಾಟೀಲ್‌, ಕಾಂಗ್ರೆಸ್‌ ನಾಯಕ

Follow Us:
Download App:
  • android
  • ios