ಕೊಡೇಕಲ್‌/ಆಲಮಟ್ಟಿ [ಜು.29]:  ಮಹಾರಾಷ್ಟ್ರದ ಪಶ್ಚಿಮ ಘಟ್ಟಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ವಿಜಯಪುರದ ಆಲಮಟ್ಟಿ ಬಳಿಕ ಈಗ ಯಾದಗಿರಿಯ ಬಸವಸಾಗರ ಜಲಾಶಯ ಕೂಡ ಈ ವರ್ಷ ಇದೇ ಮೊದಲ ಬಾರಿಗೆ ಭರ್ತಿಯಾಗಿದ್ದು, ಎರಡೂ ಜಲಾಶಯಗಳಿಂದ ಭಾನುವಾರ ಭಾರೀ ಪ್ರಮಾಣದಲ್ಲಿ ಕೃಷ್ಣಾನದಿಗೆ ನೀರು ಹರಿಯಬಿಡಲಾಗುತ್ತಿದೆ.

ಆಲಮಟ್ಟಿ ಜಲಾಶಯದಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಾದ ಕಾರಣ, ಜಲಾಶಯದ 26 ಗೇಟ್‌ಗಳ ಪೈಕಿ ಇದೇ ಮೊದಲ ಬಾರಿಗೆ 12 ಗೇಟ್‌ಗಳನ್ನು ತೆರೆದು ನೀರು ಹೊರಬಿಡಲಾಗಿದೆ. 1,01,780 ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ. ಬೆಳಗ್ಗೆ 6 ಗೇಟ್‌ಗಳ ಮೂಲಕ ನಂತರ ಸಂಜೆ ಒಳಹರಿವು ಹೆಚ್ಚಿದ್ದರಿಂದ ಎಲ್ಲ 12 ಗೇಟ್‌ಗಳ ಮೂಲಕ ನೀರು ಹೊರಬಿಡಲಾಯಿತು. 519.60 ಮೀ. ಗರಿಷ್ಠ ಎತ್ತರದ ಆಲಮಟ್ಟಿಜಲಾಶಯದಲ್ಲಿ 519.40 ಮೀ.ವರೆಗೆ ನೀರು ಸಂಗ್ರಹವಾಗಿದೆ. ಇತ್ತೀಚೆಗಷ್ಟೇ ಆಲಮಟ್ಟಿಡ್ಯಾಂ ಭರ್ತಿಯಾಗಿತ್ತು.

ಇದೇ ಮೊದಲು ಭರ್ತಿ:  ಏತನ್ಮಧ್ಯೆ, ಆಲಮಟ್ಟಿಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಹೊರ ಬಿಡುತ್ತಿರುವ ಹಿನ್ನೆಲೆಯಲ್ಲಿ ಯಾದಗಿರಿಯ ಬಸವಸಾಗರ ಜಲಾಶಯ ಈ ವರ್ಷ ಇದೇ ಮೊದಲ ಬಾರಿಗೆ ಭರ್ತಿಯಾಗಿದ್ದು, ಸಂಜೆ 4 ಗಂಟೆಗೆ ಅಧಿಕಾರಿಗಳು ಕ್ರಸ್ಟ್‌ಗೇಟ್‌ಗಳಿಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಿ ಬಾಗಿನ ಸಮರ್ಪಿಸಿದರು. ಬಳಿಕ ಜಲಾಶಯದ 12 ಮುಖ್ಯ ಕ್ರಸ್ಟ್‌ಗೇಟ್‌ಗಳ ಮುಖಾಂತರ 67,800 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಬಿಡಲಾಯಿತು. 492.252 ಮೀ. ಗರಿಷ್ಠ ಸಾಮರ್ಥ್ಯದ ಬಸವಸಾಗರ ಡ್ಯಾಂನಲ್ಲಿ ಈಗ 491.50 ಮೀ. ನೀರು ಸಂಗ್ರಹವಿದೆ.

ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿಯಬಿಡುತ್ತಿರುವ ಹಿನ್ನೆಲೆಯಲ್ಲಿ ನದಿಪಾತ್ರದ ಜನರಿಗೆ ಕಟ್ಟೆಚ್ಚರದಿಂದ ಇರುವಂತೆ ಸೂಚಿಸಲಾಗಿದೆ ಎಂದು ಇದೇ ವೇಳೆ ಅಧಿಕಾರಿಗಳು ತಿಳಿಸಿದರು.