ಭದ್ರೆಯ ಒಡಲಿನಲ್ಲಿ 162.1 ಅಡಿ ನೀರು ಸಂಗ್ರಹವಾಗಿದೆ 20 ವರ್ಷಗಳ ನಂತರ ಜಲಾಶಯಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು
ಭದ್ರಾವತಿ[ಜು.13]: ಇಲ್ಲಿನ ಭದ್ರಾ ಜಲಾಶಯದ ನೀರಿನ ಮಟ್ಟ ಕಳೆದ ಬಾರಿಗಿಂತ ಸುಮಾರು 37 ಅಡಿ ಏರಿಕೆಯಾಗಿದ್ದು, ಇದೀಗ ಸಂಗ್ರಹ ಆಗಿರುವ ನೀರಿಗೆ ದಿನ ಕಳೆದಂತೆ ಬೇಡಿಕೆ ಹೆಚ್ಚಾಗುತ್ತಿದೆ.
ಒಂದೆಡೆ ಭದ್ರೆ ಒಡಲು ತುಂಬುತ್ತಿದೆ. ಮತ್ತೊಂದೆಡೆ ಮುಂಗಾರು ಬೆಳೆಗೆ ನೀರಿನ ಬೇಡಿಕೆ ಹೆಚ್ಚುತ್ತಿದೆ. ಒಟ್ಟು ಗರಿಷ್ಠ 186 ಅಡಿ ಎತ್ತರದ ಜಲಾಶಯದಲ್ಲಿ ಗುರುವಾರ 162.1 ಅಡಿ ನೀರು ಸಂಗ್ರಹವಾಗಿದೆ. ಕಳೆದ ಬಾರಿ 125.1 ಅಡಿ ನೀರು ಸಂಗ್ರಹವಾಗಿತ್ತು. ಕಳೆದ 5-6 ದಿನಗಳಿಂದ ಜಲಾಶಯದ ಸುತ್ತಮುತ್ತ ಮಳೆಯಾಗುತ್ತಿದೆ. ಜಲಾಶಯಕ್ಕೆ ಹರಿದು ಬರುತ್ತಿರುವ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಸುಮಾರು 20 ವರ್ಷಗಳ ನಂತರ ಜಲಾಶಯಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಇದೆ ರೀತಿ ಮಳೆಯಾದಲ್ಲಿ ಜಲಾಶಯ ಶೀಘ್ರವಾಗಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಜಲಾಶಯ ಪೂರ್ಣ ಭರ್ತಿಯಾಗಲು ಇನ್ನೂ ಸುಮಾರು 24 ಅಡಿ ನೀರು ಸಂಗ್ರಹವಾಗಬೇಕಾಗಿದೆ.
ಆದರೆ ಕಳೆದ ಹಲವಾರು ವರ್ಷಗಳಿಂದ ಸರಿಯಾಗಿ ಮಳೆಯಾಗದೆ ಸಂಕಷ್ಟದಲ್ಲಿದ್ದ ರೈತರು ಈ ಬಾರಿ ಮುಂಗಾರು ಬೆಳೆ ಬೆಳೆಯಲು ನಿರ್ಧರಿಸಿದ್ದಾರೆ. ಇದರಿಂದಾಗಿ ಭದ್ರಾ ಜಲಾಶಯ ವ್ಯಾಪ್ತಿಯ ರೈತರು ನೀರು ಹರಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ನಡುವೆ ಭದ್ರಾ ಜಲಾಶಯ ಎಡ ಮತ್ತು ಬಲದಂಡೆ ನಾಲೆಗಳ ಕೊನೆಯ ಭಾಗದ ರೈತರು ಸಹ ಮುಂಗಾರು ಬೆಳೆಗಾಗಿ ನೀರು ಹರಿಸಲು ಬೇಡಿಕೆ ಮುಂದಿಟ್ಟಿದ್ದಾರೆ. ಈಗಾಗಲೇ ದಾವಣಗೆರೆ, ಚಿತ್ರದುರ್ಗ ವ್ಯಾಪ್ತಿಯ ರೈತರು ಆ ಭಾಗದ ಜನಪ್ರತಿನಿಧಿಗಳ ಮೂಲಕ ನೀರಾವರಿ ಸಚಿವರಿಗೆ ಮನವಿ ಮಾಡಿದ್ದಾರೆ.
ನೀರು ಹರಿಸುವುದೇ ದೊಡ್ಡ ಸವಾಲು
ಭದ್ರಾ ಜಲಾಶಯದ ಎಡ ಮತ್ತು ಬಲದಂಡೆ ನಾಲೆಗಳ ಕೊನೆಯ ಭಾಗದ ರೈತರಿಗೆ ನೀರು ಹರಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ನಾಲೆಯುದ್ದಕ್ಕೂ ಸೋರಿಕೆ, ಅಕ್ರಮ ನೀರಿನ ಸಂಪರ್ಕ, ಹೂಳು ತುಂಬಿರುವುದು ಇತ್ಯಾದಿ ಕಾರಣಗಳಿಂದಾಗಿ ಕೊನೆಯ ಭಾಗದ ರೈತರಿಗೆ ಜಲಾಶಯದ ನೀರು ತಲುಪುವುದು ಕಷ್ಟವಾಗುತ್ತಿದೆ. ಅದರಲ್ಲೂ ಬೇಸಿಗೆಯಲ್ಲಿ ನೀರು ತಲುಪುವುದೇ ಇಲ್ಲ. ಇದರಿಂದಾಗಿ ಕೊನೆಯ ಭಾಗದ ರೈತರ ಸಂಕಷ್ಟಕ್ಕೆ ಇಂದಿಗೂ ಮುಕ್ತಿ ಸಿಕ್ಕಿಲ್ಲ.
ಬೇಸಿಗೆಯಲ್ಲಿ ನೀರಿನ ಹಾಹಾಕಾರ
ಬೇಸಿಗೆಯಲ್ಲಿ ವಿದ್ಯುತ್, ಕೈಗಾರಿಕೆ ಸೇರಿದಂತೆ ವಾಣಿಜ್ಯ ಉದ್ದೇಶಗಳಿಗೆ, ಕುಡಿಯುವ ನೀರಿಗೆ ಅಗತ್ಯವಿರುವಷ್ಟು ನೀರು ಸಂಗ್ರಹವಿದ್ದರೂ ಕೆಲವು ಬಾರಿ ತೀವ್ರ
ಬೇಸಿಗೆಯಿಂದಾಗಿ ನೀರಿಗಾಗಿ ಹಾಹಾಕಾರ ಎದುರಾಗುತ್ತಿದೆ. ಅಲ್ಲದೆ, ಪ್ರತಿವರ್ಷ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಮುಂಗಾರು ಬೆಳೆಗೆ ನೀರು ಹರಿಸುವ ಭರದಲ್ಲಿ ಅಧಿಕಾರಿಗಳು ಎಡವಿದರೆ ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ ಎಂಬುದು ನೀರಾವರಿ ತಜ್ಞರ ಅಭಿಪ್ರಾಯ.
ಮುಂಗಾರು ಬೆಳೆಗೆ 27.73 ಟಿಎಂಸಿ ನೀರು ಬಿಡುಗಡೆ
ಈ ಬಾರಿ ಮುಂಗಾರು ಬೆಳೆಗೆ ಭದ್ರಾ ಜಲಾಶಯದಿಂದ ಎಡ ಮತ್ತು ಬಲ ದಂಡೆ ನಾಲೆಗಳಿಗೆ ಒಟ್ಟು 27.73 ಟಿಎಂಸಿ ನೀರುಹರಿಸಲು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ನಿರ್ಧರಿಸಿದೆ. ಬಲದಂಡೆ ನಾಲೆಯಲ್ಲಿ ಜುಲೈ 12ರಿಂದ ಅಕ್ಟೋಬರ್ 19ರವರೆಗೆ ಒಟ್ಟು 100 ದಿನ ಒಟ್ಟು 22.90 ಟಿಎಂಸಿ ಹಾಗೂ ಎಡದಂಡೆ ನಾಲೆಯಲ್ಲಿ ಒಟ್ಟು 3.11 ಟಿಎಂಸಿ, ಗೊಂದಿ ಹಾಗೂ ಇತರೆ ನಾಲೆಗಳಲ್ಲಿ 1.72 ಟಿಎಂಸಿ ನೀರು ಹರಿಸಲು ತೀರ್ಮಾ ನಸಲಾಗಿದೆ.
ಅಧ್ಯಕ್ಷರಿಲ್ಲದ ಕಾಡಾ
ರೈತರಿಗೆ ಸೂಕ್ತ ನ್ಯಾಯ ಒದಗಿಸಿ ಕೊಡುವಲ್ಲಿ ಸಹಕಾರಿ ಆಗಿರುವ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿಗೆ ಇನ್ನೂ ಅಧ್ಯಕ್ಷರ ನೇಮಕವಾಗಿಲ್ಲ. ಪ್ರಸ್ತುತ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದು, ಇನ್ನೂ ನಿಗಮ- ಮಂಡಳಿಗಳಿಗೆ ಅಧ್ಯಕ್ಷರ ನೇಮಕ ನಡೆದಿಲ್ಲ. ಮಲೆನಾಡಿನ ಭಾಗದವರಿಗೆ ಅಧ್ಯಕ್ಷ ಸ್ಥಾನ ಲಭಿಸಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂಬುದು ಈ ಭಾಗದ ರೈತರ ಆಶಯ.
ವರದಿ: ಅನಂತಕುಮಾರ್
