ವರದಿ: ಜಿ. ಮಹಾಂತೇಶ್‌, ಸುವರ್ಣನ್ಯೂಸ್

ಬೆಂಗಳೂರು(ನ. 30): ಮುಖ್ಯಮಂತ್ರಿ, ರಾಜ್ಯಪಾಲರು ಸೇರಿದಂತೆ ಗಣ್ಯಾತಿ​ಗಣ್ಯರ ಪ್ರವಾಸಕ್ಕಾಗಿ ಖಾಸಗಿ ಏಜೆನ್ಸಿ​ಗಳು ಒದಗಿಸುತ್ತಿರುವ ಹೆಲಿ​ಕಾಪ್ಟರ್‌ಗಳು ಸುರಕ್ಷಿತ​ವಲ್ಲ ಎಂಬ ಆತಂಕ​ಕಾರಿ ಮಾಹಿತಿ ಇದೇ ಮೊದಲ ಬಾರಿಗೆ ಹೊರ ಬಿದ್ದಿದೆ. ಅನುಭವ ಇಲ್ಲದ ಪೈಲಟ್‌ಗಳು ಚಲಾ​ಯಿ​ಸುತ್ತಿರುವ ಹೆಲಿಕಾಪ್ಟರ್‌ನಲ್ಲೇ ಗಣ್ಯಾತಿ​ಗಣ್ಯರು ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಳ್ಳುತ್ತಿ​ರು​ವುದರಿಂದ ಅವರ ಸುರಕ್ಷತೆ ಬಗೆಗೆ ಹಲವು ಅನುಮಾನಗಳು ವ್ಯಕ್ತವಾಗಿವೆ. 

ಅನನುಭವಿ ಪೈಲಟ್‌'ಗಳು ಹೆಲಿಕಾಪ್ಟರ್‌'ನ್ನು ಚಲಾಯಿಸಿರುವ ಬಗ್ಗೆ ರಾಜ್ಯ ಗುಪ್ತ​ಚರ ದಳದ ಹೆಚ್ಚುವರಿ ನಿರ್ದೇಶಕ ಎ.ಎಂ.ಪ್ರಸಾದ್‌ ಲೋಕೋಪ​ಯೋಗಿ ಇಲಾಖೆಯ ಪ್ರ. ಕಾರ್ಯದರ್ಶಿಗೆ ಕಳೆದ ಜು. 20 ರಂದು ಬರೆದ ‘ಗೌಪ್ಯ' ಪತ್ರದಲ್ಲಿ ಎಚ್ಚರಿಸಿದ್ದಾರೆ. ಎರಡು ತಿಂಗಳ ನಂತರ ಈ ಪತ್ರ ಬರೆದಿದ್ದಾರೆ. 

ನಾಗರಿಕ ವಿಮಾನಯಾನ ವಿಭಾಗ ರೂಪಿ​ಸಿ​ರುವ ಮಾರ್ಗಸೂಚಿಗಳನ್ನು ಕಡ್ಡಾ​ಯ​ವಾಗಿ ಪಾಲಿಸಲು ತಕ್ಷಣ ಕ್ರಮ ಕೈಗೊಳ್ಳ​ಬೇಕು' ಎಂದು ಪತ್ರದಲ್ಲಿ ಸೂಚಿ​ಸಿದ್ದಾರೆ. ಈ ಪತ್ರದ ಪ್ರತಿ 'ಸುವರ್ಣನ್ಯೂಸ್' ಮತ್ತು 'ಕನ್ನಡಪ್ರಭ'ಕ್ಕೆ ಲಭ್ಯವಾಗಿದೆ. ಮುಖ್ಯಮಂತ್ರಿ, ರಾಜ್ಯಪಾಲರು ಸೇರಿ​ದಂತೆ ವಿಐಪಿ, ವಿವಿಐಪಿಗಳಿಗೆ ಒದಗಿಸುವ ಹೆಲಿಕಾಪ್ಟರ್‌'ನ್ನು ಚಲಾಯಿಸುವ ಪೈಲಟ್‌ಗಳಿಗೆ ನಾಗರಿಕ ವಿಮಾನಯಾನ ನಿರ್ದೇಶ​ನಾಲಯ ಅರ್ಹತೆ ಮತ್ತು ಅನುಭವವನ್ನು ನಿಗದಿಪಡಿಸಿದೆ. ಹೆಲಿಕಾಪ್ಟರ್‌ನ್ನು ಇಂತಿಷ್ಟುಗಂಟೆಗಳವರೆಗೆ ಚಲಾಯಿಸಿ ಅನುಭವ ಹೊಂದಿರುವ ಪೈಲಟ್‌ಗಳನ್ನೇ ವಿಐಪಿ ಮತ್ತು ವಿವಿಐಪಿಗಳಿಗೆ ನೇಮಿಸಬೇಕು ಎಂದು ಸೂಚಿಸಿತ್ತು ಎಂದು ಸರ್ಕಾರದ ವಿಶ್ವಸನೀಯ ಮೂಲಗಳು ತಿಳಿಸಿವೆ. 

‘2016ರ ಮೇ 6 ಮತ್ತು ಜೂನ್‌ 27ರಂದು ಚಿತ್ರದುರ್ಗ ಮತ್ತು ಮೈಸೂರು ಪ್ರವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಲಿಕಾಪ್ಟರ್‌ನ್ನು (ಇಸಿ 135 ಮತ್ತು ಫಿನಾಮ್‌ 100 ವಿಟಿ ಎವಿಎಸ್‌) ಬಳಸಿ​ದ್ದರು. ಈ ಎರಡೂ ದಿನದಂದು ಮುಖ್ಯ​ಮಂತ್ರಿ​ಗಳಿದ್ದ ಹೆಲಿಕಾಪ್ಟರ್‌ನ್ನು ಅನನುಭವಿ ಪೈಲಟ್‌ಗಳು ಎಂದು ಹೇಳಲಾಗಿರುವ ಅರ್ಜುನ್‌, ಶಿಲ್ಪಿ ಬಿಸ್ನಾಯ್‌, ದಿಲೀಪ್‌ ಗ್ರೇವಾಲ್‌, ಸಂಜಯಕುಮಾರ್‌ ಎಂಬು​ವರು ಚಲಾಯಿಸಿದ್ದರು. ಡಿಜಿಸಿಎ ನಿಗದಿಪಡಿಸಿದ್ದ ಅನುಭವ ಮತ್ತು ಅರ್ಹತೆ ಈ ಪೈಲಟ್‌ಗಳಿಗೆ ಇರಲಿಲ್ಲ.
ಆದರೂ ಅವರು ಹೆಲಿಕಾಪ್ಟರ್‌ನ್ನು ಚಲಾಯಿಸಿದ್ದರು' ಎಂದು ಗೌಪ್ಯ ಪತ್ರದಲ್ಲಿ ಗಮನ ಸೆಳೆಯಲಾಗಿದೆ. 

ಅಷ್ಟೇ ಅಲ್ಲದೆ, ಅವರು ಬಳಸಿದ್ದ ಹೆಲಿಕಾಪ್ಟರ್‌ ಕೂಡ ಕನಿಷ್ಠ ಅಗತ್ಯತೆಗಳಿಂದ ಕೂಡಿತ್ತು ಎಂಬ ವಿಚಾರ ಗೌಪ್ಯ ಪತ್ರದಿಂದ ತಿಳಿದು ಬಂದಿದೆ. ರಾಜ್ಯ ಗುಪ್ತಚರ ದಳದ ಹೆಚ್ಚುವರಿ ನಿರ್ದೇಶಕರು ಬರೆದಿರುವ ಪತ್ರ ಆಧರಿಸಿ ಲೋಕೋಪಯೋಗಿ ಇಲಾಖೆ ಸೆಪ್ಟಂಬರ್‌ನಲ್ಲಿಯೇ ಸರ್ಕಾ​ರಕ್ಕೆ ವರದಿ ಸಲ್ಲಿಸಿದೆ. ಆದರೆ ವರದಿ ಆಧರಿಸಿ ರಾಜ್ಯ ಸರ್ಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಗೊತ್ತಾಗಿದೆ.

ಮುಖ್ಯಮಂತ್ರಿಗಳ ಸಚಿವಾಲಯದ ಕೋರಿಕೆ ಮೇರೆಗೆ ಖಾಸಗಿ ಏಜೆನ್ಸಿ ತನ್ನ ಬಳಿ ತಕ್ಷಣಕ್ಕೆ ಲಭ್ಯ ಇರುವ ಹೆಲಿಕಾಪ್ಟರ್‌ ಅನ್ನು ಕಳಿಸುತ್ತದೆ. ಆದರೆ ಹೆಲಿಕಾಪ್ಟರ್‌ ಒಂದೇ ಕಂಪನಿಯದ್ದಾಗಿರುವುದಿಲ್ಲ. ಪ್ರತಿ ಬಾರಿಯೂ ಬೇರೆ ಬೇರೆ ಕಂಪನಿಗಳ ಪೈಲಟ್‌ಗಳು ಬರುವ ಕಾರಣ, ಅವರ ಹಿನ್ನಲೆಯೂ ಗೊತ್ತಿರುವುದಿಲ್ಲ. ಹಾಗೆಯೇ ಹೆಲಿಕಾಪ್ಟರ್‌ನ ತಾಂತ್ರಿಕ ಗುಣಮಟ್ಟ, ಸುರಕ್ಷತೆ ಮತ್ತು ಭದ್ರತೆ ಬಗ್ಗೆ ಯಾವುದೇ ಖಾತ್ರಿಯೂ ಇಲ್ಲವಾಗಿದೆ. ಒಂದು ವೇಳೆ ದುರಂತ ಸಂಭವಿಸಿದಲ್ಲಿ ಯಾರು ಹೊಣೆ ಹೊತ್ತುಕೊಳ್ಳುತ್ತಾರೆ ಎಂಬ ಪ್ರಶ್ನೆಯೂ ಈಗ ಎದುರಾಗಿದೆ. 
‘ವೈಮಾನಿಕ ಪರಿಣತರನ್ನೊಳಗೊಂಡ ಪ್ರತ್ಯೇಕ ವಿಭಾಗ ತೆರೆದು ಮುಖ್ಯಮಂತ್ರಿ, ರಾಜ್ಯಪಾಲರ ಹೆಲಿಕಾಪ್ಟರ್‌ ಪ್ರಯಾಣ ಕುರಿತು ನಿರ್ವಹಣೆ ಮಾಡುವುದು ಅತ್ಯಗತ್ಯ. ವಿವಿಐಪಿಗಳ ಭದ್ರತೆ ದೃಷ್ಟಿಯಿಂದ ತಕ್ಷಣವೇ ಪ್ರತ್ಯೇಕ ವಿಭಾಗ ತೆರೆಯಬೇಕು,' ಎಂದು ನಾಗರಿಕ ವಿಮಾನಯಾನ ವಿಭಾಗದ ಕೇಂದ್ರ ನಿರ್ದೇಶಕರು(ಡಿಜಿಸಿಎ) ನೀಡಿದ್ದ ಸಲಹೆಯನ್ನು ರಾಜ್ಯ ಸರ್ಕಾರ ನಿರ್ಲಕ್ಷ್ಯಿಸಿರುವುದು ದಾಖಲೆಗಳಿಂದ ತಿಳಿದು ಬಂದಿದೆ. 

ಹೆಲಿಕಾಪ್ಟರ್‌'ಗಳ ಕುರಿತು ತಾಂತ್ರಿಕವಾಗಿ ಪರಿಣಿತರಲ್ಲದ ಕಾರಣ ಟೆಂಡರ್‌ ಸೇರಿದಂತೆ ಇನ್ನಿತರೆ ಕಾರ್ಯ ನಿರ್ವಹಿಸಲು ಆಗುವುದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸ್ಪಷ್ಟವಾಗಿ ಹಲವು ಬಾರಿ ಸರ್ಕಾರಕ್ಕೆ ತಿಳಿಸಿದೆ. ಆದರೂ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ಮಾತ್ರ ಇದುವರೆಗೂ ಪ್ರತ್ಯೇಕ ವಿಭಾಗ ತೆರೆಯುವ ಬಗ್ಗೆ ತೀರ್ಮಾನಿಸಿಲ್ಲ. ಜಾರ್ಖಂಡ್‌'ನಂತಹ ಚಿಕ್ಕ ರಾಜ್ಯ ಸೇರಿದಂತೆ ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಗಣ್ಯರ ಅಧಿಕೃತ ಉಪಯೋಗಕ್ಕೆ ಹೆಲಿಕಾಪ್ಟರ್‌ ಪಡೆಯಲು ಪ್ರತ್ಯೇಕವಾದ ವಿಭಾಗ ಹೊಂದಿದೆ. 

ಹೆಲಿಕಾಪ್ಟರ್‌ ನಿರ್ವಹಣೆ, ತಾಂತ್ರಿಕ ಅರ್ಹತೆ ಮತ್ತು ಈ ಕುರಿತು ಏಜೆನ್ಸಿಗಳೊಂದಿಗೆ ಸಮಾಲೋಚಿಸಿ ದರ ಸಂಧಾನ, ಸೂಕ್ತ ಭದ್ರತೆ ಒದಗಿಸುವ ಕುರಿತು ಬೆಂಗಳೂರಿನ ಜಕ್ಕೂರಿನಲ್ಲಿ​​ರುವ ವೈಮಾನಿಕ ತರಬೇತಿ ಶಾಲೆಯ ನಿರ್ದೇಶಕರು ಸಲ್ಲಿಸಿದ್ದ ಪ್ರಸ್ತಾವನೆ ಕಡೆ ಸರ್ಕಾರ ಕಣ್ಣೆತ್ತಿಯೂ ನೋಡಿಲ್ಲ. 

ನಿಯಮ ಮೀರಿದ್ದ ಪೈಲಟ್'ಗಳು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿದ್ದ ಹೆಲಿಕಾಪ್ಟರ್‌ನ್ನು ಚಲಾಯಿಸಿದ್ದ ಪೈಲಟ್‌ಗಳ ಪೈಕಿ ಶಿಲ್ಪಿ ಬಿಸ್ನಾಯ್‌ 467.02 ಗಂಟೆಗಳಷ್ಟೇ ಹಾರಾಟ ನಡೆಸಿದ ಅನುಭವ ಹೊಂದಿದ್ದರು. ಸಂಜಯ್‌ಕುಮಾರ್‌ ಅವರು ಕೇವಲ 15 ಗಂಟೆಗಳ ಹಾರಾಟ ಅನುಭವ ಹೊಂದಿದ್ದರು.

ಡಿಜಿಸಿಎ ಕೊಟ್ಟಿದ್ದ ಮಾರ್ಗಸೂಚಿಯಲ್ಲಿ ಏನಿತ್ತು?
* ವಿಐಪಿಗಳ ಹೆಲಿಕಾಪ್ಟರ್‌ನ್ನು ಪೈಲಟ್‌ ಕನಿಷ್ಠ 500 ಗಂಟೆಗಳ ಹಾರಾಟ ನಡೆಸಿರಬೇಕು
* ಏರ್‌'ಕ್ರಾಫ್ಟ್‌ ಮಾದರಿಯಲ್ಲಿ 75 ಗಂಟೆಗಳ ಅವಧಿವರೆಗೆ ಹಾರಾಟ ನಡೆಸಿರಬೇಕು
* ರಾತ್ರಿ ಹೊತ್ತು ಕನಿಷ್ಠ 10 ಗಂಟೆಗಳ ಹಾರಾಟ ನಡೆಸಿರುವ ಅನುಭವ ಇರಬೇಕು
* ಕಳೆದ 6 ತಿಂಗಳಿನಿಂದ ಕನಿಷ್ಠ 30 ಗಂಟೆಗಳವರೆಗೆ ಹಾರಾಟ ನಡೆಸಿರಬೇಕು

(ಕನ್ನಡಪ್ರಭ ವಾರ್ತೆ)