Asianet Suvarna News Asianet Suvarna News

ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪನೆಗೆ ನೆರವು

ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸುವ ಸಂಬಂಧ ಕೇಂದ್ರ ಮುಂಗಡ ಪತ್ರ ಮಂಡನೆಗೂ ಮುನ್ನ ರಾಜ್ಯದಿಂದ ನಿಯೋಗ ಬರುವಂತೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ತಿಳಿಸಿದರು.

Help To Brahmin Devolopment Board Ananthkumar

ಬೆಂಗಳೂರು : ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸುವ ಸಂಬಂಧ ಕೇಂದ್ರ ಮುಂಗಡ ಪತ್ರ ಮಂಡನೆಗೂ ಮುನ್ನ ರಾಜ್ಯದಿಂದ ನಿಯೋಗ ಬರುವಂತೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ತಿಳಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಎರಡು ದಿನಗಳ ಬೆಂಗಳೂರು ಮಹಾನಗರ ವಿಪ್ರರ ಬೃಹತ್ ಸಮಾವೇಶ ಸಮಾರೋಪದಲ್ಲಿ ವಿಪ್ರ ಕಿರಣ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಅವರು, ದೇಶದ ವಿವಿಧ ಏಳು ರಾಜ್ಯಗಳಲ್ಲಿರುವ ಮಂಡಳಿಯಂತೆ ರಾಜ್ಯದಲ್ಲಿಯೂ ಬ್ರಾಹ್ಮಣ ಅಭಿವೃದ್ಧಿ ನಿಗಮ-ಮಂಡಳಿ ಸ್ಥಾಪಿಸಲು ಸಂಪೂರ್ಣ ಸಹಕಾರ ನೀಡಲಾಗುವುದು. ಈ ನಿಗಮ- ಮಂಡಳಿ ಏಳು ರಾಜ್ಯಗಳಲ್ಲಿ ಮಾತ್ರವಲ್ಲ, ದೇಶದ ಎಲ್ಲ ರಾಜ್ಯಗಳಲ್ಲಿ ಸ್ಥಾಪಿತವಾಗಬೇಕಿದೆ. ಈ ಕುರಿತು ಕೇಂದ್ರಕ್ಕೆ ನಿಯೋಗ ಬಂದ ಸಂದರ್ಭದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು.

ಬ್ರಾಹ್ಮಣ ಸಮಾಜದಲ್ಲಿಯೂ ಆರ್ಥಿಕವಾಗಿ ಹಿಂದುಳಿದವರಿದ್ದಾರೆ. ಅವರಿಗೂ ಸಾಮಾಜಿಕ ನ್ಯಾಯ ಸಿಗಬೇಕಿದೆ. ಸಮಾಜದ ವಿಚಾರದಲ್ಲಿ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಸರಿಯಿಲ್ಲ. ಹಿಂದೂ ಧರ್ಮದ ಆಚಾರ-ವಿಚಾರಗಳನ್ನು ಮೂಢನಂಬಿಕೆ ಎನ್ನುವವರು, ಬೇರೆ ಧರ್ಮದಲ್ಲಿರುವ ಮೂಢನಂಬಿಕೆ ಗಳನ್ನು ಸಹ ತಿಳಿಯಬೇಕು ಎಂದು ರಾಜ್ಯ ಸರ್ಕಾರಕ್ಕೆಪರೋಕ್ಷವಾಗಿ ಟಾಂಗ್ ನೀಡಿದರು.

ವಿಪ್ರ ಸಮಾಜಕ್ಕೆ ಅವಮಾನ: ಆಚಾರ್ಯತ್ರಯರಲ್ಲೊಬ್ಬರಾದ ರಾಮಾನುಜಾಚಾರ್ಯರ ಸಹಸ್ರಮಾ ನೋತ್ಸವ ಕಾರ್ಯಕ್ರಮ ಆಚರಿಸಲು ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿದ್ದು ಇಡೀ ವಿಪ್ರ ಸಮಾಜಕ್ಕೆ ಮಾಡಿದ ಅವಮಾನ ಎಂದು ಯದುಗಿರಿ ಯತಿರಾಜ ನಾರಾಯಣ ಜೀಯರ್ ತೀವ್ರ ಬೇಸರ ವ್ಯಕ್ತಪಡಿಸಿದರು.

ಸಮಾರೋಪ ಸಮಾರಂಭಕ್ಕೂ ಮುನ್ನ ನಡೆದ ಸಾಧಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಾಮಾನುಜರು 950ನೇ ಶತಮಾನದಲ್ಲೇ ಎಲ್ಲ ಜಾತಿ ಜನರನ್ನು ದೇವಸ್ಥಾನಕ್ಕೆ ಕರೆದೊಯ್ದು ಸಮಾನತೆ, ಜಾತ್ಯತೀತ ತತ್ವ ಸಾರಿದರು. ಇಂದು ಪ್ರತಿಪಾದಿಸುತ್ತಿರುವ ಜಾತ್ಯತೀತತೆ, ಶಾಂತಿ, ಸೌಹಾರ್ದತೆ ಬಗ್ಗೆ ಅಂದೇ ಅವರು ಚಳವಳಿ ನಡೆಸಿದ್ದರು. ಸತತ 32 ವರ್ಷಗಳ ಕಾಲ ಸುತ್ತಾಟ ನಡೆಸಿ ಭಕ್ತರನ್ನು ಸೇರಿಸಿ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಿದವರು. ಸರ್ಕಾರಕ್ಕೆ ನಿಜವಾಗಲೂ ವಿಪ್ರ ಸಮಾಜದ ಬಗ್ಗೆ ಗೌರವ ಇದ್ದಿದ್ದರೆ ರಾಜಾನುಜರ ಸಹಸ್ರಮಾನೋತ್ಸವ ಆಚರಿಸಬೇಕಿತ್ತು.  ಈ ವಿಚಾರವಾಗಿ ಮುಖ್ಯಮಂತ್ರಿಗಳ ಬಳಿಯೂ ಮನವಿ ಒಯ್ದರು ಪ್ರಯೋಜನವಾಗಲಿಲ್ಲ. ಇದು ವಿಪ್ರ ಸಮಾಜಕ್ಕೆ ಮಾಡಿದ ಅವಮಾನ ಎಂದರು.  

ವೇದ ವಿದ್ವಾಂಸ ವಿದ್ವಾನ್ ಕೆ.ಜಿ.ಸುಬ್ರಾಯಶರ್ಮಾ ಮತ್ತಿತರರ ಸಾಧಕರನ್ನು ಶ್ರೀಗಳು ಸನ್ಮಾನಿಸಿದರು. ಹರಿಹರಪುರದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಸಮಾರೋಪದ ಸಾನ್ನಿಧ್ಯ ವಹಿಸಿದ್ದರು. ಮಾಜಿ ಮೇಯರ್ ಬಿ.ಎಸ್. ಸತ್ಯನಾರಾಯಣ, ಪಾಲಿಕೆ ಸದಸ್ಯರಾದ ಎಚ್.ಸಿ. ನಾಗರತ್ನ ರಾಮಮೂರ್ತಿ, ನಂದಿನಿ ವಿಠ್ಠಲ, ಶಾಸಕರಾದ ದಿನೇಶ್ ಗುಂಡೂರಾವ್, ಡಾ. ಅಶ್ವತ್ಥ ನಾರಾಯಣ, ರವಿಸುಬ್ರಹ್ಮಣ್ಯ, ಕೆ.ಬಿ. ಪ್ರಸನ್ನಕುಮಾರ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮಹಾಸಭಾ ಅಧ್ಯಕ್ಷ ಕೆ.ಎನ್. ವೆಂಕಟನಾರಾಯಣ ಮತ್ತಿತರರು ಪಾಲ್ಗೊಂಡಿದ್ದರು.

Follow Us:
Download App:
  • android
  • ios