ಬೆಂಗಳೂರು[ಮೇ.21]: ಕೊಡಗು, ಚಾಮರಾಜನಗರ ಹಾಗೂ ಹಾಸನದಲ್ಲಿ ಮೇ 24 ಮತ್ತು 25ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮೇಲ್ಮೈ ಸುಳಿಗಾಳಿ ಹಾಗೂ ಗಾಳಿಯ ಒತ್ತಡ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಒಳನಾಡು, ಮಲೆನಾಡು, ಕರಾವಳಿ ಹಾಗೂ ಉತ್ತರ ಒಳನಾಡು ಭಾಗದ ಕೆಲವಡೆ ಮಳೆಯಾಗುತ್ತಿದೆ. ಮೇ 24 ಮತ್ತು 25 ರಂದು ಕೊಡಗು, ಚಿಕ್ಕಮಗಳೂರು, ಹಾಸನ, ಚಾಮರಾಜನಗರ ಸೇರಿದಂತೆ ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಕೇವಲ ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಆಗುತ್ತಿದ್ದ ಮಳೆ ಇದೀಗ ಉತ್ತರ ಒಳನಾಡು ಹಾಗೂ ಮಧ್ಯ ಕರ್ನಾಟಕದ ಭಾಗಕ್ಕೂ ವ್ಯಾಪಿಸಿದೆ. ಸೋಮವಾರ ಹಾಸನ, ಕೊಡಗು, ತುಮಕೂರು, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ದಾವಣಗೆರೆ, ದಕ್ಷಿಣ ಕನ್ನಡ, ವಿಜಯಪುರ, ಗದಗ, ಧಾರವಾಡ, ಮಂಡ್ಯ, ಮೈಸೂರು, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾದ ವರದಿಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.

ಮುಂದುವರಿದ ಬಿಸಿಗಾಳಿ:

ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಬಿಸಿಗಾಳಿಯ ಪ್ರಭಾವ ಮುಂದುವರೆದಿದ್ದು, ರಾಯಚೂರು, ಬೀದರ್‌, ವಿಜಯಪುರ, ಕಲಬುರಗಿ, ಬಾಗಲಕೋಟೆ ಜಿಲ್ಲೆಯ ವಿವಿಧ ಭಾಗದಲ್ಲಿ ಬಿಸಿಗಾಳಿ ಬೀಸಿದ ವರದಿಯಾಗಿದೆ. ರಾಜ್ಯದ ಅಲ್ಲಲ್ಲಿ ಮಳೆಯಾದರೂ ಉಷ್ಣಾಂಶದ ಪ್ರಮಾಣ ಕಡಿಮೆ ಆಗಿಲ್ಲ. ತಿಂಗಳಾಂತ್ಯದವರೆಗೆ ಇದೇ ರೀತಿ ಮುಂದುವರೆಯಲಿದೆ. ರಾಜ್ಯದಲ್ಲಿ ವ್ಯಾಪಕವಾಗಿ ಮಳೆಯಾದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಉಷ್ಣಾಂಶ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಸುನೀಲ್‌ ಗವಾಸ್ಕರ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.