ಕಾರವಾರ (ಆ. 07): ಭಾರೀ ಮಳೆ, ಬಿರುಗಾಳಿಯ ಆರ್ಭಟಕ್ಕೆ ಉತ್ತರ ಕನ್ನಡ ಜಿಲ್ಲೆ ಅಕ್ಷರಶಃ ತತ್ತರಿಸಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಕರಾವಳಿ ಪ್ರದೇಶ ಮತ್ತು ಘಟ್ಟದ ಮೇಲಿನ ಪ್ರದೇಶದ ನಡುವೆ ಸಂಪರ್ಕ ಕಡಿತಗೊಂಡಿದೆ. ಹಲವಾರು ಗ್ರಾಮಗಳಿಗೆ ಜಲ ದಿಗ್ಬಂಧನ ಉಂಟಾಗಿದೆ. ಹೊನ್ನಾವರ ತಾಲೂಕಿನ ತೊಳಸಾಣಿಯಲ್ಲಿ ಮರ ಮುರಿದು ಬಿದ್ದು ವ್ಯಕ್ತಿಯೋರ್ವರು ಮೃತರಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 50 ನಿರಾಶ್ರಿತರ ಕೇಂದ್ರ ತೆರೆಯಲಾಗಿದೆ. 3000ಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದಾರೆ. ಹೊನ್ನಾವರ ತಾಲೂಕಿನಲ್ಲಿ 15, ಕುಮಟಾ ತಾಲೂಕಿನಲ್ಲಿ 3, ಕಾರವಾರ ತಾಲೂಕಿನಲ್ಲಿ 16, ಅಂಕೋಲಾ ತಾಲೂಕಿನಲ್ಲಿ 12, ಹಳಿಯಾಳ ತಾಲೂಕಿನಲ್ಲಿ 1, ಯಲ್ಲಾಪುರ ತಾಲೂಕಿನಲ್ಲಿ 1, ಮುಂಡಗೋಡ ತಾಲೂಕಿನಲ್ಲಿ 2, ಸಿದ್ದಾಪುರ ತಾಲೂಕಿನಲ್ಲಿ ಸೋವಿನಕೊಪ್ಪ, ಅಕ್ಕುಂಜಿಗಳಲ್ಲಿ ನಿರಾಶ್ರಿತ ಕೇಂದ್ರ ತೆರೆಯಲಾಗಿದೆ. ಜಿಲ್ಲೆಯಲ್ಲಿ ಸುಮಾರು 1500ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಕದ್ರಾ, ಕೊಡಸಳ್ಳಿ, ಬೊಮ್ಮನಹಳ್ಳಿ ಜಲಾಶಯಗಳು ತುಂಬಿದ್ದು, ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದ ಕದ್ರಾ, ಮಲ್ಲಾಪುರ ಸೇರಿ ಹಲವು ಪ್ರದೇಶ ಜಲಾವೃತವಾಗಿದೆ.

ಜಿಲ್ಲೆಯ ಪ್ರಮುಖ ನದಿಗಳಾದ ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ, ವೆಂಕಟಾಪುರ ನದಿಗಳು ಅಪಾಯ ಮಟ್ಟಮೀರಿ ಹರಿಯುತ್ತಿದೆ. ಕುಮಟಾದಿಂದ ಶಿರಸಿಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಕತಗಾಲ್‌ ಸಮೀಪ ಚಂಡಿಕಾ ನದಿಯ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿದೆ. ಕುಮಟಾ- ಶಿರಸಿ, ಅಂಕೋಲಾ- ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತವಾಗಿದೆ. ಕಾರವಾರ ತಾಲೂಕಿನ ಸಿದ್ದರ- ಕಾರ್ಗೆಜೂಗ್‌ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತವಾಗಿದೆ.

ಮುರಿದ ತೂಗು ಸೇತುವೆ:

ಡೊಂಗ್ರಿ ಸುಂಕಸಾಳ ಜನರ ಬವಣೆಯನ್ನು ತಿಳಿದ ಸರ್ಕಾರ ಎರಡು ವರ್ಷಗಳ ಹಿಂದೆ .1.40 ಕೋಟಿ ವೆಚ್ಚದಲ್ಲಿ ತೂಗು ಸೇತುವೆ ನಿರ್ಮಿಸಿತ್ತು. ಗಂಗಾವಳಿ ನೀರಿನ ಆರ್ಭಟಕ್ಕೆ ಸೇತುವೆ ಮುರಿದು ಬಿದ್ದು ಸುಂಕಸಾಳ ಡೊಂಗ್ರಿ ಸಂಪರ್ಕ ಕಡಿತಗೊಂಡಿದೆ. ಮೀನುಗಾರ ಯುವಕರು ಜೀವದ ಹಂಗು ತೊರೆದು ರಭಸವಾಗಿ ಹರಿಯುವ ಗಂಗಾವಳಿ ನದಿ ನೀರನ್ನು ಲೆಕ್ಕಿಸದೆ ದೋಣಿ ಚಲಾಯಿಸಿ ನಡುಗಡ್ಡೆಯಲ್ಲಿ ಸಿಲುಕಿರುವ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುವಲ್ಲಿ ಸಫಲರಾಗಿದ್ದಾರೆ.

ಸಿದ್ದಾಪುರದಲ್ಲಿ ಮಳೆ ಆರ್ಭಟ:

ಸಿದ್ದಾಪುರದಲ್ಲಿ ಮಂಗಳವಾರ ಒಂದೇ ದಿನ 28 ಸೆಂ.ಮೀ. ಮಳೆಯಾಗಿದೆ. ಸೋವಿನಕೊಪ್ಪ ಸಮೀಪದ ಹೆಮ್ಮನಬೈಲ್‌ನಲ್ಲಿ 6 ಮನೆಗಳು ಜಲಾವೃತ ಆಗಿದ್ದು, ಇಲ್ಲಿನ 30 ಜನರನ್ನು, ಕಲ್ಯಾಣಪುರದ 26 ಜನರನ್ನು, 7 ಜಾನುವಾರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ನರಮುಂಡಿಗೆ, ಐಗೋಡ, ಕೋಡಿಗದ್ದೆ ಗ್ರಾಮಗಳ ಕೃಷಿಭೂಮಿ ಜಲಾವೃತ ಆಗಿದೆ. ವಿವಿಧೆಡೆ ಮರ ಬಿದ್ದು ರಸ್ತೆ ಸಂಚಾರ ವ್ಯತ್ಯಯವಾಗಿದೆ.

ಸಂತ್ರಸ್ತರಾದ ಉಪವಿಭಾಗಾಧಿಕಾರಿ

ನೆರೆ ಪರಿಶೀಲನೆಗೆ ತೆರಳಿದ ಅಂಕೋಲಾ ಉಪ ವಿಭಾಗಾಧಿಕಾರಿ ಪ್ರೀತಿ ಗೆಹ್ಲೋಟ್‌ ಪರಿಶೀಲನೆಗೆ ತೆರಳಿದಾಗ ಸುಂಕಸಾಳದ ಮೂಲೆಮನೆ ಬಳಿ ಜಲದಿಗ್ಬಂಧನಕ್ಕೆ ಒಳಗಾಗಿದ್ದರು. ತಕ್ಷಣ ಅವರ ಜೊತೆಯಲ್ಲಿಯೇ ಇದ್ದ ಪೊಲೀಸರು ಅವರನ್ನು ರಕ್ಷಿಸಿದರು.

81 ವರ್ಷದ ಬಳಿಕ ದೇಗುಲ ಜಲಾವೃತ:

ಶಿರಸಿ ಬಳಿ ಅಘನಾಶಿನಿ ನದಿಯಂಚಿನ ಸರಕುಳಿ ಬಳಿಯ ಮಹಿಷಾಸುರ ಮರ್ಧಿನಿ ದೇವಾಲಯ 1981 ರ ಬಳಿಕ ಮೊದಲ ಬಾರಿ ಜಲಾವೃವಾಗಿದೆ. ಪುರಾಣ ಪ್ರಸಿದ್ಧ ಹಾಗೂ ಪ್ರೇಕ್ಷಣೀಯ ತಾಣವಾದ ಯಾಣ ದೇವಾಲಯದ ಒಂದು ಪಾಶ್ರ್ವದಲ್ಲಿ ಭೂಕುಸಿತ ಉಂಟಾಗಿದೆ.