ದೇಶದ ಕೆಲ ನಗರಗಳಲ್ಲಿ ಭಾರೀ ಮಳೆ ಸುರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಇದೀಗ ಮತ್ತೊಂದು ನಗರದಲ್ಲಿ ಭಾರೀ ಮಳೆ ಸುರಿದು ಆತಂಕ ಸೃಷ್ಟಿ ಮಾಡಿದೆ.
ದಿಲ್ಲಿ : ಕರ್ನಾಟಕ ಹಾಗೂ ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಇದೀಗ ದೇಶದ ಮತ್ತೊಂದು ನಗರಕ್ಕೆ ಗಂಡಾಂತರ ಎದುರಾಗಿದೆ. ದಿಲ್ಲಿಯ ಹಲವೆಡೆ ಭಾರಿ ಮಳೆ ಸುರಿಯುತ್ತಿದೆ. ಇದರಿಂದ ಸಂಪೂರ್ಣ ಜನಜೀವನ ಅಸ್ತವ್ಯಸ್ತವಾಗಿದೆ.
ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ತಗ್ಗು ಪ್ರದೇಶಗಳು ನೀರಿನಿಂದಾವೃತವಾಗಿದ್ದು ಜನರು ಪರದಾಡುವಂತಾಗಿದೆ. ನಗರದ ಹಲವು ಪ್ರದೇಶಗಳಾದ ಆರ್ ಕೆ ಪುರಂ, ಲಕ್ಷ್ಮೀ ನಗರ, ಮೋತಿ ನಗರ್ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತಿದೆ.
ಹಲವು ಪ್ರದೇಶಗಳಿಗೆ ದಿಲ್ಲಿ ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ.
ಹಲವು ಪ್ರದೇಶಗಳಲ್ಲಿ ಮಳೆಯಿಂದ ಭಾರೀ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ವಾಹನಗಳು ಮುಂದೆ ಚಲಿಸಲಾಗದೇ ನೀರಿನಲ್ಲಿ ಮುಳುಗುವಂತಾಗಿದೆ. ಸಾರ್ವಜನಿಕ ಸಾರಿಗೆಯೂ ಕೂಡ ಭಾರೀ ಮಳೆಯಿಂದ ಸಮಸ್ಯೆ ಎದುರಿಸುವಂತಾಗಿದೆ.
