ಭಾರತದ ವಿವಿಧ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಅವಾಂತರ ಸೃಷ್ಟಿಸುತ್ತಿದೆ. ಇದೀಗ ಈ ಸರದಿ ಹಿಮಾಚಲ ಪ್ರದೇಶದ್ದಾಗಿದ್ದು, ಇಲ್ಲಿ ಅತೀ ಹೆಚ್ಚು ಮಳೆ ಸುರಿಯುತ್ತಿದ್ದು ಜನಜೀವನ ತತ್ತರಿಸಿದೆ. 

ಕುಲ್ಲು :  ಭಾರತದಲ್ಲಿ ಹೆಚ್ಚುತ್ತಿರುವ ನಗರೀಕರಣ, ಕೈಗಾರಿಕೆಗಳಿಂದ ದಿನದಿನವೂ ಭಾರತದಲ್ಲಿ ಉಷ್ಣಾಂಶ ಪ್ರಮಾಣ ಏರಿಕೆಯಾಗುತ್ತಿದೆ. ಇದರಿಂದ ಹಿಮವು ಹೆಚ್ಚಿನ ಪ್ರಮಾಣದಲ್ಲಿ ಕರಗುತ್ತಿರುವುದರ ಜೊತೆಗೆ ಒಂದೊಂದೆ ನಗರಗಳು ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಈ ಬಗ್ಗೆ ಕೆಲ ದಿನಗಳ ಹಿಂದೆ ನಾಸಾ ವರದಿಯೊಂದನ್ನು ನೀಡಿದ್ದು, ಭಾರತದ ಅನೇಕ ನಗರಗಳು ಪ್ರವಾಹದ ಆತಂಕದಲ್ಲಿವೆ ಎಂದು ಎಚ್ಚರಿಕೆ ನೀಡಿತ್ತು. ಅದೀಗ ನಿಜವಾದಂತೆ ಎನಿಸುತ್ತಿದೆ. 

ಹಿಮಾಚಲ ಪ್ರದೇಶದದಲ್ಲಿ ಸೋಮವಾರ ಭಾರೀ ಮಳೆ ಸುರಿದಿದ್ದು, ಕುಲ್ಲುವಿನಲ್ಲಿ ಹವಾಮಾನ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಕಾಂಗ್ರಾ ಜಿಲ್ಲೆಯಲ್ಲಿ ನದಿಗಳು ಉಕ್ಕೇರಿ ಹರಿಯುತ್ತಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. 

ಹಿಮಾಚಲ ಪ್ರದೇಶದಾದ್ಯಂತ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಲ್ಲಿನ ವಿವಿಧ ಪ್ರದೇಶಗಳಲ್ಲಿ ಈಗಾಗಲೇ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗಿದ್ದು, ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಿವೆ. 

ಭಾರೀ ಮಳೆಯಿಂದ ಜನಜೀವನ ಸಂಪೂರ್ಣವಾಗಿ ತತ್ತರಿಸಿದೆ. ಅತ್ಯಧಿಕ ಮಳೆ ಹಾಗೂ ಮಂಜು ಸುರಿಯುತ್ತಿರುವ ಪರಿಣಾಮ ಉಷ್ಣಾಂಶ ಅತ್ಯಂತ ಕಡಿಮೆ ಪ್ರಮಾಣಕ್ಕೆ ಕುಸಿದಿದೆ.

ಅವ್ಯವಸ್ಥಿತವಾಗಿ ನಿರ್ಮಾಣಗೊಂಡ ಒಳಚರಂಡಿ ವ್ಯವಸ್ಥೆ ಪರಿಣಾಮ ನಗರ ಪ್ರದೇಶಗಳು ಪ್ರವಾಹಕ್ಕೆ ತುತ್ತಾಗುತ್ತವೆ. ಈಗಾಗಲೇ ಜಾಗತಿಕ ತಾಪಮಾನ ಅಧಿಕವಾಗಿ ಹಿಮ ಕರಗುತ್ತಿರುವುದರಿಂದ ಸಮುದ್ರದ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಅಲ್ಲದೇ ಈಗಾಗಲೇ ಹಲವು ನಗರಗಳು ಭೀಕರ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಲೇ ಹೋಗುತ್ತಿವೆ. ಇದೀಗ ಈ ಸರದಿ ಹಿಮಾಚಲ ಪ್ರದೇಶದ್ದಾಗಿದೆ.

Scroll to load tweet…